Advertisement
ಆರ್ಥಿಕತೆಯಲ್ಲಿ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನಂಬಿಕೊಂಡಿದ್ದ ನೇಪಾಲಕ್ಕೆ ಕೋವಿಡ್-19 ದೊಡ್ಡ ಸಂಕಷ್ಟವನ್ನೇ ತಂದಿತು. ಪ್ರವಾಸಿಗರು ಬಂದರೂ ಸಂಕಷ್ಟ, ಬರದಿದ್ದರೂ ಸಂಕಷ್ಟ ಎಂಬ ಸ್ಥಿತಿ ಈ ದೇಶದ್ದಾಗಿತ್ತು. ಮೊದಲಾಗಿ ಅದು ಕೋವಿಡ್ ಏರಿಕೆಯನ್ನು ತಡೆಗಟ್ಟುವ ಉದ್ದೇಶವನ್ನೇ ಆಯ್ಕೆ ಮಾಡಿಕೊಂಡು ಮಾರ್ಚ್‌ನಲ್ಲಿ ಎವರೆಸ್ಟ್ ಪರ್ವತ ಚಾರಣವನ್ನು ನಿರ್ಬಂಧಿಸಿತ್ತು. ಚಿಕ್ಕ ರಾಷ್ಟ್ರವಾದ ನೇಪಾಲದಲ್ಲಿ ಈಗಾಗಲೇ 19,547 ಮಂದಿಗೆ ಕೋವಿಡ್ ತಗಲಿದ್ದು, 52 ಮಂದಿ ಸಾವನ್ನಪ್ಪಿದ್ದಾರೆ. 14,248 ಮಂದಿ ಗುಣಮುಖರಾಗಿದ್ದು, 5,247 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರ್ಚ್‌ನಿಂದಲೇ ನಿರ್ಬಂಧ ಹೇರಿದ್ದರಿಂದ ನೇಪಾಳಕ್ಕೆ ಮಿಲಿಯನ್ ಡಾಲರ್ ನಷ್ಟ ಉಂಟಾಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತ್ತು. ಅದಲ್ಲದೆ ಲಕ್ಷಾಂತರ ಶೆರ್ಪಾಗಳು, ಪ್ರವಾಸಿ ಗೈಡ್‌ಗಳು ಸಂಕಷ್ಟಕ್ಕೆ ಒಳಗಾದರು. ಇದೀಗ ಪರ್ವತಾರೋಹಿಗಳಿಗೆ ಮುಕ್ತವಾಗಿದ್ದರೂ ಆಗಸ್ಟ್ ಮಧ್ಯದ ವರೆಗೂ ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಹಾಗೆಯೇ ಮುಂದುವರಿಸಲಾಗುತ್ತದೆ. ಇದರಿಂದ ಪ್ರವಾಸಿಗರ ಸಂಖ್ಯೆ ತೀರಾ ಕುಸಿತ ಕಾಣಲಿದೆ ಎಂದು ರಾಜಧಾನಿ ಕಾಠ್ಮಂಡುವಿನ ಪ್ರವಾಸೋದ್ಯಮ ಸಂಘಟಕರಾದ ಆಂಗ್ ತ್ಸೆರಿಂಗ್ ಶೆರ್ಪಾ ತಿಳಿಸಿದ್ದಾರೆ. ಹೊಟೇಲ್‌ಗಳಿಗೂ ನಿಬಂಧನೆ
ಇಲ್ಲಿನ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳನ್ನು ನಿಬಂಧನೆಗಳೊಂದಿಗೆ ತೆರೆಯಲು ಅನುವು ಮಾಡಿಕೊಡಲಾಗುತ್ತದೆ. ಯಾವುದೇ ಸಮ್ಮೇಳನಗಳು, ಸೆಮಿನಾರ್‌ಗಳು, ಜಿಮ್‌ಗಳು, ಕ್ಯಾಸಿನೋಗಳಿಗೆ ಅನುಮತಿ ಇರುವುದಿಲ್ಲ ಎಂದು ನೇಪಾಲದ ಹೊಟೇಲ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಬಿನಾಯಕ್ ಶಾ ತಿಳಿಸಿದ್ದಾರೆ.