ಬೆಂಗಳೂರು: ಸರಕಾರದ ನಿರ್ದೇಶನದಂತೆ ವಸತಿ ಶಾಲೆಗಳಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಪಠ್ಯಕ್ರಮ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶುಕ್ರವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಹಣಮಂತ ನಿರಾಣಿ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಸಚಿವರು, ಎನ್‌ಇಪಿ ಅನುಷ್ಠಾನದ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅನುಷ್ಠಾನ ಯೋಜನೆ ಸಿದ್ಧಪಡಿಸಿ ಕ್ರಮ ವಹಿಸುತ್ತಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸಲಾಗುತ್ತಿದೆ. ಪ್ರಸ್ತುತ 6ರಿಂದ 12ನೇ ತರಗತಿವರೆಗೆ ರಾಷ್ಟ್ರೀಯ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮ ರಚನೆ ಆಗಿಲ್ಲ. ವಸತಿ ಶಾಲೆಗಳಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಪ್ರಕಾರ ಪಠ್ಯಕ್ರಮ ಅಳವಡಿಸಲಾಗುವುದು.
ಪ್ರಸ್ತುತ 804 ಕ್ರೈಸ್ ಶಾಲೆಗಳ ಪೈಕಿ 58 ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಪ್ರಾರಂಭಿಸಲಾಗಿದೆ. ಈ ಪೈಕಿ 2022-23ನೇ ಸಾಲಿನಲ್ಲಿ ಐದು ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿಗಳನ್ನೂ ಆರಂಭಿಸಲಾಗಿದೆ. ಉಳಿದ ಶಾಲೆ ಗಳನ್ನು ಪ್ರಥಮ ಪಿಯುಸಿ ತರಗತಿ ಗಳಿಗೆ ಮೇಲ್ದರ್ಜೆ ಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.