ನೆಲ್ಯಾಡಿ: ಮಹಿಳೆಯರು ಸಮಾಜದಲ್ಲಿ ಧೈರ್ಯದಿಂದ ಎಲ್ಲ ಕಾರ್ಯಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಹಿಂಜರಿಕೆ, ಅಂಜಿಕೆ ಇದ್ದಲ್ಲಿ ಮಹಿಳಾ ಸಶಕ್ತೀಕರಣ ಸಾಧ್ಯವಿಲ್ಲ ಎಂದು ತಾ.ಪಂ. ಸದಸ್ಯೆ ಉಷಾ ಅಂಚನ್ ಹೇಳಿದರು. ಅವರು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ನಡೆದ ನೆಲ್ಯಾಡಿ ಗ್ರಾ.ಪಂ.ನ 2018-19ನೇ ಸಾಲಿನ ಮಹಿಳಾ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಹೆಣ್ಣು ಸಹನಾಮೂರ್ತಿ, ತ್ಯಾಗಮಯಿ. ಆದ್ದರಿಂದಲೇ ದೇಶ, ಭೂಮಿಯನ್ನು ಹೆಣ್ಣಿಗೆ ಹೋಲಿಕೆ ಮಾಡುತ್ತಾರೆ. ಹೆಣ್ಣು ಮಗುವಾಗಿ, ಸೊಸೆಯಾಗಿ, ತಾಯಿಯಾಗಿ, ಅಜ್ಜಿಯಾಗಿ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಾಳೆ. ಆದ್ದರಿಂದಲೇ ಸಮಾಜದಲ್ಲಿ ಮಹಿಳೆಯರ ಮೇಲೆ ಗೌರವ, ಅಭಿಮಾನವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಮಾತನಾಡಿದರು. ಕೆಎಂಎಫ್ ವಿಸ್ತರಣಾಧಿಕಾರಿ ಮಂಜುನಾಥ್, ಹೈನುಗಾರಿಕೆಯಲ್ಲಿ ಮಹಿಳೆಯರ ಪಾಲುಗಾರಿಕೆ ಮತ್ತು ಹೈನುಗಾರರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ದ.ಕ. ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಡೈಸಿ ವರ್ಗಿàಸ್ ಮಾತನಾಡಿದರು. ಆರೋಗ್ಯ ಸಹಾಯಕಿ ಎಲಿಯಮ್ಮ ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ಉಮಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾ.ಪಂ. ಸದಸ್ಯರಾದ ಅಬ್ದುಲ್ ಹಮೀದ್, ಉಷಾ ಒ.ಕೆ., ಶಬ್ಬೀರ್ ಸಾಹೇಬ್, ಲೈಲಾ ತೋಮಸ್, ಚಿತ್ರಾ ರಾಮನಗರ, ಫ್ಲೋರಿನಾ ಡಿ’ಸೋಜಾ, ಮೋಹಿನಿ, ಉಮಾವತಿ, ಪಿಡಿಒ ಮಂಜುಳಾ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಸದಸ್ಯೆಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದೇವರಾಜ ಎಂ. ಸ್ವಾಗತಿಸಿ ನಿರೂಪಿಸಿದರು. ಸಿಬಂದಿ ಶಿವಪ್ರಸಾದ್ ವಂದಿಸಿದರು. ಸಿಬ್ಬಂದಿ ಸೋಮಶೇಖರ, ಲೀಲಾವತಿ ಸಹಕರಿಸಿದರು.
ಮಹಿಳಾ ಠಾಣೆಗೆ ಆಗ್ರಹ
ನೆಲ್ಯಾಡಿಯಲ್ಲಿ ಇರುವ ಪೊಲೀಸ್ ಹೊರಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯಾಗಿ ಪರಿವರ್ತಿಸಬೇಕು ಹಾಗೂ ನೆಲ್ಯಾಡಿಯಲ್ಲಿ ಮಹಿಳಾ ಠಾಣೆ ಆರಂಭಿಸಬೇಕೆಂದು ಸಭೆಯಲ್ಲಿ ಮಹಿಳೆಯರು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.