ಮಡಿಕೇರಿ: ಸ್ವಚ್ಛ ಭಾರತ್ ಅಭಿಯಾನದಡಿ ಇಡೀ ಭಾರತವನ್ನು ಸ್ವಚ್ಛವಾಗಿಡಲು ಕೇಂದ್ರ ಸರ್ಕಾರ ಪಣತೊಟ್ಟು ಸ್ವಚ್ಛತೆಗಾಗಿಯೇ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಗ್ರಾಮಗಳ ಸ್ವಚ್ಛತೆಯಿಂದಲೇ ದೇಶದ ಸ್ವಚ್ಛತೆ ಎನ್ನುವ ಪರಿಕಲ್ಪನೆಯಡಿ ಗ್ರಾ.ಪಂ ಗಳಿಗೆ ಸಾಕಷ್ಟು ಅನುದಾನವನ್ನು ನೀಡುತ್ತಿದೆ. ಆದರೆ ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಗ್ರಾ.ಪಂ ಮಾತ್ರ ಕಸ ವಿಲೇವಾರಿಗಾಗಿ ಈಗಲೂ ಪರದಾಡುತ್ತಿದೆ.
ನೆಲ್ಯಹುದಿಕೇರಿ ಗ್ರಾಮ ಮತ್ತು ಇದಕ್ಕೆ ಒಳಪಡುವ ಪಟ್ಟಣ ದಿನದಿಂದ ದಿನಕ್ಕೆ ಜನಸಂಖ್ಯಾ ಬಲ ಹಾಗೂ ವ್ಯವಹಾರಿಕವಾಗಿ ಬೆಳೆಯುತ್ತಲೇ ಇದೆ. ಈ ಬೆಳವಣಿಗೆಗೆ ತಕ್ಕಂತೆ ಕಸದ ರಾಶಿಯೂ ಹೆಚ್ಚಾಗುತ್ತಲೇ ಇದ್ದು, ವಿಲೇವಾರಿಗೆ ಯೋಗ್ಯ ಜಾಗ ಗುರುತಿಸದ ಗ್ರಾ.ಪಂ ಅಸಹಾಯಕ ಸ್ಥಿತಿಯಲ್ಲೇ ದಿನ ದೂಡುತ್ತಿದೆ. ಇದರ ಪರಿಣಾಮ ಇಂದು ನೆಲ್ಯಹುದಿಕೇರಿಯ ಮುಖ್ಯ ರಸ್ತೆಯ ಬದಿಯಲ್ಲೇ ಕಸದ ರಾಶಿಗಳನ್ನು ಕಾಣಬಹುದಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ. ಗಾಳಿ ಬಂದಾಗ ಹಾರಾಡುವ ಪ್ಲಾಸ್ಟಿಕ್ ನಿಂದಾಗಿ ದ್ವಿಚಕ್ರ ವಾಹನ ಚಾಲಕರು ನಿಯಂತ್ರಣ ಕಳೆದುಕೊಂಡು ಬಿದ್ದ ಘಟನೆಯೂ ನಡೆದಿದೆ. ನಾಯಿ ಮತ್ತು ಕಾಗೆಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರ ನೆಮ್ಮದಿಗೆ ಭಂಗವಾಗಿದೆ.
ತ್ಯಾಜ್ಯದಿಂದಾಗಿ ದುರ್ವಾಸನೆಯ ವಾತಾವರಣವಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿಂದೆ ಗ್ರಾ.ಪಂ ಕುಂಬಾರಗುಂಡಿ ಎಂಬಲ್ಲಿ ಜಾಗ ಖರೀದಿಸಿ ಕಸವನ್ನು ವಿಲೇವಾರಿ ಮಾಡುತ್ತಿತ್ತು. ಆದರೆ ಅಲ್ಲಿನ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಸ ಹಾಕುವುದನ್ನು ಸ್ಥಗಿತಗೊಳಿಸಿ, ನಂತರ ಬರಡಿ ಎಂಬಲ್ಲಿ ಕಸ ವಿಲೇವಾರಿಯನ್ನು ಆರಂಭಿಸಲಾಯಿತು. ಆದರೆ ಅಲ್ಲಿಯೂ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತ್ತಲ್ಲದೆ ತಡೆಯಾಜ್ಞೆಯನ್ನು ಕೂಡ ತರಲಾಯಿತು. ಇದರಿಂದ ಗ್ರಾ.ಪಂ ಕೈಚೆಲ್ಲಿ ಕುಳಿತುಕೊಂಡಿತೇ ಹೊರತು ಕಸ ವಿಲೇವಾರಿಗೆ ಪರ್ಯಾಯವಾದ ವೈಜ್ಞಾನಿಕ ಮಾರ್ಗವನ್ನೇ ಅನುಸರಿಸಲಿಲ್ಲ.
ಇದರ ಪರಿಣಾಮ ರಸ್ತೆ ಬದಿಯಲ್ಲೇ ಕಸದ ರಾಶಿಯನ್ನು ಹಾಕಲಾಗುತ್ತಿದೆ. ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದಾಗ ಜೆಸಿಬಿ ಯಂತ್ರದ ಮೂಲಕ ಕಸದ ರಾಶಿಯನ್ನು ಗುಂಡಿ ತೆಗೆದು ಹಾಕಲಾಗುತ್ತಿದೆಯೇ ಹೊರತು ಬೇರೆ ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ನಿಯಮಬಾಹಿರವಾಗಿ ಕಸ ಹಾಕುವವರನ್ನು ಪತ್ತೆ ಹಚ್ಚಲು ಸಿಸಿ ಕೆಮರಾವನ್ನು ಅಳವಡಿಸಲಾಗಿದೆಯಾದರೂ ಇದು ಕಾರ್ಯ ನಿರ್ವಹಿಸದೆ ಹಲವು ದಿನಗಳೇ ಕಳೆದಿದೆ. ಕೆಲವರ ತೋಟದ ಬಳಿಯೇ ರಾಶಿ ರಾಶಿ ಕಸವನ್ನು ಹಾಕಲಾಗುತ್ತಿದ್ದು, ತೋಟದ ಪರಿಸರ ಮಾಲಿನ್ಯವಾಗುತ್ತಿದೆ. ಅಲ್ಲದೆ ನಾಯಿಗಳು ತ್ಯಾಜ್ಯಗಳನ್ನು ತೋಟದೊಳಗೆ ತಂದು ಹಾಕುತ್ತಿವೆ. ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡಿರುವ ಕೆಲವು ಬೆಳೆಗಾರರು, ತಕ್ಷಣ ಗ್ರಾ.ಪಂ ಸೂಕ್ತ ಕ್ರಮ ಕೈಗೊಂಡು ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಕಸದ ರಾಶಿಯನ್ನು ರಸ್ತೆಗೆ ಸುರಿದು ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸ್ವಚ್ಛ ಭಾರತ್ ಅನುದಾನ ಎಲ್ಲಿ ?
ಸ್ವಚ್ಛ ಭಾರತ ಅಭಿಯಾನದಡಿ ಗ್ರಾ.ಪಂ ಗಳಿಗೆ ಸಾಕಷ್ಟು ಅನುದಾನ ಬರುತ್ತದೆ. ಆದರೆ ನೆಲ್ಯಹುದಿಕೇರಿಗೆ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು ಹಾಗೂ ಸ್ಥಳೀಯರು ಸ್ವಚ್ಛತಾ ಶ್ರಮದಾನ ನಡೆಸಿ ಶುಚಿತ್ವಕ್ಕೆ ಆದ್ಯತೆ ನೀಡಿರುವ ಉದಾಹರಣೆಗಳಿವೆ.
ಆದರೆ ಗ್ರಾ.ಪಂ ಮಾತ್ರ ಕಸ ವಿಲೇವಾರಿಯ ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಡಳಿತ ನಡೆಸುತ್ತಿರುವ ಗ್ರಾ.ಪಂ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯವೇ ಸಮಸ್ಯೆಗೆ ಪ್ರಮುಖ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.