Advertisement

ಪ್ರವಾಹಕ್ಕೆ ಮುಳುಗಿದ ನೇಕಾರಿಕೆ!

11:45 AM Oct 15, 2019 | Suhan S |

ಬಾಗಲಕೋಟೆ: ಕಳೆದ ಆಗಸ್ಟ್‌ ತಿಂಗಳಲ್ಲಿ ಬಂದ ಭೀಕರ ಪ್ರವಾಹಕ್ಕೆ ಜಿಲ್ಲೆಯ ನೇಕಾರಿಕೆಯೇ ಮುಳುಗಿ ಹೋಗಿದೆ. ಪ್ರವಾಹ ಭೀಕರತೆಯ ಕರಿ ನೆರಳಿನಿಂದ ನೇಕಾರರು ಇಂದಿಗೂ ಹೊರ ಬಂದಿಲ್ಲ. ಸರ್ಕಾರ ಘೋಷಿಸಿದ, ಪರಿಹಾರ ಕಚ್ಚಾ ವಸ್ತು ಖರೀದಿಸಲೂ ಸಾಕಾಗಲ್ಲ ಎಂಬ ಕೊರಗು ನೇಕಾರರ ವಲಯದಿಂದ ಕೇಳಿ ಬರುತ್ತಿದೆ.

Advertisement

ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯ ನೇಕಾರರು ದೊಡ್ಡ ಹಾನಿ ಅನುಭವಿಸಿದ್ದಾರೆ. ಪ್ರತಿ ಮನುಷ್ಯನಿಗೆ ಉತ್ತಮ ಬಟ್ಟೆ ನೇಯ್ದು, ಅವರ ಮಾನ ಕಾಪಾಡುವ ನೇಕಾರರ ಮಗ್ಗಗಳು ಇಂದಿಗೂ ನೀರಿನಲ್ಲಿ ನಿಂತು ಬೆತ್ತಲಾಗಿವೆ. ಆದರೆ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಹೃದಯ ವೈಶಾಲ್ಯತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೂಕ್ತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಬೇಸರ ವ್ಯಕ್ತವಾಗಿದೆ.

ಬಟ್ಟೆ ಬೇಕು; ನಿಯಮದಡಿ ಬರಲ್ಲ: ನೇಕಾರರು ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಹಾನಿ ಅನುಭವಿಸಿದರೆ ಅವರಿಗೆ ಸೂಕ್ತ ಪರಿಹಾರ ಕೊಡಲು ಕೇಂದ್ರದ ಎನ್‌ಡಿಆರ್‌ಎಫ್‌ ಇಲ್ಲವೇ ರಾಜ್ಯದ ಎಸ್‌ಡಿಆರ್‌ಎಫ್‌ ನಿಯಮಗಳಲ್ಲಿ ಅವಕಾಶವೇ ಇಲ್ಲ. ನೇಕಾರರಿಗೆ ಸಹಾಯಧನ ರೂಪದಲ್ಲಿ ಕಚ್ಚಾ ವಸ್ತುಗಳ ಪೂರೈಕೆ ಸಹಿತ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲೆಂದೇ ಇರುವ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂಬ ಅಸಮಾಧಾನವೂ ಇದೆ. ನೇಕಾರರು ನಿತ್ಯ ಕಷ್ಟಪಟ್ಟು ನೇಯ್ಗೆ ಮಾಡುವ ಬಟ್ಟೆ ಮಾತ್ರ ಎಲ್ಲರಿಗೂ ಬೇಕು. ಆದರೆ, ಅವರಿಗೆ ಪ್ರತಿ ಹಂತದಲ್ಲೂ ನೆರವಾಗಲು, ಸರ್ಕಾರಿ ನಿಯಮಗಳಡಿ ತಿದ್ದುಪಡಿ ತರಲು ಈವರೆಗೂ ಯಾರೂ ಮುಂದಾಗಿಲ್ಲ.

ನೀರಿನಲ್ಲಿದ್ದ ಮಗ್ಗಗಳು: ಕೃಷ್ಣಾ ನದಿ ಪ್ರವಾಹದಿಂದ ರಬಕವಿ, ರಾಮಪುರ ಭಾಗದಲ್ಲಿ ನೇಕಾರರು ಅತಿ ಹೆಚ್ಚು ಹಾನಿ ಅನುಭವಿಸಿದ್ದಾರೆ. ರಬಕವಿ ಒಂದೇ ಪಟ್ಟಣದಲ್ಲಿ 126 ವಿದ್ಯುತ್‌ ಮಗ್ಗಗಳು, ಸುಮಾರು 300ಕ್ಕೂ ಹೆಚ್ಚು ಕೈಮಗ್ಗಗಳು ಆ. 3ರಿಂದ 8ರವರೆಗೆ ಸಂಪೂರ್ಣ ನೀರಿನಲ್ಲೇ ನಿಂತಿದ್ದವು. ಹೀಗಾಗಿ ರಬಕವಿಯ ಮುತ್ತೂರಗಲ್ಲಿ, ಹೊಸಪೇಟ ಗಲ್ಲಿ, ಬಸವೇಶ್ವರ ದೇವಸ್ಥಾನ ಸುತ್ತಲೂ ಅತಿ ಹೆಚ್ಚಾಗಿ ಇರುವ ನೇಕಾರರು, ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಂದು ನೀರಿನಲ್ಲಿ ಮುಳುಗಿದ ಮಗ್ಗಗಳು ಹಾಗೂ ಲಕ್ಷಾಂತರ ಮೊತ್ತದ ಕಚ್ಚಾ ವಸ್ತುಗಳು ಪ್ರವಾಹ ನೀರಿನಲ್ಲಿ ತೇಲಿವೆ. ಅದನ್ನು ಮರಳಿ ಬಳಸಲು ಆಗಿಲ್ಲ. ಇನ್ನು ವಿದ್ಯುತ್‌ ಮಗ್ಗ, ವೈಡಿಂಗ್‌, ವಾಸಿಂಗ್‌ ಹಾಗೂ ಸೈಜಿಂಗ್‌ ಯಂತ್ರಗಳೂ ಕೆಟ್ಟು ಹೋಗಿವೆ. ರಬಕವಿಯ ನೀಲಕಂಠ ಮುತ್ತೂರ ಅವರೊಬ್ಬರಿಗೇ ಸೇರಿದ 10 ವಿದ್ಯುತ್‌ ಮಗ್ಗಗಳು, ಅದರ ಉಪಯಂತ್ರಗಳು ಹಾನಿಯಾಗಿವೆ. ಇವರೊಬ್ಬರೇ ಲಕ್ಷಾಂತರ ಹಾನಿ ಅನುಭವಿಸಿದ್ದು, ಕೇವಲ 25 ಸಾವಿರ ಪರಿಹಾರ ಕೊಟ್ಟರೆ ಏನು ಉಪಯೋಗ. ಪ್ರವಾಹದಿಂದ ರಬಕವಿ, ರಾಮಪುರ

Advertisement

ಅಷ್ಟೇ ಅಲ್ಲ ಹುನಗುಂದ ತಾಲೂಕಿನ ಕಮತಗಿ ಸೇರಿದಂತೆ ಜಿಲ್ಲೆಯ ಹಲವೆಡೆ ನೇಕಾರರು ಹಾನಿ ಅನುಭವಿಸಿದ್ದಾರೆ. ಅದರ ವರದಿಯನ್ನು ಇಲಾಖೆ ನೀಡಿದೆ. ಆದರೆ, ನೇಕಾರರಿಗೆ ತಕ್ಷಣ ಸ್ಪಂದಿಸುವ ಕಾರ್ಯ ಈವರೆಗೂ ನಡೆದಿಲ್ಲ ಎನ್ನಲಾಗಿದೆ.

ಸಿಎಂ ಸೂಚನೆಗೆ ಬೆಲೆ ಇಲ್ಲ: ಈಚೆಗೆ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು-ಅಧಿಕಾರಿಗಳ ಮಹತ್ವದ ಸಭೆ ನಡೆಸಿ, ಪ್ರವಾಹ ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ್ದರು. ಈ ವೇಳೆ ತೇರದಾಳದ ಶಾಸಕ ಸಿದ್ದು ಸವದಿ, ಪ್ರವಾಹದಿಂದ ನೇಕಾರರು ಹಾನಿ ಅನುಭವಿಸಿದ್ದು, ಅವರಿಗೆ ಎನ್‌ಡಿಆರ್‌ ಎಫ್‌, ಎಸ್‌ಡಿಆರ್‌ಎಫ್‌ ನಿಯಮಗಳಡಿ ಪರಿಹಾರ ಬರುತ್ತಿಲ್ಲ. ಇದೊಂದು ವಿಶೇಷ ಪ್ರಕರಣವೆಂದು ನೇಕಾರರಿಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದರು. ಆ ಸಭೆಯಲ್ಲೇ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹದಿಂದ ಹಾನಿಯಾದ ನೇಕಾರ ಕುಟುಂಬಕ್ಕೆ ತಲಾ 25 ಸಾವಿರ ಪರಿಹಾರ ಘೋಷಿಸಿದ್ದರು. ನಾಳೆಯಿಂದಲೇ ಪರಿಹಾರಧನ ನೀಡುವಂತೆಯೂ ನಿರ್ದೇಶನ ನೀಡಿದ್ದರು. ಆದರೆ, ಸಿಎಂ ಬಂದು ಹೋಗಿ, 10 ದಿನ ಕಳೆದರೂ ನೇಕಾರರಿಗೆ 10 ಪೈಸೆ ಪರಿಹಾರ ಕೊಟ್ಟಿಲ್ಲ ಎಂಬುದು ನೇಕಾರರ ಆಕ್ರೋಶ.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next