ಕಾಠ್ಮಂಡು: ಭಾರತದ 2000 ರೂಪಾಯಿ, 500 ಹಾಗೂ 200 ರೂಪಾಯಿ ನೋಟುಗಳ ಬಳಕೆ ಇನ್ಮುಂದೆ ನೇಪಾಳದಲ್ಲಿ ನಿಷೇಧಿಸಿರುವುದಾಗಿ ನೇಪಾಳ ಸರ್ಕಾರ ಘೋಷಿಸಿದೆ. ಈ ನಿರ್ಧಾರದಿಂದ ಮಧ್ಯಮ ಹಾಗೂ ಕಡಿಮೆ ಆದಾಯ ಇರುವ ಭಾರತೀಯ ಪ್ರವಾಸಿಗರಿಗೆ ತೊಂದರೆಯಾಗಲಿದೆ ಎಂದು ವರದಿಯೊಂದು ತಿಳಿಸಿದೆ.
ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನೇಪಾಳದ ಮಾಹಿತಿ ಖಾತೆ ಸಚಿವ ಗೋಕುಲ್ ಬಾಸ್ಕೋಟಾ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
2016ರ ನವೆಂಬರ್ 8ರಂದು ಭಾರತ ಸರ್ಕಾರ 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ನೂತನ 2000, 500 ಮತ್ತು 200 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿತ್ತು. ಕಳೆದ 2ವರ್ಷಗಳ ಕಾಲ ನೇಪಾಳದಲ್ಲಿ ಭಾರತದ ಹೊಸ ನೋಟುಗಳನ್ನು ಮುಕ್ತವಾಗಿ ಉಪಯೋಗಿಸಲಾಗಿತ್ತು.
ನೇಪಾಳ ಸರ್ಕಾರದ ಈ ನಿರ್ಧಾರದಿಂದಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಪಾಳದ ಕಾರ್ಮಿಕರಿಗೆ ಮತ್ತು ಬಹುಸಂಖ್ಯಾತ ಮಧ್ಯಮ, ಕಡಿಮೆ ಆದಾಯ ಹೊಂದಿರುವ ಭಾರತೀಯ ಪ್ರವಾಸಿಗರಿಗೆ ತೊಂದರೆಯಾಗಲಿದೆ ಎಂದು ವರದಿ ವಿವರಿಸಿದೆ.
100 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಭಾರತೀಯ ನೋಟುಗಳನ್ನು ಉಪಯೋಗಿಸುವುದು ಕಾನೂನು ಬಾಹಿರ ಎಂದು ನೇಪಾಳ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿ ಕಾಠ್ಮಂಡು ಪೋಸ್ಟ್ ವರದಿ ಪ್ರಕಟಿಸಿದೆ.