Advertisement
ಕೇಂದ್ರ ಕೃಷಿ ಸಚಿವಾಲಯದ ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ಪ್ರಶಸ್ತಿಯನ್ನು ಆಯೋಜಿಸಿತ್ತು. ಸಸ್ಯ ತಳಿಗಳ ರಕ್ಷಣೆಯನ್ನು 2001ರಲ್ಲಿ ಕಾನೂನಿನ ಚೌಕಟ್ಟಿಗೆ ಸರಕಾರವು ಅಳವಡಿಸಿತ್ತು. ಯಾರು ತಳಿಗಳ ಸಂರಕ್ಷಣೆ ಮಾಡುತ್ತಾರೋ ಅದರ ಹಕ್ಕನ್ನು ಅವರಿಗೇ ಪ್ರದಾನಿಸುವ ಅಪರೂಪದ ಮತ್ತು ಅಗತ್ಯದ ಕಾಯಿದೆಯಿದು. ಪ್ರಾಧಿಕಾರವು ರಾಷ್ಟ್ರಮಟ್ಟದಲ್ಲಿ ಇಂತಹ ಪ್ರಶಸ್ತಿಯನ್ನು ನೀಡುವುದರ ಮೂಲಕ ತಳಿ ಸಂರಕ್ಷಕರಿಗೆ ಉತ್ತೇಜನ ನೀಡುತ್ತಿದೆ. ಕನ್ನಾಡಿನ ಜೋಯಿಡಾದಲ್ಲಿ ಬಹುಪಾಲು ಕುಣುಬಿ ಸಮುದಾಯದವರೇ ವಾಸ. ಯಾವುದೇ ಮೂಲಸೌಕರ್ಯಗಳು, ಸಾರಿಗೆ ಅನುಕೂಲತೆಗಳಿಂದ ದೂರವಿರುವ ಕುಟುಂಬಗಳ ಮುಖ್ಯ ಕೃಷಿ ಗೆಡ್ಡೆಗೆಣಸು. ಇಲ್ಲಿನ ಮಣ್ಣು, ಹವಾಮಾನದಲ್ಲಿ ಹುಲುಸಾಗಿ ಬೆಳೆಯುವ ಗೆಡ್ಡೆಗಳೇ ಜೀವನಾಧಾರ. 2014ಲ್ಲಿ ಜರುಗಿದ ಗೆಡ್ಡೆ ಮೇಳವು ಕೃಷಿ ಬದುಕಿಗೆ ಹೊಸ ಹಾದಿ ತೋರಿತು. ಜೋಯಿಡಾಕ್ಕೆ ವಿಜ್ಞಾನಿಗಳು ಆಗಮಿಸಿದರು. ಕೃಷಿಕರ ಜತೆ ಸಂವಾದ ಮಾಡಿದರು. ಗೆಡ್ಡೆಗಳ ಇತಿಹಾಸವನ್ನು ದಾಖಲಿಸಿದರು. ಮಾರುಕಟ್ಟೆ ಒದಗಿಸುವತ್ತ ಚಿಂತನೆಗಳು ನಡೆದುವು. ಮೌಲ್ಯವರ್ಧನೆ ಮತ್ತು ಅವುಗಳ ಮಾರಾಟ ಅವಕಾಶಗಳ ರೂಪುರೇಷೆ ಮಾಡಲಾಗಿತ್ತು. ಇವೆಲ್ಲ ಅನುಷ್ಠಾನದತ್ತ ಮುಖ ಮಾಡುತ್ತಿರುವಾಗಲೇ – ಮೂರೇ ವರುಷದಲ್ಲಿ – ಜೋಯಿಡಾ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
Related Articles
Advertisement
ಡಾಕ್ಟರರ ಹಿತ್ತಿಲಿನ ಮಾವಿನ ಮರದಲ್ಲಿ ನೂರು ತಳಿಗಳ ಶಿರಗಳಿವೆ! ಇದರಲ್ಲಿ ಐವತ್ತು ಬಗೆಯವು ಅಧಿಕೃತ ಹೆಸರಿರುವಂತಹುಗಳು. ಎಲ್ಲಿಂದ ತಳಿಗಳನ್ನು ಸಂಗ್ರಹಿಸಿದ್ದಾರೋ ಆ ಊರಿನ ಹೆಸರನ್ನು ಕೆಲವು ತಳಿಯದ್ದಕ್ಕೆ ನಾಮಕರಣ ಮಾಡಿದ್ದಾರೆ. ಒಂದರಲ್ಲಿ ನೂರು ಮಾವು – ಈ ಮರದಿಂದ ತಿನ್ನಲು ಕಾಯುತ್ತಿರುವ ತಳಿಗಳು ಹಲವು. ವಿಭೂತಿ ಉಂಡೆ, ಹಣ್ಣನ್ನು ತೂತು ಮಾಡಿ ಕುಡಿಯುವಂಥದ್ದು, ಸೇಬು ಮಾವು, ಅರುಣಾಚಲದ ತಳಿ… ಇತ್ಯಾದಿ. ದಾಸವಾಳ, ಸೇಬು, ಸೀತಾಫಲ, ನಿಂಬೆ ಗಿಡಗಳಿಗೆ ಡಾಕ್ಟರರ ಕಸಿ ಪ್ರಯೋಗ ಯಶಸ್ವಿ. ಅಡಿ ಗಿಡವೊಂದರಲ್ಲಿ ವಿವಿಧ ತಳಿಗಳ ಫಲಗಳನ್ನು ಪಡೆಯುವ ಯತ್ನ. ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳ ಸಂರಕ್ಷಣೆ ವಿಶೇಷಾಸಕ್ತಿ. ವಿದೇಶಿ ಸಸ್ಯ ಸಂಸಾರಗಳೂ ಇವೆ. ಕೃಷಿ -ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳಿಗೆ ಇವರ ತೋಟ ಕಲಿಕಾ ಪಠ್ಯ. ಮಡದಿ ಸುಧಾ ಹೆಗಲೆಣೆ.
ಎರಡೂ ಪ್ರಶಸ್ತಿಗಳು ತಳಿಸಂರಕ್ಷಣೆಗಾಗಿ ಪ್ರಾಪ್ತವಾದವುಗಳು. ಇಂದು ನಮ್ಮ ಅನೇಕ ಕೃಷಿ ಸಂಶೋಧನಾಲಯಗಳಲ್ಲಿ ತಳಿಗಳು ಸಂಶೋಧನೆಗಳಾಗುತ್ತಿವೆ. ಆ ಸಂಶೋಧನೆಗಳಿಗೆ ಸಿದ್ಧ ವೈಜ್ಞಾನಿಕ ಮಾನದಂಡಗಳಿವೆ. ಆದರೆ ಕೃಷಿಕರೇ ಇಂದು ಸಂಶೋಧಕ ರಾಗುತ್ತಿದ್ದಾರೆ. ಯಾವುದೇ ಪ್ರಶಸ್ತಿಗಳ ಆಸೆಯಿಂದ ಕುಣುಬಿ ಸಮುದಾಯದವರಾಗಲೀ, ಡಾ| ಮೃತ್ಯುಂಜಯಪ್ಪನವರಾಗಲಿ ತಳಿ ಸಂರಕ್ಷಣೆ ಮಾಡಿದ್ದಲ್ಲ. ಸ್ವಯಂ ಆಸಕ್ತಿಯಿಂದ ಮಾಡಿದ ಸಾಧನೆಗೆ ಪ್ರಶಸ್ತಿ ಅರಸಿ ಬಂದಿರುವುದು ಖುಷಿಯ ಸಂಗತಿ. ಇತರರಿಗೂ ಪ್ರೇರಣೆ. ಹಸಿರಿಗೆ ಸಂದ ಗೌರವ. ತಳಿ ಸಂರಕ್ಷಣೆಯಂತಹ ಕೆಲಸದಲ್ಲಿ ಬಂಟ್ವಾಳ ತಾಲೂಕಿನ ‘ಕೇಪು-ಉಬರು ಹಲಸು ಸ್ನೇಹಿಕೂಟ’ವು ಐದಾರು ವರುಷದಿಂದ ತೊಡಗಿಸಿಕೊಂಡಿದೆ. ಎಲ್ಲವೂ ಸ್ವಯಂ ಆಸಕ್ತಿಯಿಂದ ಮಾಡಿದವುಗಳು. ಹಲಸು, ಮಾವು ಮೇಳಗಳನ್ನು ಸಂಘಟಿ ಸುತ್ತಾ, ಲಭ್ಯವಾದ ಹಿಮ್ಮಾಹಿತಿಯ ಜಾಡನ್ನು ಅನುಸರಿಸಿ ಹಲವು ತಳಿಗಳ ಪತ್ತೆ ಮತ್ತು ಸಂರಕ್ಷಣೆಯ ಕೆಲಸಗಳು ಸದ್ದಿಲ್ಲದೆ ನಡೆದಿವೆ.
ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಏನಿಲ್ಲವೆಂದರೂ ಮೂವತ್ತಕ್ಕೂ ಮಿಕ್ಕಿ ಹಲಸು, ಮಾವಿನ ತಳಿಗಳು ಅಭಿವೃದ್ಧಿಯಾಗಿವೆ. ಅಪರೂಪದ ತಳಿಗಳನ್ನು ಉಳಿಸುವ, ಸಂರಕ್ಷಿಸುವ ನೆಲೆಯಲ್ಲಿ ‘ಹಲಸು ಸ್ನೇಹಿ ಕೂಟ’ವು ‘ರುಚಿ ನೋಡಿ-ತಳಿ ಆಯ್ಕೆ’ ಎನ್ನುವ ಹೊಸ ಪ್ರಕ್ರಿಯೆಗೆ ಶ್ರೀಕಾರ ಬರೆದಿತ್ತು. ಸಮಾರಂಭದಲ್ಲಿ ಹತ್ತಾರು ತಳಿಯ ಹಲಸಿನ ಹಣ್ಣುಗಳನ್ನು ಕೃಷಿಕರೇ ರುಚಿ ನೋಡುವುದರ ಮೂಲಕ ತಳಿ ಆಯ್ಕೆಯನ್ನು ಮಾಡಲಾಗಿದೆ. ರುಚಿ, ಬಣ್ಣ, ತಾಳಿಕೆ, ಫಿಲ್ಲಿಂಗ್, ಫಲ ಬಿಡುವ ಸಮಯ… ಮೊದಲಾದ ಮಾನದಂಡಗಳನ್ನಿಟ್ಟು ತಳಿ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ವೈಜ್ಞಾನಿಕ – ಸಂಶೋಧನಾತ್ಮಕವಾದ ಮಾನದಂಡಗಳಿಲ್ಲದೇ ಇರಬಹುದು. ಆದರೆ ಆ ಊರಿನ ಅಪರೂಪದ್ದಾದ, ಹೆಚ್ಚಾಗಿ ಬೆಳಕಿಗೆ ಬಾರದಿರುವ ಉತ್ಕೃಷ್ಟ ತಳಿಗಳು ಅಭಿವೃದ್ಧಿಯಾಗಿವೆ.
ಈಚೆಗೆ ಹಲಸು ಸ್ನೇಹಿ ಕೂಟವು ‘ಪುನರ್ಪುಳಿ ಪ್ರಪಂಚದೊಳಕ್ಕೆ’ ಎನ್ನುವ ಅಪರೂಪದ, ಖಾಸಗಿ ಸಹಭಾಗಿತ್ವದ ಕಲಾಪವನ್ನು ಹಮ್ಮಿಕೊಂಡಿತ್ತು. ಹದಿನೈದು ವಿವಿಧ ಪುನರ್ಪುಳಿ (ಕೋಕಂ) ತಳಿಗಳನ್ನು ತಳಿ ಆಯ್ಕೆ ಪ್ರಕ್ರಿಯೆಗೆ ಒಡ್ಡಲಾಗಿತ್ತು. ಡಾ| ಕತ್ರಿಬೈಲು ಶ್ರೀಕುಮಾರ್ ಮತ್ತು ಪೇರಡ್ಕ ಜಗನ್ನಾಥ ಶೆಟ್ಟರ ಹಿತ್ತಿಲಿನ ಎರಡು ತಳಿಗಳು ಉತ್ಕೃಷ್ಟವೆಂದು ಆಯ್ಕೆಯಾಗಿವೆ. ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳು ಅಭಿವೃದ್ಧಿ ಪಡಿಸಿದ ತಳಿಗಳಷ್ಟೇ ಉತ್ಕೃಷ್ಟ ತಳಿಗಳು ನಮ್ಮ ತೋಟದಲ್ಲೋ, ಕಾಡಿನಲ್ಲೋ ಇರಬಹುದು. ಅವುಗಳನ್ನು ಹುಡುಕಿ ಅಭಿವೃದ್ಧಿಪಡಿಸಬೇಕಾಗಿದೆ. ಪುನರ್ಪುಳಿ ಕಾರ್ಯಾಗಾರದಲ್ಲಿ ಕಸಿ ತಜ್ಞ ಆತ್ರಾಡಿಯ ಗುರುರಾಜ ಬಾಳ್ತಿಲ್ಲಾಯರು ನಾಲ್ಕು ಪುನರ್ಪುಳಿ ತಳಿಗಳನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸಿದ್ದರು. ಕಲಾಪದಲ್ಲಿ ಅವೆಲ್ಲ ಖಾಲಿ! ಕೃಷಿಕರ ಒಲವು ಉತ್ತೇಜಕರ. ತಳಿ ಸಂರಕ್ಷಣೆ ಮತ್ತು ಅಭಿವೃದ್ಧಿ ಜತೆಜತೆಗೆ ಆಗುವ ಕೆಲಸಗಳು. ಮನಸ್ಸಿನಿಂದ ಹುಟ್ಟುವ ತಳಿ ಪ್ರೀತಿಯ ಹತ್ತಾರು ತಳಿ ಸಂರಕ್ಷಕರಿಂದ ಇಂದು ಅಪರೂಪದ ತಳಿಗಳು ಉಳಿದುಕೊಂಡಿವೆ. ತಳಿ ಸಂರಕ್ಷಣೆಗಾಗಿ ಸರಕಾರವು ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆಯನ್ನು ರೂಪುಗೊಳಿಸಿದೆ. ಇದರ ಕಾರ್ಯವ್ಯಾಪ್ತಿಯಲ್ಲಿ ಕನ್ನಾಡಿನ ಇಬ್ಬರು ಪ್ರಶಸ್ತಿಗೆ ಭಾಜನರಾಗಿರುವುದು ಕನ್ನಾಡಿಗೆ ಗೌರವ.
– ನಾ. ಕಾರಂತ ಪೆರಾಜೆ