ಪುತ್ತೂರು : ಡಾ| ಶಿವರಾಮ ಕಾರಂತರ ರಂಗಭೂಮಿ ಚಟುವಟಿಕೆಯ ನೆಲೆಯಾಗಿದ್ದ ನೆಲ್ಲಿಕಟ್ಟೆಯ 156 ವರ್ಷ ಹಳೆಯ ಸರಕಾರಿ ಶಾಲೆಯ ಕಟ್ಟಡವನ್ನು ಮಧ್ಯರಾತ್ರಿ ಏಕಾಏಕಿ ಧ್ವಂಸ ಮಾಡಿದ ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೇ ಆ ಸ್ಥಳದಲ್ಲಿ ಶಿಕ್ಷಣ ಇಲಾಖೆ ಕಚೇರಿಗೆ 1 ಕೋ. ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲು ಮುಂದಡಿ ಇಡಲಾಗಿದೆ. ಇದರಿಂದ ಹಳೆ ಕಟ್ಟಡ ನೆಲಸಮ ಪೂರ್ವಯೋಜಿತ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದಂತಾಗಿದೆ.
ಈ ಬೆಳವಣಿಗೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಾರಂಪರಿಕ ಕಟ್ಟಡವನ್ನು ಉದ್ದೇಶಪೂರ್ವಕವಾಗಿ ಕೆಡವಲಾಯಿತೇ, ಬಿಇಒ ಕಚೇರಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಧ್ವಂಸ ಮಾಡಲಾಯಿತೇ ಎಂಬ ಸಂದೇಹ ಎಲ್ಲೆಡೆ ಹಬ್ಬಿದೆ.
ನೆಲ್ಲಿಕಟ್ಟೆ ಶಾಲೆಯ ಕಟ್ಟಡದಲ್ಲಿ ಗ್ರೀಕ್ ಮಾದರಿಯ ರಂಗವೇದಿಕೆಯೂ ಇದ್ದು, ಡಾ| ಕಾರಂತರ ಹೆಸರಿನಲ್ಲಿ ಇಲ್ಲೊಂದು ಭವ್ಯ ಸ್ಮಾರಕ ನಿರ್ಮಿಸುವ ಪ್ರಸ್ತಾವನೆ, ಆಗ್ರಹಗಳೂ ಇದ್ದವು. ಆದರೆ ಶಾಲೆಯ ಎಸ್‌ಡಿಎಂಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಡಿ. 12ರಂದು ರಾತ್ರಿ ಜೆಸಿಬಿ ಮೂಲಕ ಕೆಡವಲಾಗಿತ್ತು. ಇದಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಎಸ್‌ಡಿಎಂಸಿಯನ್ನು ಮುಂದಿಟ್ಟುಕೊಂಡು ಪಾರಂಪರಿಕ ಕಟ್ಟಡವನ್ನು ವ್ಯವಸ್ಥಿತವಾಗಿ ಕೆಡವಲಾಯಿತೇ ಎಂಬ ಪ್ರಶ್ನೆಗಳು ಈಗ ಕೇಳಲಾರಂಭಿಸಿವೆ.
ಜ. 5ರಂದು ಶಾಸಕ ಮಠಂದೂರು ಇದೇ ಸ್ಥಳಕ್ಕೆ ತೆರಳಿ ನೂತನ ಬಿಇಒ ಕಚೇರಿ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ್ದಾರೆ. ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಲೋಕೋಪಯೊಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನಗರದ ಸೈನಿಕ ಭವನ ರಸ್ತೆಯ ಪಕ್ಕದಲ್ಲಿರುವ ಬಿಇಒ ಕಚೇರಿ 85 ವರ್ಷಗಳಷ್ಟು ಹಳೆಯದಾಗಿದ್ದು, ಹೊಸ ಬಿಇಒ ಕಚೇರಿ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರಾಗಿದೆ. ಹಾಲಿ ಸ್ಥಳದಲ್ಲೆ ಹೊಸ ಕಟ್ಟಡ ಕಟ್ಟಲು ಸ್ಥಳಾವಕಾಶ ಇಲ್ಲದಿರುವ ಕಾರಣ ವಿಶಾಲ ಸ್ಥಳದಲ್ಲಿ ನಿರ್ಮಿಸುವ ಉದ್ದೇಶವಿದೆ ಎಂದು ಶಾಸಕ ಸಂಜೀವ ಮಠಂದೂರು ಬುಧವಾರ ನೆಲ್ಲಿಕಟ್ಟೆ ಸರಕಾರಿ ಶಾಲೆಯ ಆವರಣದಲ್ಲಿ ಹೇಳಿಕೆ ನೀಡಿದ್ದಾರೆ. ಕಟ್ಟಡ ನೆಲಸಮ ಮಾಡುವ ಕೆಲ ತಿಂಗಳ ಹಿಂದಿನಿಂದಲೇ ಈ ಸ್ಥಳದಲ್ಲಿ ಶಿಕ್ಷಣ ಇಲಾಖೆಗೆ ಹೊಸ ಕಟ್ಟಡ ಕಟ್ಟುವ ಸುದ್ದಿ ಹಬ್ಬಿತ್ತು. ಈ ಎಲ್ಲ ಬೆಳವಣಿಗೆಗಳು ಇದಕ್ಕೆ ಪುಷ್ಟಿ ನೀಡಿದೆ.
ಪಾರಂಪರಿಕ ಕಟ್ಟಡ ನೆಲಸಮಗೊಂಡ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತನಿಖೆಗೆ ಆದೇಶ ನೀಡಿದ್ದರು. ಡಿಡಿಪಿಐ ಸ್ಥಳಕ್ಕೆ ಭೇಟಿ ನೀಡಿ, ಬಿಇಒ ಉಪಸ್ಥಿತಿಯಲ್ಲೇ ತನಿಖೆ ಮಾಡಿದ್ದರು. ಎಲ್ಲ ನಿಯಮಾವಳಿ ಮೀರಿ ಕಟ್ಟಡ ಧ್ವಂಸ ಮಾಡಲಾಗಿದೆ ಎಂಬುದನ್ನು ಸ್ವತಃ ಬಿಇಒ ಒಪ್ಪಿಕೊಂಡಿದ್ದರು. ಈ ಬಗ್ಗೆ ನಡೆದ ತನಿಖೆ ಇನ್ನೂ ಅಂತ್ಯ ಕಂಡಿಲ್ಲ. ಆಗಲೇ ಅದೇ ಸ್ಥಳದಲ್ಲಿ ನೂತನ ಬಿಇಒ ಕಟ್ಟಡ ಕಟ್ಟಲು ಮುಂದಾಗಿರುವುದು, ಡಿ.12ರಂದು ನಡೆದ ಘಟನೆ ಪಕ್ಕಾ ಪೂರ್ವ ನಿರ್ಧರಿತ ಎಂಬ ಸಂಶಯವನ್ನು ದೃಢಪಡಿಸಿದೆ.
ಇನ್ನೂ ಏನೂ ಮಾಡಲು ಸಾಧ್ಯವಿಲ್ಲ
ಪಾರಂಪರಿಕ ಕಟ್ಟಡವನ್ನು ಕಾರಂತರ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಅನೇಕರ ಆಶಯವಾಗಿತ್ತು. ಅದನ್ನೇ ಕೆಡವಿರುವ ಕಾರಣ ಇನ್ನು ಅಭಿಪ್ರಾಯ ವ್ಯಕ್ತಪಡಿಸುವುದು ಅಪ್ರಸ್ತುತ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಪ್ರತಿಕ್ರಿಯಿಸಿದ್ದಾರೆ.