‘ಇದು ಬುದ್ಧಿವಂತರಿಗೆ ಅರ್ಪಣೆ. ದಡ್ಡರು ಈ ಸಿನಿಮಾ ನೋಡುವಂತಿಲ್ಲ…!
-ಇದು ಯಾರೋ ಸ್ಟಾರ್ ಡೈರೆಕ್ಟರ್ ಆಗಲಿ ಅಥವಾ ಸ್ಟಾರ್ ನಟರಾಗಲಿ ಹೇಳಿದ ಮಾತಲ್ಲ. ಈಗಷ್ಟೇ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿರುವ ಅದರಲ್ಲೂ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿರುವ ನಿರ್ದೇಶಕರೊಬ್ಬರು ಹೇಳಿದ ಮಾತು. ನಿಜಕ್ಕೂ ಅದು ಬುದ್ಧಿವಂತರಿಗೆ ಅರ್ಪಣೆಯಾಗುವ ಚಿತ್ರನಾ? ದಡ್ಡರು ಸಿನಿಮಾ ನೋಡುವಂತಿಲ್ಲವೇ? ಅದಕ್ಕೆ ಉತ್ತರ ಚಿತ್ರ ಬರುವವರೆಗೂ ಕಾಯಬೇಕು. ಅಂದಹಾಗೆ, ಆ ಚಿತ್ರದ ಹೆಸರು ‘ಆಡಿಸಿ ನೋಡು ಬೀಳಿಸಿ ನೋಡು ‘.
ಶೀರ್ಷಿಕೆ ಓದಿದ ಮೇಲೆ ‘ಕಸ್ತೂರಿ ನಿವಾಸ ‘ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’ ಚಿತ್ರದ ಜನಪ್ರಿಯ ಹಾಡು ನೆನಪಿಗೆ ಬರದೇ ಇರದು. ಅಂತಹ ಒಳ್ಳೆಯ ಶೀರ್ಷಿಕೆಯ ಚಿತ್ರವನ್ನು ದಡ್ಡರು ನೋಡುವಂತಿಲ್ಲ ಅಂತ ಹೇಳಿದ ನಿರ್ದೇಶಕರ ಹೆಸರು ಮನೋಜ್ ಶ್ರೀಹರಿ. ಇವರಿಗಿದು ಮೊದಲ ಚಿತ್ರ. ಅಷ್ಟಕ್ಕೂ ಅವರು ಹಾಗೆ ಹೇಳಿದ್ದು ಯಾಕೆ? ಇದಕ್ಕೆ ಉತ್ತರಿಸಿದ ನಿರ್ದೇಶಕರು, ‘ಇಲ್ಲಿ ಕಥೆಯೊಳಗೊಂದು ಕಥೆ ಇದೆ. ಸ್ಕ್ರೀನ್‌ಪ್ಲೇನಲ್ಲಿ ಮಲ್ಟಿ ಲೇಯರ್‌ಗಳಿವೆ. ತುಂಬಾ ಗಂಭೀರವಾಗಿದ್ದರೆ ಮಾತ್ರ ಚಿತ್ರ ಅರ್ಥವಾಗುತ್ತೆ. ಬುದ್ಧಿವಂತರಿಗೆ ಈ ಚಿತ್ರವನ್ನು ಅರ್ಪಿಸುತ್ತಿದ್ದೇನೆ. ದಡ್ಡರು ಈ ಚಿತ್ರ ನೋಡಬಾರದು ಅಂತ ಹೇಳ್ಳೋಕೆ ಕಾರಣವಿಷ್ಟೇ, ಇದು ಒಂದೇ ಸಲ ಅರ್ಥವಾಗದ ಚಿತ್ರ. ಅದರಲ್ಲೂ ಸ್ಕ್ರೀನ್‌ಪ್ಲೇ ಹೊಸ ರೀತಿಯಲ್ಲಿರುವುದರಿಂದ ದಡ್ಡರು ನೋಡಂಗಿಲ್ಲ ‘ ಎಂದರು ಅವರು. ಹಾಗಾದರೆ, ದಡ್ಡರು ಯಾರು? ಇದಕ್ಕೆ ಉತ್ತರಿಸಲು ತಡವರಿಸಿದ ಮನೋಜ್, ‘ಅದೇನೋ ಗೊತ್ತಿಲ್ಲ ಸರ್, ‘ಬುದ್ಧಿವಂತರಿಗೆ ಮಾತ್ರ ಈ ಚಿತ್ರ’ ಎಂದು ಬುದ್ಧಿವಂತರಂತೆ ಹೇಳಿಕೊಂಡರು. ‘ನಾನು ಉಪೇಂದ್ರ ಫ್ಯಾನ್. ನಾನು ಏಕಲವ್ಯ ಇದ್ದಂತೆ. ಅವರು ದಶರಥ ಇದ್ದಂಗೆ ಅಂತ ಒಂದೇ ಸ್ಪೀಡ್‌ನಲ್ಲಿ ಹೇಳುತ್ತಾ ಹೋದರು. ಅವರ ಮಾತಿನ ಸ್ಪೀಡ್‌ನಲ್ಲಿ ಉಪೇಂದ್ರ ಅವರನ್ನು ‘ದ್ರೋಣಾಚಾರ್ಯ’ ಎನ್ನುವ ಬದಲು ‘ದಶರಥ’ ಅಂತ ಹೇಳಿಬಿಟ್ಟರು.
‘ಹೋಗಲಿ, ನಿಮ್ ಸಿನ್ಮಾ ಕಥೆ ಏನು’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ನನಗೆ ಸಂಗೀತ ಗೊತ್ತು. ನಿರ್ದೇಶನದ ಮೇಲೆ ವಿಶ್ವಾಸವಿರಲ್ಲ. ಆಯ್ಯಪ್ಪ ಯಾತ್ರೆ ವೇಳೆ ನಿರ್ಮಾಪಕರು ಪರಿಚಯವಾಗಿದ್ದರು. ಅವರಿಗೆ ಈ ಕಥೆಯ ಒನ್‌ಲೈನ್ ಹೇಳಿದ್ದೆ . ಇಷ್ಟವಾಗಿ ಚಿತ್ರ ಮಾಡಿದ್ದಾರೆ. ಆಡಿಯನ್ಸ್‌ಗೆ ಗೊಂದಲವಾಗುವ ಚಿತ್ರವಿದು’ ಅಂತ ಹೇಳಿದರೇ ಹೊರತು, ಕಥೆಯ ಗುಟ್ಟು ಬಿಟ್ಟುಕೊಡಲಿಲ್ಲ.
ನಿರ್ಮಾಪಕ ಮನು ಅವರಿಗೆ ಇದು ಮೊದಲ ಚಿತ್ರ. ಕಮ್ಮಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಬಂದ ಅವರಿಗೆ ಚಿತ್ರ ಡಬ್ಬಲ್ ಬಜೆಟ್ ಆಗಿದೆಯಂತೆ. ಆಶಾಭಂಡಾರಿ ಚಿತ್ರದಲ್ಲಿ ನಾಯಕಿಯಾಗಿದ್ದು, ಅವರಿಲ್ಲಿ ಪತ್ರಕರ್ತೆಯಂತೆ. ಉಳಿದಂತೆ ಚಿತ್ರದಲ್ಲಿ ಸೋಮು, ಶಿವಪ್ರಸಾದ್, ಮೋಹನ್, ಆದರ್ಶ್, ಕಾವ್ಯಾ, ಯೋಗಿ, ಸುನೀಲ್, ಮಂಜುನಾಥ್ ಕೆಲಸ ಮಾಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತವಿದ್ದು, ಅವರ ‘ಹಾಡಿಯೋ’ ಆಡಿಯೋ ಸಂಸ್ಥೆ ಮೂಲಕ ಹಾಡುಗಳನ್ನು ಹೊರತರಲಾಗಿದೆ. ಗೂಗಲ್ ಲೆನ್ಸ್ ಮೂಲಕ ಕ್ಯು ಆರ್ ಕೋಡ್ ಕ್ಲಿಕ್ಕಿಸಿ ಹಾಡು ಕೇಳಬಹುದು. ಅಂದು ನೀನಾಸಂ ಸತೀಶ್ ಆಡಿಯೋ ಬಿಡುಗಡೆ ಮಾಡಿ, ‘ಹೊಸಬರು ಚಿತ್ರ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಸಿನಿಮಾಗೆ ಬಜೆಟ್ ಮುಖ್ಯ ಅಲ್ಲ. ಕಂಟೆಂಟ್ ಮುಖ್ಯ. ಒಳ್ಳೆಯ ಚಿತ್ರಕ್ಕೆ ಫಲ ಸಿಕ್ಕೇ ಸಿಗುತ್ತೆ ‘ ಎಂದರು ಸತೀಶ್.