ಉಡುಪಿ: ಕಳೆದ ರವಿವಾರ ಮಲ್ಪೆ ಸಮೀಪದ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ ಮನೆಗೆ ಮಂಗಳವಾರ ಎಂಎಲ್ ಸಿ ಮಂಜುನಾಥ ಭಂಡಾರಿ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಅಲ್ಲದೆ ಗೃಹ ಸಚಿವ ಪರಮೇಶ್ವರ್ ಅವರು ದೂರವಾಣಿ ಮೂಲಕ ಮನೆಯ ಯಜಮಾನ ನೂರ್ ಮೊಹಮ್ಮದ್ ಜೊತೆ ಮಾತುಕತೆ ನಡೆಸಿದರು. ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವ ಭರವಸೆ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು ಕುಟುಂಬಕ್ಕೆ ಭದ್ರತೆ ನೀಡುವುದಾಗಿ ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ ಭಂಡಾರಿ ಅವರು, ಶೀಘ್ರ ಕೊಲೆಗಾರನ ಬಂಧಿಸುವ ಭರವಸೆ ಎಸ್ಪಿಯವರು ನೀಡಿದ್ದಾರೆ. ತನಿಖೆಯ ವಿಚಾರ ಕೇಳುವುದು ಮತ್ತು ಹೇಳುವುದು ಸರಿಯಲ್ಲ. ಕೊಲೆಗಾರ ಮಾನವ ಕುಲಕ್ಕೆ ಕಪ್ಪು ಚುಕ್ಕಿ. ಇಂತಹ ಘಟನೆ ಮತ್ತೊಂದು ಮರುಕಳಿಸಬಾರದು. ಆಡಳಿತ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ಅದನ್ನು ಸರಿಪಡಿಸುತ್ತೇವೆ. ಸಲಹೆ ಸೂಚನೆಗಳನ್ನು ತೆಗೆದುಕೊಂಡು ಸರಕಾರಕ್ಕೆ ಮುಟ್ಟಿಸುತ್ತೇನೆ. ಆರೋಪಿ ಯಾರೇ ಆಗಿರಲಿ ಎಂಥವನೇ ಆಗಿರಲಿ, ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದರು.
ಈ ಘಟನೆ ನಡೆದಾಗ ನಾನು ಗೃಹ ಸಚಿವರ ಜೊತೆಗಿದ್ದೆ. ಉಡುಪಿಗೆ ಬಂದ ತಕ್ಷಣ ಭೇಟಿ ನೀಡಲು ಸೂಚಿಸಿದ್ದರು. ಕಾಂಗ್ರೆಸ್ ಮುಖಂಡರ ಜೊತೆ ಬಂದು ಸಾಂತ್ವನ ಹೇಳಿದ್ದೇನೆ. ಸುತ್ತಮುತ್ತಲಿನ ಜನರು ಕುಟುಂಬದ ಜೊತೆಗಿದ್ದಾರೆ. ಇದು ಮಾನವ ಕುಲದಲ್ಲೇ ಕೃತ್ಯ ಎಂತಹ ಘಟನೆ ಮರುಕಳಿಸಬಾರದು. ಇದು ನಂಬಲು ಸಾಧ್ಯವಿಲ್ಲದ ಕೃತ್ಯ ಎಂದರು.
ಇದನ್ನೂ ಓದಿ:World Cup 2023; ಸೆಮಿ ಫೈನಲ್ ದಿನ ಮಳೆ ಬಂದರೆ ಯಾವ ತಂಡಕ್ಕೆ ಲಾಭ? ಮೀಸಲು ದಿನದ ನಿಯಮವೇನು?
ಇದರಲ್ಲಿ ಸರ್ಕಾರಕ್ಕೆ ಒತ್ತಡ ತರಬೇಕಾದ ಅಗತ್ಯ ಇಲ್ಲ. ಸಂಪೂರ್ಣ ಸರಕಾರ ಕುಟುಂಬದ ಜೊತೆಗಿದೆ. ಗೃಹ ಸಚಿವರು ಕೂಡ ಕುಟುಂಬದ ಜೊತೆಗಿದ್ದಾರೆ. ನಾವೆಲ್ಲ ಒಂದು ಕುಟುಂಬ, ಯಾರಿಗೆ ತೊಂದರೆಯಾದರೂ ತನಗೆ ತೊಂದರೆಯಾಗಿದೆ ಎಂದು ಸರ್ಕಾರ ಭಾವಿಸುತ್ತದೆ. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಮಂಜುನಾಥ್ ಭಂಡಾರಿ ಹೇಳಿದರು.
ಸಿಸಿಟಿವಿ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದು ವೇಳೆ ಅಗತ್ಯವಿದ್ದರೆ ನನ್ನ ಶಾಸಕರ ನಿಧಿಯಿಂದ ಸಿಸಿ ಟಿವಿ ಹಾಕಿಸುತ್ತೇನೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಹೇಳಿದ್ದೇನೆ. ನಾನು ಜನಪ್ರತಿನಿಧಿಯಾಗಿ ನಾನು ಕೂಡ ಇಂತಹ ಘಟನೆಗಳಿಗೆ ಹೊಣೆಯಾಗುತ್ತೇನೆ ಎಂದರು.