Advertisement

ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ

05:09 PM Dec 19, 2019 | Naveen |

ನೆಲಮಂಗಲ:ವಿದ್ಯಾರ್ಥಿಗಳು ಪ್ರಶ್ನೆ ಮಾಡದೆ ಯಾವ ವಿಚಾರವನ್ನೂ ನಂಬಬಾರದು, ಪ್ರಶ್ನೆ ಮಾಡಿದಾಗ ಮಾತ್ರ ನೈಜತೆಯ ಅರಿವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್‌ ಸಲಹೆ ನೀಡಿದರು.

Advertisement

ತಾಲೂಕಿನ ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿರುವ ಕ್ಲಸ್ಟರ್‌ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಭೆ ಗುರುತಿಸಲು ಸಾಧ್ಯ:ಮಕ್ಕಳು ಪಠ್ಯದ ಚಟುವಟಿಕೆಗಳ ಜೊತೆ ವಿಜ್ಞಾನ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿದಾಗ ಸರ್ವ ತೋಮುಖ ಬೆಳವಣಿಗೆ ಹೊಂದಲು ಸಾಧ್ಯ. ಈ ಉದ್ದೇಶದಿಂದ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನದ ಮೂಲಕ ವಿಜ್ಞಾನ ಹಬ್ಬ ನಡೆಸುತ್ತಿದೆ. ಇದರಿಂದ ಸರ್ಕಾರಿ ಶಾಲೆಯ ಪ್ರತಿಭಾವಂತ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಬಹಳಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ವೇದಿಕೆ: ವಿದ್ಯಾರ್ಥಿಗಳಲ್ಲಿ ವಿಜ್ಞಾನ ಅರಿವಿದ್ದರೆ ತಂತ್ರ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಪ್ರತಾಪ್‌ ಎಂಬ ಯುವಕ ಲಕ್ಷಾಂತರ ಸಂಬಳ ಪಡೆಯುವ ವಿಜ್ಞಾನಿಗಳು ಅಚ್ಚರಿ ಪಡುವಂತೆ ಡ್ರೋನ್‌ ಪರಿಚಯಿಸಿದ.ಆದರೆ, ಅವನ ಪ್ರತಿಭೆ ವಿದೇಶಿಗರಿಗೆ ಉಪಯೋಗವಾಯಿತು. ಮಕ್ಕಳ ಅತ್ಯುತ್ತಮ ಪ್ರತಿಭೆಗಳನ್ನು ನಮ್ಮಲ್ಲಿಯೇ ಪರಿಚಯಿಸುವ ನಿಟ್ಟಿನಲ್ಲಿ ವಿಜ್ಞಾನ ಹಬ್ಬ ಉತ್ತಮ ವೇದಿಕೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ ಮಾತನಾಡಿ, ವಿಜ್ಞಾನ ನಮ್ಮ ಸಂಸ್ಕೃತಿಯ ಜೊತೆ ಬೆಳೆದು ಬಂದಿದೆ. ಹಿಂದಿನ ಕಾಲದಲ್ಲಿ ಸದುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ಇಂದು ವಿಜ್ಞಾನದ ಮಹತ್ವ ಅರಿವಾಗಿದ್ದು, ಸಂಸ್ಕೃತಿಯಂತೆ ವಿಜ್ಞಾನ ಮನೆಮನಗಳನ್ನು ತಲುಪಿದೆ. ಮಕ್ಕಳು ಭಯ ಬಿಟ್ಟು ಎಲ್ಲಾ ಚುಟುವಟಿಕೆಗಳಲ್ಲಿ ಭಾಗವಹಿಸಿದರೆ ಸಾಧಕರಾಗಲು ಸಾಧ್ಯಎಂದರು.

Advertisement

2 ದಿನ ವಿಜ್ಞಾನ ಹಬ್ಬ: ತಾಲೂಕಿನ ನೆಲಮಂಗಲ ಟೌನ್‌, ಅರಿಶಿನಕುಂಟೆ ಹಾಗೂ ಬಸವನಹಳ್ಳಿ ಕ್ಲಸ್ಟರ್‌ ಮಟ್ಟದ ವಿಜ್ಞಾನ ಹಬ್ಬ ಡಿ.18 ಹಾಗೂ 19 ಎರಡು ದಿನಗಳ ಕಾಲ ನಡೆಯಲಿದ್ದು, ಹಾಡು-ಆಡು, ಹಗಲು ಖಗೋಳ, ಜೀವಜಾಲ, ಓರಿಗಾಮಿ ಎಂಬ ನಾಲ್ಕು ವಿಭಾಗಗಳಲ್ಲಿ ಮಕ್ಕಳಿಗೆ ವಿಜ್ಞಾನದ ಚಟುವಟಿಕೆಯ ಜೊತೆ ಗಣಿತ, ಸಮಾಜ, ಕನ್ನಡ ವರ್ಣಮಾಲೆ, ಆಂಗ್ಲ ಪದಗಳ ಕಲಿಕೆಯ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಿ ಜಿಲ್ಲಾ, ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.

ಪ್ರದರ್ಶನ: ಬಸವನಹಳ್ಳಿ ಹಾಗೂ ಕೋಟೆಬೀದಿ ಸರ್ಕಾರಿ ಶಾಲೆಯ ಮಕ್ಕಳು ಅನೇಕ ರೀತಿಯ ವಿಜ್ಞಾನ ಮಾದರಿಗಳನ್ನು ತಯಾರಿಸಿ, ಅದರ ಉಪಯೋಗ ಹಾಗೂ ತಯಾರಿಸುವ ಬಗೆಯನ್ನು ವಿವರಣೆ ನೀಡಿದರು. ವಿಜ್ಞಾನ ಹಬ್ಬದಲ್ಲಿ ಹತ್ತಾರು ಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.

ತಾಲೂಕು ಪಂಚಾ ಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಂಗನಾಥ್‌, ಗಾಪಂ ಅಧ್ಯಕ್ಷೆ ಮಂಜುಳಾ,ಪುರಸಭೆ ಸದಸ್ಯ ಆರ್‌. ಸುನೀಲ್‌ ಮೂಡ್‌, ಶಿಕ್ಷಣ ಸಂಯೋಜಕ ಶಾಂತ ಕುಮಾರ್‌, ಶಿಕ್ಷಣ ಸಮನ್ವಯಾಧಿಕಾರಿ ಶಿವಕುಮಾರ್‌, ದೀಕ್ಷಿತ್‌, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಜಿ. ಕೃಷ್ಣಮೂರ್ತಿ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿಜಯಕುಮಾರಿ, ನಿರ್ದೇಶಕ ಕೃಷ್ಣಮೂರ್ತಿ ಎಸ್‌.ಎನ್‌, ಸಂಪನ್ಮೂಲ ವ್ಯಕ್ತಿ ನಿರಂಜನ್‌ ಪ್ರಕಾಶ್‌, ಮುಖ್ಯ ಶಿಕ್ಷಕರಾದ ಲೋಕೇಶ್‌, ಹುಚ್ಚಬೈರಪ್ಪ, ಸೌಭಾಗ್ಯಮ್ಮ, ಭಾಗ್ಯಲಕ್ಷ್ಮಿ, ಪರಮೇಶ್ವರಯ್ಯ, ಸೌಭಾಗ್ಯ ಸದಸ್ಯ ಶಿಕ್ಷಕರಾದ ಕುಮಾರ್‌, ಚಂದ್ರಶೇಖರ್‌, ಸಿದ್ಧಗಂಗಯ್ಯ, ರೇವಮ್ಮಾ, ರೇಣು ಕಮ್ಮಾ,ಮಂಜುಳಾ ಮತ್ತಿತರರಿದ್ದರು.

ಮೂರು ಕಡೆ:ಬಸವನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜೊತೆಗೆ ವಾಜರಹಳ್ಳಿ, ಕೋಟೆ ಬೀದಿ ಸರ್ಕಾರಿ ಶಾಲೆಗಳಲ್ಲಿಯೂ ಇದೇ ಮೊದಲ ಬಾರಿಗೆ ಕ್ಲಸ್ಟರ್‌ ಮಟ್ಟದ ಮಕ್ಕಳ ಹಬ್ಬ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next