Advertisement
ಈ ಊರಿಗೆ ಪ್ರತಿದಿನ 80 ಬಸ್ಸುಗಳು ಬಂದು ಹೋಗುತ್ತಿವೆ. ಆದರೆ ಹೆಚ್ಚಿನ ಬಸ್‌ಗಳನ್ನು ಪೇಟೆಯಲ್ಲಿಯೇ ನಿಲ್ಲಿಸುವ ಕಾರಣದಿಂದ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಪ್ರಯಾಣಿಕರು ಇತ್ತ ಕಡೆ ತಲೆ ಹಾಕದಿರುವುದರಿಂದ ವ್ಯಾಪಾರ, ವ್ಯವಹಾರಗಳಿಲ್ಲದೆ ಇಲ್ಲಿರುವ ಅಂಗಡಿ, ಉಪಾಹಾರ ಮಂದಿರಗಳೂ ಶಟರ್ ಎಳೆದಿವೆ. ಮಧ್ಯಾಹ್ನ ವೇಳೆ ಊಟಕ್ಕಾಗಿ ಬಸ್ಸುಗಳನ್ನು ಪೇಟೆಯಲ್ಲೇ ನಿಲ್ಲಿಸುವುದರಿಂದ ನಿಲ್ದಾಣದಲ್ಲಿದ್ದ ಹೊಟೇಲ್‌ಗಳಿಗೆ ವ್ಯಾಪಾರವಿಲ್ಲದಂತಾಗಿ ಬಾಗಿಲು ಮುಚ್ಚಿವೆ.
2001ರಲ್ಲಿ ಅಂದಿನ ನೆಲ್ಯಾಡಿ ಮಂಡಲ ಪಂಚಾಯತ್ ತನ್ನ ಕಚೇರಿಗಾಗಿ ಈ ಕಟ್ಟಡವನ್ನು ನಿರ್ಮಿಸಿತ್ತು. ನಿರ್ಮಾಣವಾದ ಬಳಿಕ ಈ ಕಟ್ಟಡವನ್ನು ಪಂಚಾಯತ್ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಬಸ್ ನಿಲ್ದಾಣವನ್ನಾಗಿ ಮಾಡಲು ಹಸ್ತಾಂತರಿಸಿತ್ತು. ಕಟ್ಟಡದ ವಿನ್ಯಾಸದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಯಿತು. ಪಂಚಾಯತ್‌ಗಾಗಿ ಕಟ್ಟಿದ ಕಟ್ಟಡವೇ ಬಸ್ಸು ನಿಲ್ದಾಣವಾಗಿ ಪರಿವರ್ತನೆಗೊಂಡಿತು. ನೆಲ್ಯಾಡಿ ಪೇಟೆಯ ಸುಸಜ್ಜಿತ ಬಸ್ಸು ನಿಲ್ದಾಣವನ್ನು 2001ರಲ್ಲಿ ಅದು ಪುತ್ತೂರು ಶಾಸಕರಾಗಿದ್ದ ಡಿ.ವಿ. ಸದಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ, ರಾಜ್ಯದ ಸಾರಿಗೆ ಸಚಿವರಾಗಿದ್ದ ಸಿ.ಆರ್. ಸಗೀರ್ ಅಹ್ಮದ್ ಉದ್ಘಾಟಿಸಿದ್ದರು. ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ ರಮಾನಾಥ ರೈ ಮುಖ್ಯ ಅತಿಥಿಯಾಗಿದ್ದರು. ಆರಂಭದ ದಿನಗಳಲ್ಲಿ ಈ ನೂತನ ಬಸ್ಸು ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ಕ್ರಮೇಣ ಜನರು ಬಾರದೆ ಖಾಲಿ ಹೊಡೆಯಲಾರಂಭಿಸಿತು. ಇತ್ತೀಚಿನ ದಿನಗಳಲ್ಲಿ ವಿವಿಧೆಡೆಗಳಿಂದ ಸಂಚ ರಿಸುವ ಎಲ್ಲ ಬಸ್ಸುಗಳು ನೆಲ್ಯಾಡಿ ಪೇಟೆಯಲ್ಲಿಯೇ ನಿಲ್ಲು ವುದರಿಂದ ಪ್ರಯಾ ಣಿಕರೂ ರಸ್ತೆ ಬದಿಯಲ್ಲೇ ಬಸ್ಸಿಗೆ ಕಾದು ನಿಲ್ಲಲು ಪ್ರಾರಂಭಿಸಿದರು. ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ನಿರ್ಜನ ಪ್ರದೇಶದಂತಾಗಿದೆ.
Related Articles
ಕೆಎಸ್‌ಆರ್‌ಟಿಸಿ ಸಂಸ್ಥೆ ಇಲ್ಲಿ ಸುಸಜ್ಜಿತ ಹೊಸ ಬಸ್ಸು ನಿಲ್ದಾಣವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಹಾಕಿಕೊಂಡಿದೆ. ಆದರೆ ಬಸ್ ನಿಲ್ದಾಣದ ಮುಂಭಾಗದಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ಧಿಯಾಗಲು ನಿಲ್ದಾಣದ ಒಂದಿಷ್ಟು ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿಗಾಗಿ ಬಿಟ್ಟು ಕೊಡಬೇಕಾಗುತ್ತದೆ. ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ಹಾದು ಹೋಗಲಿರುವ ಕಾರಣದಿಂದ ಎಷ್ಟು ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಬೇಕೆಂಬುದನ್ನು ಈಗಲೇ ಅಂದಾಜಿಸುವಂತಿಲ್ಲ.
Advertisement
ಹೀಗಾಗಿ, ನೂತನ ಬಸ್ಸು ನಿಲ್ದಾಣದ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಅಲ್ಲಿಯವರೆಗೂ ಇದೇ ಹಳೆಯ ಕಟ್ಟಡದಲ್ಲೇ ಬಸ್ಸು ನಿಲ್ದಾಣ ಮುಂದುವರಿಯಲಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಗದೆ ಹೊಸ ಬಸ್ಸು ನಿಲ್ದಾಣವಾಗದು.
ನವೀಕರಣ ಕಾಮಗಾರಿ ಅಗತ್ಯಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ವಿರಳವಾಗಿರುವುದರಿಂದ ರಾತ್ರಿ ಹೊತ್ತು ಕಾವಲುಗಾರರ ವ್ಯವಸ್ಥೆಯೂ ಇಲ್ಲದೇ ಇಲ್ಲಿ ಅನ್ಯ ಚಟುವಟಿಕೆ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಸ್ಥಳೀಯರು ಮುಜುಗರ ಅನುಭವಿಸುವಂತಾಗಿದೆ. ಜನರ ತೆರಿಗೆಯ ಹಣದಿಂದ ನಿರ್ಮಿಸಲಾಗಿರುವ ಈ ಬಸ್ಸು ನಿಲ್ದಾಣ ಕಟ್ಟಡ ಬಣ್ಣ ಕಳೆದುಕೊಂಡು ಕಿಟಕಿ ಗಾಜುಗಳು ಒಡೆದುಹೋಗಿ, ಗೋಡೆಯಲ್ಲಿ ಅಲ್ಲಿಲ್ಲಿ ಪಾಚಿಕಟ್ಟಿ ಹಾಳು ಕೊಂಪೆಯಂತೆ ಕಾಣುತ್ತಿದೆ. ಇಲ್ಲಿ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಸಹಿತ ಒಂದಿಷ್ಟು ನವೀಕರಣ ಕಾಮಗಾರಿಗಳನ್ನು ನಡೆಸಿ ಪ್ರಯಾಣಿಕರಿಗೆ ಯೋಗ್ಯವಾಗುವಂತೆ ಮಾಡಲು ಕೆಎಸ್‌ಆರ್‌ಟಿಸಿ ಸಂಸ್ಥೆಯು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಒಂದು ಎಕ್ರೆ ಜಾಗ
ನೆಲ್ಯಾಡಿ ಬಸ್ಸು ನಿಲ್ದಾಣಕ್ಕೆ 1 ಎಕ್ರೆ ಜಾಗವಿದೆ. ಬಸ್ಸುಗಳು ತಂಗಲು ಸಾಕಷ್ಟು ಸ್ಥಳಾವಕಾಶವೂ ಇದೆ. ಬಸ್ಸು ನಿಲ್ದಾಣಕ್ಕೆ ಹೋಗುವ ರಸ್ತೆಯ ಡಾಮರು ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗುವಂತಿದೆ. ಸರಕಾರಿ ಬಸ್ಸುಗಳು ಇಲ್ಲಿಗೆ ಬರುವಂತೆ ಮಾಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಸಂಸ್ಥೆ ಎರಡು ವರ್ಷಗಳಿಂದ ಈ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರನ್ನು ನಿಯೋಜಿಸಿದೆ. ಆದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ದುರಸ್ತಿಗೆ ಯೋಜನೆ
ಈಗಿರುವ ನೆಲ್ಯಾಡಿ ಬಸ್ಸು ನಿಲ್ದಾಣಕ್ಕೆ ಐರಾವತ ಬಸ್ಸುಗಳನ್ನು ಹೊರತುಪಡಿಸಿ ಎಲ್ಲ ಸರಕಾರಿ ಬಸ್ಸುಗಳು ಆಗಮಿಸುತ್ತವೆ. ವಿದ್ಯಾರ್ಥಿಗಳೂ ಇಲ್ಲಿಗೆ ಬಂದು ಬಸ್ಸೇರುತ್ತಾರೆ. ಈಗಿರುವ ಬಸ್ಸು ನಿಲ್ದಾಣವನ್ನು ಕೆಡವಿ ಸುಸಜ್ಜಿತ ಹೊಸ ಬಸ್ಸು ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅನಿಶ್ಚಿತತೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಅಲ್ಲಿಯವರೆಗೆ ಈಗಿರುವ ಬಸ್ಸು ನಿಲ್ದಾಣವನ್ನೇ ದುರಸ್ತಿಗೊಳಿಸಲು ಯೋಜಿಸಲಾಗುವುದು.
– ಶರತ್, ಎಇಇ, ಕೆಎಸ್‌ಆರ್‌ಟಿಸಿ, ಪುತ್ತೂರು ಅಗತ್ಯ ವ್ಯವಸ್ಥೆ
ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುವು ದರೊಂದಿಗೆ ಎಲ್ಲ ಸರಕಾರಿ ಬಸ್ಸುಗಳು ಬಸ್ಸು ನಿಲ್ದಾಣದಲ್ಲಿಯೇ ಜನರನ್ನು ಹತ್ತಿಸುವುದು ಮತ್ತು ಇಳಿಸು ವಂತಾಗಬೇಕು. ಈ ಧರ್ಮಸ್ಥಳ-ಸುಬ್ರಹ್ಮಣ್ಯ ನಡುವೆ ಸಂಚರಿಸುವ ಬಸ್ ಪೆರಿಯಶಾಂತಿ ಮೂಲಕ ಹೋಗುತ್ತಿದ್ದು, ಅದೂ ಇಲ್ಲಿಗೆ ಬಂದು ಹೋಗುವಂತಾದರೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದತ್ತ ಪ್ರಯಾಣಿಸುವವರಿಗೆ ಅನುಕೂಲವಾಗುತ್ತದೆ, ಈ ನಿಲ್ದಾಣವೂ ಅಭಿವೃದ್ಧಿಯಾಗಬಹುದು. ಆಗ ತನ್ನಿಂತಾನೇ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತದೆ. ಅಲ್ಲಿ ಮತ್ತೆ ಅಂಗಡಿ, ಹೊಟೇಲ್ ತೆರೆದುಕೊಳ್ಳಲು ಸಹಕಾರಿ ಯಾಗುತ್ತದೆ.
-ಇಬ್ರಾಹಿಂ ಎಂ.ಕೆ., ಅಧ್ಯಕ್ಷ, ಕೌಕ್ರಾಡಿ ಗ್ರಾ.ಪಂ. ನಾಗರಾಜ್ ಎನ್.ಕೆ.