Advertisement

ನೇಪಾಲ: ಲಾಕ್‌ಡೌನ್‌ ಸಡಿಲ

12:54 PM Jun 12, 2020 | mahesh |

ಕಾಠ್ಮಂಡು: ನೇಪಾಲದಲ್ಲಿ ಕೋವಿಡ್‌ ಹಬ್ಬಲು ಭಾರತವೇ ಕಾರಣ ಎಂದು ಅಲ್ಲಿನ ಪ್ರಧಾನಿ ದೂಷಿಸುತ್ತಿದ್ದರೂ, ಈಗ ಅಲ್ಲಿ ಲಾಕ್‌ಡೌನ್‌ ಅನ್ನು ಸಡಿಲಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೆಲವು ಪ್ರದೇಶಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಮಾ.24ರ ಬಳಿಕ ಅಲ್ಲಿ ಲಾಕ್‌ಡೌನ್‌ ಹೇರಲಾಗಿದ್ದು ಬಳಿಕ ಮೇ 30ರಂದು ಮತ್ತೆ ಅದನ್ನು ಜೂ.14ರವರೆಗೆ ವಿಸ್ತರಿಸಿ ಆದೇಶಿಸಲಾಗಿತ್ತು.

Advertisement

ನೇಪಾಲದಲ್ಲಿ ಈವರೆಗೆ 4360 ಪ್ರಕರಣಗಳು ಪತ್ತೆಯಾಗಿದ್ದು 15 ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಲಾಕ್‌ಡೌನ್‌ ಸಡಿಲಗೊಳಿಸುವ ಬಗ್ಗೆ, ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳನ್ನು ಶುರುಮಾಡುವ ಬಗ್ಗೆ ನಿರ್ಧಾರ ತಳೆಯಲಾಗಿದೆ. ಅದರಂತೆ ಅಂಗಡಿಗಳಲ್ಲಿ ವ್ಯವಹಾರಕ್ಕೆ ಅವಕಾಶ ಕಲ್ಪಿಸುವುದು, ಖಾಸಗಿ ಕೈಗಾರಿಕೆಗಳು, ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವುದು ಇತ್ಯಾದಿ ಕ್ರಮಗಳು ಸೇರಿವೆ.

ಮೂಲಗಳ ಪ್ರಕಾರ, ಕಾಠ್ಮಂಡು ಕಣಿವೆ ಯಲ್ಲಿ ಖಾಸಗಿ ವಾಹನಗಳು ಸಮ-ಬೆಸ ವಿಧಾನಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗುವುದು. ಖಾಸಗಿ ಕಾರುಗಳಲ್ಲಿ ಇಬ್ಬರು ಮಾತ್ರ ಸಂಚರಿಸಲು ಅವಕಾಶ ವಿರಲಿದೆ. ದ್ವಿಚಕ್ರ ವಾಹದಲ್ಲಿ ಒಬ್ಬರು ಮಾತ್ರ ಸಂಚರಿಸಬಹುದು. ಎಲ್ಲೂ ಜನ ಸೇರುವುದನ್ನು ನಿಷೇಧಿಸಲಾಗಿದೆ.

ಇದರೊಂದಿಗೆ ಕಾಠ್ಮಂಡುವಿನಿಂದ ಬೇರೆ ಜಿಲ್ಲೆಗಳಿಗೆ ಜನರು ಸಂಚರಿಸುವುದಕ್ಕೆ ನಿಷೇಧವಿರಲಿದೆ. ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿರಲಿದೆ. ಯಾವುದೇ ದೂರದ ಸ್ಥಳಗಳಿಗೆ ಬಸ್‌ ಸಂಚಾರ ಇರುವುದಿಲ್ಲ. ಶಾಲೆಗಳು, ಕಾಲೇಜುಗಳು, ಸಿನೆಮಾ ಮಂದಿರಗಳು, ಪ್ರವಾಸಿ ಸ್ಥಳಗಳು ಮುಂದಿನ ಆದೇಶದವರೆಗೆ ಮುಚ್ಚಿಯೇ ಇರಲಿವೆ. ದೇಶಿ, ವಿದೇಶಿ ವಿಮಾನಗಳಿಗೂ ನೇಪಾಳಕ್ಕೆ ಅನುಮತಿ ಇಲ್ಲ ಎಂಬ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಬುಧವಾರವಷ್ಟೇ ಪ್ರಧಾನಿ ನಿವಾಸದ ಹೊರಗಡೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿ ಪ್ರತಿಭಟನೆ ನಡೆಸಿದ್ದು, ಕೋವಿಡ್‌ ವಿಚಾರದಲ್ಲಿ ಸರಿಯಾದ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಲಾಗಿತ್ತು. ಜತೆಗೆ ಲಾಕ್‌ಡೌನ್‌ನಿಂದಾಗಿ ಜನರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿ ದ್ದಾರೆ. ಅವರಿಗೆ ನೆರವಾಗುವ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತ ಕುವೈಟ್‌ನಲ್ಲಿ ಸಿಲುಕಿದ್ದ ಕಾಠ್ಮಂಡು ಮೂಲದ ಕಾರ್ಮಿಕರನ್ನು ಚಾರ್ಟಡ್‌ ವಿಮಾನದಲ್ಲಿ ಕಳಿಸಿಕೊಡಲಾಗಿದೆ. ಈ ವಿಮಾನದಲ್ಲಿ 150 ಮಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next