Advertisement

ನೆಲೋಗಿಯಲ್ಲಿ ಧರಂ ಸಿಂಗ್‌ ಚಿರಸ್ಥಾಯಿ

06:30 AM Jul 29, 2017 | Harsha Rao |

ಕಲಬುರಗಿ: ದಶಕಗಳ ಕಾಲ ಈ ಜಿಲ್ಲೆಯ ಜನರ ಪಾಲಿಗೆ “ಸಾಹೇಬ್ರು’ ಆಗಿಯೇ ಜನಮಾನಸದಲ್ಲಿ ಉಳಿದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎನ್‌. ಧರಂಸಿಂಗ್‌ ಇನ್ನಿಲ್ಲ ಎನ್ನುವುದನ್ನು ನಂಬಲು ಸ್ಥಳೀಯರು ಒಂದಿಷ್ಟೂ ಸಿದಟಛಿರಿಲ್ಲ. ಶುಕ್ರವಾರ ಸಂಜೆ ಅಜಾತಶತ್ರು ಪಂಚಭೂತದಲ್ಲಿ ವಿಲೀನವಾದಾಗ ಜನಸಾಗರದ ದುಃಖದ ಕಟ್ಟೆ ಅಕ್ಷರಶಃ ಒಡೆದಿತ್ತು.
ಧರಂಸಿಂಗ್‌ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ರಜಪೂತ ವೈದಿಕ ಸಂಪ್ರದಾಯದ ವಿಧಿ-ವಿಧಾನಗಳ ಪ್ರಕಾರ ನಡೆಯಿತು.

Advertisement

ಸಾವಿರಾರು ಜನರ ಸಮ್ಮುಖ, ನಾಡಿನ ದೊರೆ ಸೇರಿದಂತೆ ಅಪಾರ ಅಭಿಮಾನಿಗಳ ಬಳಗ, ಶೋಕ ಸಾಗರದಲ್ಲಿ ಮುಳುಗಿದ ಕುಟುಂಬದವರ ದುಃಖದ ಮಡುವಿನ ನಡುವೆ ನೇಲೋಗಿ ಗ್ರಾಮಕ್ಕೆ ಹತ್ತಿಕೊಂಡಂತಿರುವ ತೋಟದ ಹೊಲದಲ್ಲಿ ಧರಂ ಸಿಂಗ್‌ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಧರಂ ಸಿಂಗ್‌ ಅವರ ಹಿರಿಯ ಪುತ್ರ, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅಗ್ನಿಸ್ಪರ್ಶ ನೆರವೇರಿಸಿದರು. ತಮ್ಮ ಊರಿನ ನೆಚ್ಚಿನ ನಾಯಕನಿಗೆ ತಮ್ಮ ಊರಲ್ಲೇ ಅಂತ್ಯಕ್ರಿಯೆ ಆಗಬೇಕು ಎಂದು ಹಠ ಹಿಡಿದು ಗೆದ್ದ ನೆಲೋಗಿ ಗ್ರಾಮಸ್ಥರು ಭಾವಪರವಶವಾಗಿದ್ದರು.

“ನಮ್ಮ ಮನೆಯ ಮಗ ಮತ್ತೆ ನಮ್ಮೂರಿಗೆ ಬಂದ’ ಎಂದು ಭಾವಿಸಿ ನೋವಿನಲ್ಲೂ ನೆಮ್ಮದಿ ಕಂಡರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಕುಟುಂಬದ ವರ್ಗದವರ ಹಾಗೂ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಧರಂಸಿಂಗ್‌ ಪತ್ನಿ ಪ್ರಭಾವತಿ, ಮಕ್ಕಳಾದ ಡಾ| ಅಜಯಸಿಂಗ್‌, ವಿಜಯಸಿಂಗ್‌, ಪುತ್ರಿ ಪ್ರಿಯದರ್ಶಿನಿ, ಬಂಧುಗಳು, ಪಕ್ಷದ ನಾಯಕರು ಸಮಾಧಾನಪಡಿಸಿದರು.

ಸಿಂಗ್‌ ಅವರ ಆತ್ಮೀಯ ಗೆಳೆಯ ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರಂತೂ ತಮ್ಮ ಗೆಳೆಯನ ಬೀಳ್ಕೊಡುವಾಗ ನಿಯಂತ್ರಣ ಕಳೆದುಕೊಂಡು ಗದ್ಗದಿತರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿಐ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿಗಳಾದ ವೇಣುಗೋಪಾಲ, ಶೈಲಜನಾಥ ಸಾಕೆ, ಮಾಜಿ ಉಸ್ತುವಾರಿ ದಿಗ್ವಿಜಯ ಸಿಂಗ್‌, ಸಂಸದರಾದ ಭಗವಂತ ಖೂಬಾ, ಸಚಿವರಾದ ಎಚ್‌.ಕೆ. ಪಾಟೀಲ, ಎಂ.ಬಿ. ಪಾಟೀಲ, ಎಚ್‌. ಆಂಜನೇಯ, ಉಮಾಶ್ರೀ, ಡಾ| ಶರಣಪ್ರಕಾಶ ಪಾಟೀಲ, ಪ್ರಿಯಾಂಕ್‌ ಖರ್ಗೆ, ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್‌.ಆರ್‌. ಪಾಟೀಲ, ದಿನೇಶ ಗುಂಡೂರಾವ್‌, ಶಾಸಕರುಗಳಾದ ಮಾಲೀಕಯ್ಯ ಗುತ್ತೇದಾರ, ಡಾ| ಎ.ಬಿ. ಮಾಲಕರೆಡ್ಡಿ, ಬಾಬುರಾವ ಚಿಂಚನಸೂರ, ರಾಜಶೇಖರ ಪಾಟೀಲ ಹುಮನಾಬಾದ್‌, ಡಾ| ಉಮೇಶ ಜಾಧವ್‌, ಬಿ.ಆರ್‌. ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಯಶ್ವಂತರಾಯಗೌಡ ಪಾಟೀಲ, ರಮೇಶ ಭೂಸನೂರ, ಪಿ.ಎಂ ಅಶೋಕ, ಬಸವನಗೌಡ ಪಾಟೀಲ ಯತ್ನಾಳ, ಅಮರನಾಥ ಪಾಟೀಲ, ಬಿ.ಜಿ.ಪಾಟೀಲ,
ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಸುನೀಲ ವಲ್ಲಾಪುರೆ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಸಲೀಂ ಅಹ್ಮದ್‌, ಎನ್‌.ಎಸ್‌.
ಭೋಸರಾಜು ಮುಂತಾದವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ನಾಡಿನ ವಿವಿಧ ಮಠಾಧೀಶರಾದ ಜಿಡಗಾ-ಕೋಟನೂರ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಾರಕೂಡ ಮಠದ ಚೆನ್ನವೀರ ಶಿವಾಚಾರ್ಯರು, ಸಾರಂಗಧರೇಶ್ವರ ಮಹಾಸ್ವಾಮಿಗಳು, ಅಬ್ಬೆತುಮಕೂರ ವಿಶ್ವಾರಾಧ್ಯ ಮಠದ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು, ನಾಲವಾರ ಕೋರಿಸಿದ್ದೇಶ್ವರ ಮಠದ ತೋಟೆಂದ್ರ ಶಿವಾಚಾರ್ಯರು, ಭಾಲ್ಕಿ ಚೆನ್ನಬಸವ ಪಟ್ಟದ್ದೇವರು, ಸೊನ್ನ ಮಠದ ಶಿವಾನಂದ ಮಹಾಸ್ವಾಮಿಗಳು ಸೇರಿದಂತೆ ಇತರ ಹರ-ಚರ ಗುರುಮೂರ್ತಿಗಳವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next