Advertisement

ನೆಲ್ಯಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ

11:32 PM Jun 02, 2019 | Suhan S |

ನೆಲ್ಯಾಡಿ: ಹೊಸದಾಗಿ ರಚನೆಯಾದ ಕಡಬ ತಾಲೂಕಿಗೆ ಸೇರ್ಪಡೆಗೊಂಡ ನೆಲ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ 70ರ ಸಂಭ್ರಮ. ಕನ್ನಡ ಮಾಧ್ಯಮದೊಂದಿಗೆ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಆಂಗ್ಲ ಮಾದ್ಯಮ ಶಾಲೆಯಾಗಿ ನೆಲ್ಯಾಡಿಯೂ ಆಯ್ಕೆಯಾಗಿದ್ದು ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಸಂತಸ ತಂದಿದೆ.

Advertisement

ಕಡಬ ತಾಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಾಗಿ ಗುರುತಿಸಿಕೊಂಡಿದ್ದು, ಸೌಲಭ್ಯಗಳಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ. ಸರಕಾರಿ ಶಾಲೆಯಾದರೂ ಇಲ್ಲಿನ ಎಸ್‌ಡಿಎಂಸಿಯ ಸತತ ಪ್ರಯತ್ನದ ಫ‌ಲವಾಗಿ ಏಳು ವರ್ಷಗಳಿಂದ 6ರಿಂದ 8ನೇ ತರಗತಿಯ ವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಎರಡು ವರ್ಷಗಳಿಂದ “ಮಕ್ಕಳ ಮನೆ’ ಎಲ್‌ಕೆಜಿ- ಯುಕೆಜಿ ನಡೆಯುತ್ತಿದೆ.

ರಾಜ್ಯದಲ್ಲೇ ಉತ್ತಮ ಸರಕಾರಿ ಶಾಲೆ
ಏಳು ವರ್ಷಗಳಿಂದ ಆಂಗ್ಲ ಮಾಧ್ಯಮದತ್ತ ಮುಖ ಮಾಡಿರುವ ಈ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್‌ ಶಿಕ್ಷಣ, ನ್ಪೋಕನ್‌ ಇಂಗ್ಲಿಷ್‌ ತರಬೇತಿ, ಕ್ರೀಡಾ ತರಬೇತಿ, ಸೌಟ್ಸ್‌ ಗೈಡ್ಸ್‌ ಸೇವಾದಳ, ಪ್ರತೀ ವರ್ಷ ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಿಸಲು ಪ್ರತಿಭಾ ಕಾರಂಜಿ, ವಾರ್ಷಿಕೋತ್ಸವ, ಮೆಟ್ರಿಕ್‌ ಮೇಳ, ವಿಜ್ಞಾನ ವಸ್ತು ಪ್ರದರ್ಶನ, ಶೈಕ್ಷಣಿಕ ಪ್ರವಾಸ – ಹೀಗೆ ವಿದ್ಯಾರ್ಥಿಗಳ ಸರ್ವ ತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ನ್ಯಾಯವಾದಿ ಇಸ್ಮಾಯಿಲ್‌ ನೆಲ್ಯಾಡಿ ಇವರ ನೇತೃತ್ವದಲ್ಲಿ ಹತ್ತು ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ರಾಜ್ಯದ ಉತ್ತಮ ಸರಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ.

ಶಾಲೆಯಲ್ಲಿ ಪ್ರತ್ಯೇಕ ಗ್ರಂಥಾಲಯ, ಪ್ರಯೋಗಾಲಯ, ಆಯ್ದ ತರಗತಿಗಳಲ್ಲಿ ಟಿವಿ ಹಾಗೂ ಪ್ರೊಜೆಕ್ಟರ್‌ಗಳ ಮೂಲಕ ಆಧುನಿಕ ತಂತ್ರಜ್ಞಾನವನ್ನು ಬಳಸಿ ಶಿಕ್ಷಣ ನೀಡಲಾಗುತ್ತಿದ್ದು, ಎಲ್ಲ ರೀತಿಯ ಕಲಿಕಾ ಸೌಲಭ್ಯಗಳನ್ನು ಹೊಂದಿದೆ.

ಸಭಾಂಗಣಕ್ಕೆ ಯೋಜನೆ
ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ನೇತೃತ್ವದಲ್ಲಿ 70ನೇ ವರ್ಷಕ್ಕೆ ಕಾಲಿಡುತ್ತಿರುವ ಶಾಲೆಯ ಸವಿನೆನಪಿಗಾಗಿ ಪೂರ್ವ ವಿದ್ಯಾರ್ಥಿಗಳ ಸಹಕಾರದೊಂದಿಗೆ ನೂತನ ಸಭಾಂಗಣ ನಿರ್ಮಿಸುವ ಯೋಜನೆ ರೂಪುಗೊಳ್ಳುತ್ತಿದೆ. ಮುಖ್ಯ ಶಿಕ್ಷಕ ಆನಂದ ಅಜಿಲ ಹಾಗೂ ನುರಿತ ಶಿಕ್ಷಕಕರು ಗುಣಮಟ್ಟವನ್ನು ಉನ್ನತಿಗೇರಿಸಿದ್ದಾರೆ. ನೆಲ್ಯಾಡಿ ಗ್ರಾ.ಪಂ. ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಸಹಕಾರದಿಂದ ಸಾಕಷ್ಟು ಅನುದಾನವೂ ಇದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next