ಕೊಕ್ಕಡ: ಕೊಕ್ಕಡ ಗ್ರಾಮದ ಹಳ್ಳಿಂಗೇರಿ-ಪಿಜಿನಡ್ಕ-ಬೆಥನಿ ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗೆ ಲೈನ್ ಎಸ್ಟಿಮೇಟ್ ಮಾಡುವ ಕಾರ್ಯ ನಡೆಸಲಾಯಿತು. ಈ ರಸ್ತೆ ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳ ವ್ಯಾಪ್ತಿಗೆ ಸೇರಿದ್ದು, ಹಲವಾರು ವರ್ಷಗಳಿಂದ ಇದರ ಡಾಮರು ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದೀಗ ಈ ರಸ್ತೆಯ ಫಲಾನುಭವಿಗಳ, ಸ್ಥಳೀಯ ಹೋರಾಟ ಸಮಿತಿಯ ಕೋರಿಕೆಯ ಮೇರೆಗೆ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ಜಿ.ಪಂ. ಎಂಜಿನಿಯರ್ ಖುದ್ದಾಗಿ ಸ್ಥಳಕ್ಕೆ ಬಂದು ಡಾಮರು ಕಾಮಗಾರಿಗಾಗಿ ಆರಂಭಿಕ ಹಂತದ ಲೈನ್ ಎಸ್ಟಿಮೇಟ್ ನಡೆಸಿದ್ದಾರೆ.
ಕೊಕ್ಕಡದ ಹಳ್ಳಿಂಗೇರಿಯಿಂದ 2.6 ಕಿ.ಮೀ.ವರೆಗೆ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಗೆ ಈ ರಸ್ತೆ ಸೇರುತ್ತಿದ್ದು, ಉಳಿದ 900 ಮೀಟರ್ ಪುತ್ತೂರು ತಾಲೂಕಿನ ನೆಲ್ಯಾಡಿ ವ್ಯಾಪ್ತಿಗೆ ಸೇರುತ್ತದೆ. ಮುಂದಿನ 1 ವಾರದೊಳಗಾಗಿ ಈ ಎರಡೂ ಕಡೆಯ ಎಂಜಿನಿಯರ್‌ಗಳು ರಸ್ತೆಯ ಡಾಮರು ಕಾಮಗಾರಿ ಮತ್ತು ರಸ್ತೆಯ ಮಧ್ಯದಲ್ಲಿ ಬರುವ ಕಿರು ನದಿಗೆ ಸೇತುವೆಯ ಒಟ್ಟು ಅಂದಾಜು ಮೌಲ್ಯ ಮತ್ತು ಯೋಜನಾ ವರದಿಯನ್ನು ಒಂದುಗೂಡಿಸುವ ಕಾರ್ಯ ನಡೆಸಲಿದ್ದಾರೆ.
ಕೊಕ್ಕಡ ಭಾಗದ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಮತ್ತು ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಅವರು ಈ ಒಟ್ಟು ರಸ್ತೆಯ ವರದಿಗೆ ಪೂರಕವಾಗಿ ತಮ್ಮ ಕ್ಷೇತ್ರದ ಶಾಸಕರಿಂದ ರಸ್ತೆ ಮೇಲ್ದರ್ಜೆಗೇರಿಸಲು ಕೋರುವ ಪತ್ರವನ್ನು ಪಡೆಯುವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆಯ ಪತ್ರ ತರಿಸಿಕೊಡುವ ಹೊಣೆ ಹೊತ್ತಿದ್ದಾರೆ. ಮುಂದಿನ ಹಂತದಲ್ಲಿ ಈ ಯೋಜನಾ ವರದಿ ಮತ್ತು ಪೂರಕ ದಾಖಲೆಗಳೊಂದಿಗೆ ಸರಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ತಮ್ಮ ಜವಾಬ್ದಾರಿಯನ್ನು ಈ ಭಾಗದ ಜನಪ್ರತಿನಿಧಿಗಳಾಗಿ ನಿರ್ವಹಿಸಲಿದ್ದೇವೆ ಎಂದವರು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.
ಪುತ್ತೂರು ಜಿ.ಪಂ. ಸಹಾಯಕ ಎಂಜಿನಿಯರ್ ಭರತ್, ಬೆಳ್ತಂಗಡಿ ಜಿ.ಪಂ. ಸಹಾಯಕ ಎಂಜಿನಿಯರ್ ಸುಜಿತ್, ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಕೊರಗಪ್ಪ ನಾಯ್ಕ, ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ, ಕೊಕ್ಕಡ ಗ್ರಾ.ಪಂ. ಸದಸ್ಯ ವಿ.ಜೆ. ಮಾಥ್ಯು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.