Advertisement

ನೆಲಮಂಗಲ: KSRTC ಬಸ್‌ ಭಸ್ಮ;ಮಹಿಳೆ ಸಜೀವ ದಹನ,ಇಬ್ಬರು ಗಂಭೀರ 

09:17 AM Feb 21, 2017 | Team Udayavani |

ಬೆಂಗಳೂರು: ಇಲ್ಲಿನ ನೆಲಮಂಗಲದ ಅರಶಿನಕುಂಟೆ ಟೋಲ್‌ ಬಳಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಸೋಮವಾರ ತಡ ರಾತ್ರಿ 12.45 ರ ವೇಳೆ ನೋಡ ನೋಡುತ್ತಿದ್ದಂತೆ ಸುಟ್ಟು ಭಸ್ಮವಾಗಿದ್ದು, ಅವಘಡದಲ್ಲಿ ಮಹಿಳೆಯೊಬ್ಬರು ಸಜೀವ ದಹನಗೊಂಡಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಚಿಕ್ಕಮಗಳೂರಿನಿಂದ ಬರುತ್ತಿದ್ದ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ಡ್ರೈವರ್‌ ಹಿಂಬದಿಯ ಸೀಟಿನಲ್ಲಿ ನಿದ್ದೆಯ ಮಂಪರಿನಲ್ಲಿದ್ದ  ನಗರದ 8 ನೇ ಮೈಲಿ ನಿವಾಸಿ ಭಾಗ್ಯಮ್ಮ (50) ಸಜೀವ ದಹನಗೊಂಡಿದ್ದು, ಮಮತಾ ಮತ್ತು ಯಶ್‌ ಎನ್ನುವ ತಾಯಿ ಮಗ ಗಂಭೀರವಾಗಿ ಸುಟ್ಟ ಗಾಯಗಳಿಗೊಳಗಾಗಿದ್ದಾರೆ. ಇದೇ ವೇಳೆ 27 ಮಂದಿ ಪ್ರಯಾಣಿಕರು ಬೆಂಕಿ ಹೊತ್ತಿಕೊಂಡೊಡನೆಯೆ ಬಸ್‌ನಿಂದ ಇಳಿದು ಕ್ಷಣಾರ್ಧದಲ್ಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. 

ಭಾಗ್ಯಮ್ಮ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದರು ಎಂದು ವರದಿಯಾಗಿದೆ. 

ಗಂಭೀರ ಗಾಯಾಳುಗಳಾಗಿರುವ ಮಮತಾ ಮತ್ತು ಯಶಸ್‌ ಅವರನ್ನು ವಿಕ್ಟೋರಿಯಾ  ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. 

ಕೆಎಸ್‌ಆರ್‌ಟಿಸಿ ಅಧಿಕಾರಿ ಲಿಂಗರಾಜು ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಮತ್ತು ನಿರ್ವಾಹಕ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ಎಲ್ಲಿದ್ದರೂ ಬನ್ನಿ…ಕೊನೆಯ ಆಸೆ 

ಹಾಸನದ ವೀರಾಪುರ ಮೂಲದ ಮಮತಾ ಕಳೆದ 6 ತಿಂಗಳ ಹಿಂದೆ ಪತಿ ಸುರೇಶ್‌ರಿಂದ ದೂರಾಗಿದ್ದರು. ಇದೀಗ ಚಿಂತಾಜನಕ ಸ್ಥಿತಿಯಲ್ಲಿರುವ ಅವರು ಕೊನೆಯ ಬಾರಿಗೆ ಪತಿಯನ್ನು ನೋಡುವ ಆಸೆ ವ್ಯಕ್ತಪಡಿಸಿದ್ದು, ಎಲ್ಲಿದ್ದರೂ ಬನ್ನಿ ..ಕೊನೆಯ ಬಾರಿ ನೋಡಿ ಎಂದು ಬೇಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ  ವರದಿಯಾಗಿದೆ. 7 ವರ್ಷದ ಹಿಂದೆ ಇವರ ವಿವಾಹವಾಗಿತ್ತು ಎನ್ನುಲಾಗಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next