Advertisement

ಕಾನೂನು ಪಾಲನೆಯಿಂದ ಅಪರಾಧ ನಿಯಂತ್ರಣ ಸಾಧ್ಯ:ಒಡೆಯರ್‌

05:20 PM Jan 30, 2020 | Naveen |

ನೆಲಮಂಗಲ : ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾನೂನು ಪಾಲಕರಾದರೆ ಮಾತ್ರ ಅಪಘಾತ ಹಾಗೂ ಅಪರಾಧಗಳು ನಿಯಂತ್ರಣ ಸಾಧ್ಯ ಎಂದು ಆರ್‌ಟಿಒ ಹಿರಿಯ ಮೋಟರ್‌ ವಾಹನ ನಿರೀಕ್ಷಕ ಡಾ.ಡಿ.ಎಸ್‌ ಒಡೆಯರ್‌ ಸಲಹೆ ನೀಡಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆರ್‌ಟಿಓ, ನೆಲಮಂಗಲ ಸಂಚಾರಿ ಪೊಲೀಸ್‌ ಠಾಣೆ ಹಾಗೂ ಎನ್‌ಎಸ್‌ಎಸ್‌ ಘಟಕದಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ 18ರಿಂದ 40ರ ಒಳಗಿನ ಯುವ ಸಮುದಾಯದ ಜನರು ಹೆಚ್ಚು ಅಪಘಾತಗಳಿಂದ ಸಾವಿಗೀಡಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಚಾರಿ ನಿಯಮಗಳ ಕಾನೂನು ಅರಿವಿನ ಬಗ್ಗೆ ಜಾಗೃತರಾದರೆ ಅಪಘಾತಗಳು ಮತ್ತು ಅಪರಾಧಗಳು ಕಡಿಮೆಯಾಗಲಿವೆ. ಇದರಿಂದ ಸ್ವಸ್ಥ ಸಮಾಜದ ನಿರ್ಮಾಣವಾಗಲಿದೆ ಎಂದರು.

ವಿಡಿಯೋ ಆಧಾರದಲ್ಲಿ ದಂಡ : ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸಂಚಾರಿ ನಿಯಮಗಳ ಉಲ್ಲಂಘನೆಗಳ ಬಗ್ಗೆ ವಿಡಿಯೋ ಮಾಡಿ ಪೊಲೀಸರಿಗೆ ಮತ್ತು ಆರ್‌ ಟಿಓ ಅಧಿಕಾರಿಗಳಿಗೆ ಕಳುಹಿಸಿದರೆ ವಿಡಿಯೋ ಆಧಾರದ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾನೂನು ಕ್ರಮ: ಕುಡಿದು ವಾಹನ ಚಲಾಯಿಸುವುದು, ಅತಿವೇಗವಾಗಿ ವಾಹನಚಾಲನೆ, ಹೆಲ್ಮೆಟ್‌ ಧರಿಸದಿರುವುದು, ಚಾಲನಾಪರವಾನಗೆ ಇಲ್ಲದೆ ವಾಹನ ಚಾಲನೆ, 18 ವರ್ಷ ತುಂಬದ ಮಕ್ಕಳು ವಾಹನ ಚಾಲನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ನೆಲಮಂಗಲ ಸಂಚಾರಿ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಎಸ್‌.ಆರ್‌ ವೀರೇಂದ್ರ ಪ್ರಸಾದ್‌ ಮಾತನಾಡಿ, ಸಂಚಾರಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಜಾಗೃತರಾಗಬೇಕು. ಸಮಾಜದ ಬದಲಾವಣೆಗೆ ಕಾರಣವಾಗಿರುವ ಯುವಸಮುದಾಯ ವಾಹನಗಳ ಚಾಲನೆಗಳಲ್ಲಿ ಕಾನೂನು ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ. ಸಂಚಾರಿ ನಿಯಮ ಪಾಲಿಸದಿದ್ದರೆ ಹೆಚ್ಚು ದಂಡ ವಿಧಿಸಬೇಕಾಗುತ್ತದೆ. ಅಪಘಾತಗಳಿಂದ ಒಬ್ಬರ ಜೀವ ಬಲಿಪಡೆದುಕೊಂಡರೆ ಅವರ ಕುಟುಂಬಕ್ಕೆ ಜೀವ ನೀಡಲು ಸಾಧ್ಯವಾಗುವುದಿಲ್ಲ ಎಂದರು.

ಕಾನೂನು ತಜ್ಞ ಡಾ.ಹರಿಪ್ರಸಾದ್‌, ಪ್ರಾಂಶುಪಾಲ ಬಾಲಕೃಷ್ಣಯ್ಯ, ಎನ್‌ಎಸ್‌ಎಸ್‌ ಅಧಿಕಾರಿ ಡಾ.ಪುಷ್ಪಾ ಆನಂದ ಮೌರ್ಯ ,ಅಧ್ಯಾಪಕ ಮಂಜಪ್ಪ, ಡಾ.ತೋಪೇಶ್‌, ಶ್ರೀನಿವಾಸ್‌, ಡಾ.ಪ್ರಮೀಳಾ ಗಾಯಿತ್ರಿ , ಆಶಾರಾಣಿ , ಅಂಜನ್‌ ಕುಮಾರ್‌, ಶಿವಪ್ರಸಾದ್‌ ಬೋರಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next