ನವದೆಹಲಿ/ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಮೇ 31ರಿಂದ ಜೂನ್ 3ರವರೆಗೆ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕಠ್ಮಂಡುವಿನ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ದ್ವಿಪಕ್ಷೀಯ ಸಂಬಂಧಗಳ ಕುರಿತು ಪ್ರಧಾನಿ ಮೋದಿ ಸೇರಿದಂತೆ ಉನ್ನತ ಮಟ್ಟದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.
ಈ ಭೇಟಿಯು “ನೇಪಾಳ ಮತ್ತು ಭಾರತದ ನಡುವಿನ ಹಳೆಯ, ಬಹುಮುಖಿ ಮತ್ತು ಸೌಹಾರ್ದ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ನೇಪಾಳದ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಮೂರನೇ ಬಾರಿಗೆ ನೇಪಾಳ ಪ್ರಧಾನಿ ಹುದ್ದೆ ಅಲಂಕರಿಸಿದ ಪುಷ್ಪ ಕಮಲ್ ದಹಾಲ್ ಅವರ ಮೊದಲ ವಿದೇಶಿ ಪ್ರವಾಸ ಇದಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಇತರ ಹಿರಿಯ ಭಾರತೀಯ ಅಧಿಕಾರಿಗಳನ್ನು ಸಹ ಭೇಟಿಯಾಗಲಿದ್ದಾರೆ.
2014ರ ನಂತರ ಭಾರತದ ಪ್ರಧಾನಿ ಮೋದಿ ನೇಪಾಳಕ್ಕೆ ಐದು ಬಾರಿ ಭೇಟಿ ನೀಡಿದ್ದಾರೆ. ಕೊನೆಯದಾಗಿ ಮೇ 2022 ರಲ್ಲಿ ಭೇಟಿ ನೀಡಿದ್ದರು.