ಕಲಬುರಗಿ: ಆರು ತಿಂಗಳಿಗೊಮ್ಮೆ ನಡೆಯುವ ನೇಪಾಳಿ ದಿವ್ಯ ರುದ್ರಾಕ್ಷಿ ಮಾರಾಟ ಹಾಗೂ ಪ್ರದರ್ಶನ ನಗರದ ಗುಡಲಕ್ ಹೋಟೆಲ್‌ನಲ್ಲಿ ಗುರುವಾರದಿಂದ ಆರಂಭವಾಗಿದ್ದು, ಆ. 18ರ ವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಿವಕಾಶಿ, ಕಳೆದ 12 ವರ್ಷಗಳಿಂದ ವಿಶ್ವಾಸಾರ್ಹ ಹಾಗೂ ನೇಪಾಳಿಯಿಂದ ತರಿಸಲಾದ ರುದ್ರಾಕ್ಷಿ ಪ್ರದರ್ಶನ ನಗರದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಜನರಲ್ಲಿ ನಂಬಿಕೆ ಹುಟ್ಟಿಸಿ, ನಕಲಿ-ಅಸಲಿ ಯಾವುದು ಎನ್ನುವ ತಿಳಿವಳಿಕೆ ಮೂಡಿಸುವುದೆ ಪ್ರದರ್ಶನ ಹಾಗೂ ಮಾರಾಟದ ಉದ್ದೇಶವಾಗಿದೆ ಎಂದು ಹೇಳಿದರು. ಭಾರತ ದೇಶದಲ್ಲಿ ರುದ್ರಾಕ್ಷಿ, ಧಾರಣೆಗೆ ಶರಣರು, ಸಂತರು, ಸಾಧು ಸತ್ಪುರುಷರು, ಮುನಿಗಳು ಹೆಚ್ಚಿನ ಮಹತ್ವ ನೀಡಿರುವುದನ್ನು ನಾವು ಇತಿಹಾಸದಿಂದ ಕಾಣಬಹುದಾಗಿದೆ. ಮನುಷ್ಯನಲ್ಲಿ ಅಂತರ್ಯದ ಶಕ್ತಿ ಜಾಗೃತಗೊಳಿಸಲು ಹಾಗೂ ದುಷ್ಟ ಶಕ್ತಿ ಹೊರ ಹಾಕಲು ರುದ್ರಾಕ್ಷಿ ಧಾರಣೆಯಿಂದ ಸಾಧ್ಯ. ಪ್ರದರ್ಶನದಲ್ಲಿ ಏಕಮುಖ ರುದ್ರಾಕ್ಷಿಯಿಂದ ಚತುದರ್ಶನ ಗೌರಿ ಶಂಕರ, ಗಣೇಶ, ರುದ್ರಾಕ್ಷಿ, ಸ್ಪಟಿಕ ಮಾಲಾ, ನವರತ್ನ ಮಾಲಾ, ತುಳಸಿ ಮಾಲಾ, ರುದ್ರಾಕ್ಷಿ ಮತ್ತು ವಿವಿಧ ತರಹದ ಸಾಲಿ ಗ್ರಾಮಗಳು ಹಾಗೂ ಜಪ ಮಾಲಾಗಳು ಸಿಗುತ್ತವೆ ಎಂದು ವಿವರಿಸಿದರು. ಏಕಮುಖೀ ರುದ್ರಾಕ್ಷಿ ಅಪರೂಪವಾಗಿ ಸಿಗುತ್ತದೆ. ವಿಶಿಷ್ಟ ಗುಣ ಹೊಂದಿದೆ. ಇದನ್ನು ಧಾರಣೆ ಮಾಡುವುದರಿಂದ ಪರತತ್ವಜ್ಞಾನ ಕೊಡುತ್ತದೆ. ವಿಜಯತ್ವ ಶಕ್ತಿ ಸಮಾಜದಲ್ಲಿ ಎದುರಾಗದ ಶಕ್ತಿ ರುದ್ರಾಕ್ಷಿ ಧಾರಣೆಯಿಂದ ದೊರೆಯುತ್ತದೆ ಎನ್ನುವ ಆಧಾರಗಳಿವೆ. ಈ ವಸ್ತುಪ್ರದರ್ಶನ ವೀಕ್ಷಿಸಲು ಆಗಮಿಸುವ ಪ್ರತಿ ನಾಗರಿಕರಿಗೆ ಪಂಚಮುಖೀ ರುದ್ರಾಕ್ಷಿಯನ್ನು ಉಚಿತವಾಗಿ ನೀಡಲಾಗುವುದು. ರುದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟವು ಬೆಳಗ್ಗೆ 10:00 ರಿಂದ ಸಂಜೆ 9:00ರ ವರೆಗೆ ನಡೆಯಲಿದೆ ಎಂದು ತಿಳಿಸಿದರು. ಸಾಯಿ ಹಾಗೂ ಚಂದ್ರು ಹಾಜರಿದ್ದರು.