Advertisement

ರಾಗಿ ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳಿಂದಲೇ ವಸೂಲಿ ಆರೋಪ

05:11 PM Mar 05, 2020 | Naveen |

ನೆಲಮಂಗಲ : ಸರ್ಕಾರ ರೈತರ ಸಂಕಷ್ಟ ನಿವಾರಣೆಗೆ ರಾಗಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಸ್ಥಾಪಿಸಿದೆ. ಆದರೆ, ರೈತರಿಂದ ಚೀಲಕ್ಕೆ 6ರಿಂದ 10ರೂನಂತೆ ಹಾಗೂ ಪರಿಶೀಲನೆಗೆ 100 ರೂ.ನಂತೆ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು ವಸೂಲಿ ಮಾಡುವ ಮಾಡುವ ದಂಧೆಯಲ್ಲಿ ತೊಡಗಿರುವುದು ಬಯಲಾಗಿದೆ.

Advertisement

ತಾಲೂಕಿನ ಬಸ್‌ನಿಲ್ದಾಣ ಸಮೀಪವಿರುವ ರಾಗಿ ಖರೀದಿ ಕೇಂದ್ರದಲ್ಲಿ 50ಕೆಜಿ ರಾಗಿ ಚೀಲಕ್ಕೆ 6ರಿಂದ 10 ರೂನಂತೆ ಹಾಗೂ ದಾಖಲೆ ಪರಿಶೀಲಿಸುವವರಿಗೆ ರೈತರು 100 ರೂ. ನೀಡಬೇಕಾಗಿದೆ. 1ರೂ. ಕಡಿಮೆಯಾದರೂ, ರಾಗಿಯನ್ನು ಲಾರಿಗಳಿಗೆ ಲೋಡ್‌ ಮಾಡಲು ನಿರಾಕರಿಸುತ್ತಾರೆ ಹಣ ನೀಡಿದರೆ ಮಾತ್ರ ಮೂಟೆಗಳನ್ನು ಲಾರಿಗೆ ಹಾಕುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷಲಕ್ಷ ವಸೂಲಿ : ತಾಲೂಕು ಕೇಂದ್ರದಿಂದ ಈಗಾಗಲೇ ಫೆ.26ರಿಂದ 10ಸಾವಿರ ಕ್ವಿಂಟಲ್‌ನಂತೆ 20 ಸಾವಿರ ಮೂಟೆಗಳು, ಪ್ರತಿದಿನ 2 ಸಾವಿರ ಮೂಟೆಗಳಂತೆ ದೊಡ್ಡಬಳ್ಳಾಪುರ ಗೋದಾಮಿಗೆ ರವಾನೆ ಮಾಡಲಾಗಿದೆ.ಇದರಂತೆ ರೈತರಿಂದ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು 1.20ಲಕ್ಷ ರೂ. ಹಣ ರೈತರಿಂದ ವಸೂಲಿ ಮಾಡಿದ್ದಾರೆ. ಅಲ್ಲದೇ, ರಾಗಿ ಮಾರಾಟಕ್ಕೆ ಚೀಟಿ ಪಡೆದ 462 ರೈತರಿಂದ 100ರಂತೆ 46 ಸಾವಿರಕ್ಕೂ ಹೆಚ್ಚು ಹಣ ಪಡೆಯಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಸರ್ಕಾರ ಯೋಜನೆ: ರಾಗಿ ಬೆಳೆದು ಉತ್ತಮ ಮಾರುಕಟ್ಟೆಯಿಲ್ಲದೆ ನಲುಗುತಿದ್ದ ರೈತರಿಗೆ 1ಎಕರೆಗೆ 10 ಕ್ವಿಂಟಲ್‌ನಂತೆ 5ಎಕರೆಗೆ ಗರಿಷ್ಟ 50 ಕ್ವಿಂಟಾಲ್‌ ಖರೀದಿಸುವ ಅವಕಾಶ ಮಾಡಿಕೊಟ್ಟ ಸರ್ಕಾರ ಎಲ್ಲಾ ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪನೆ ಮಾಡಿದೆ. ಆದರೆ, ರೈತರಿಗೆ ನೆರವಾಗಬೇಕಿದ್ದ ಅಧಿಕಾರಿಗಳು ಅವರಿಂದಲೇ ಹಣ ಪಡೆಯುತ್ತಿದ್ದಾರೆ.

ರೈತರ ವಿರೋಧ : ಹಣ ವಸೂಲಿ ಮಾಡುವವರ ವಿರುದ್ಧ ಕೆಲ ರೈತರು ಬುಧವಾರ ಬೆಳಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.

Advertisement

ಏಜೆಂಟ್‌ಗಳ ಸೃಷ್ಟಿ : ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಚೀಲಗಳ ಸಾಗಾಟಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ತಿಳಿಸುವ ಅಧಿಕಾರಿಗಳು, ಸರ್ಕಾರಿ ವಾಹನದಲ್ಲಿ ರಾಗಿ ಸಾಗಾಟ ಮಾಡುತ್ತಿದ್ದಾರೆ. ಇದಲ್ಲದೆ ದೊಡ್ಡಬಳ್ಳಾಪುರ ಗೋದಾಮಿನಲ್ಲಿ ಲಾರಿಗೆ 2 ಸಾವಿರದಂತೆ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ. ಇನ್ನೂ ಅಧಿಕಾರಿಗಳ ಮುಂದೆಯೇ ರೈತರಿಂದ ರಾಜಾರೋಷವಾಗಿ ಹಣ ವಸೂಲಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳೇ ಕಾಣಲಿಲ್ಲವೆ : ಗ್ರಾಮಾಂತರ ಜಿಲ್ಲೆಯಲ್ಲಿ ಹಣವಸೂಲಿಯ ಪ್ರಕರಣದ ಆರೋಪಗಳು ಹಿಂದೆಯೇ ಕೇಳಿಬಂದಿತ್ತು. ಹಲವು ಬಾರಿ ಸಮಸ್ಯೆಗಳು ಎದುರಾಗಿದ್ದ ಹಿನ್ನಲೆ
ತಾಲೂಕಿನ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಹಣವಸೂಲಿ ಮಾಡುತ್ತಿರುವ ಖರೀದಿಕೇಂದ್ರದ ಮಧ್ಯವರ್ತಿಗಳು ಕಾಣಲಿಲ್ಲವೇ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಸಂಕಷ್ಟದಲ್ಲಿರುವ ರೈತರಿಗೆ ಜೀವನ ಸಾಗಿಸಲು ಅನುಕೂಲವಾಗಿದ್ದ ರಾಗಿ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳು ಹಾಗೂ ಭ್ರಷ್ಟ ಅಧಕಾರಿಗಳ ಹಾವಳಿ ಮಿತಿಮೀರಿದೆ. ಸಾವಿರಾರು ರೂಪಾಯಿ ಹಣವಸೂಲಿ ಮಾಡುತ್ತಿರುವುದು ದುರಂತ. ರೈತರ ಹಣಕ್ಕೆ ಕನ್ನ ಹಾಕುವವರಿಗೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು.
ಕೆ.ಹನುಮಂತಯ್ಯ, ಭಾರತೀಯ
ಕಿಸಾನ್‌ ಸಂಘದ ಉಪಾಧ್ಯಕ್ಷ

ಮಧ್ಯರ್ತಿಗಳು, ಅಧಿಕಾರಿಗಳ ಸೇರಿ ಒಂದು ಚೀಲಕ್ಕೆ 6 ರಿಂದ 10
ರೂಗಳಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ . ಬಿಲ್‌ ಕೇಳಿದರೆ ಮೂಟೆಯನ್ನು ಲಾರಿಗೆ ತುಂಬುವುದಿಲ್ಲ ಎಂದು ಎದುರಿಸುತ್ತಾರೆ ಕಷ್ಟದಲ್ಲಿ ಹಣ ನೀಡುವ ಪರಿಸ್ಥಿತಿ ಎದುರಾಗಿದೆ.
●ಪ್ರಕಾಶ್‌, ರೈತ

Advertisement

Udayavani is now on Telegram. Click here to join our channel and stay updated with the latest news.

Next