ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಶುಕ್ರವಾರ ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ವಿಶೇಷವಾದ “ಉಡುಗೊರೆ” ಯನ್ನು ಕೊಟ್ಟಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಬಳಿಕ ನೇಪಾಳ ಪ್ರಧಾನಿ ಒಲಿ ಅವರು ಪ್ರಧಾನಿ ನರೇಂದ್ರ ಮೋದಿಗೆ “ರುದ್ರಾಕ್ಷಿ ಮಾಲೆ”ಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹಿಮಾಲಯ ಪ್ರದೇಶದಲ್ಲಿ ಬೆಳೆಯುವ ಪವಿತ್ರವಾದ ರುದ್ರಾಕ್ಷಿ ಬೀಜಗಳಿಂದ ಈ ರುದ್ರಾಕ್ಷಿ ಮಾಲೆಯನ್ನು ತಯಾರಿಸಲಾಗಿದೆ ಎಂದು ವರದಿ ತಿಳಿಸಿದೆ. ಹಿಂದೂಗಳು ರುದ್ರಾಕ್ಷಿಯನ್ನು ಪ್ರಾರ್ಥನೆ, ಪೂಜೆ ಸಲ್ಲಿಸುವ ಬಳಕೆ ಮಾಡುತ್ತಾರೆ. ಅಲ್ಲದೇ ರುದ್ರಾಕ್ಷಿಗೆ ವಿಶೇಷವಾದ ಸ್ಥಾನವಿದೆ.
ಶಿವನಿಗೆ ಅತ್ಯಂತ ಪ್ರಿಯವಾದದ್ದು ರುದ್ರಾಕ್ಷಿ. ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸಿದರೆ ಹಾಗೂ ರುದ್ರಾಕ್ಷಿ ಮಾಲೆ ಧರಿಸಿದರೆ ರಕ್ಷಣೆ ದೊರೆಯುತ್ತದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ.