ಹೊಸದಿಲ್ಲಿ: ಗರ್ಭಧಾರಣೆ, ಮಗು ಹೊಂದುವ ಕುರಿತ ನಿರ್ಧಾರದ ಹಕ್ಕು ಮಹಿಳೆಯರದ್ದೇ ಆಗಲಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ಹೇಳಿದ್ದಾರೆ.
ಭಾರತದ ನ್ಯಾಯಾಲಯಗಳಲ್ಲಿ ಸಂತಾ ನೋತ್ಪತ್ತಿಯ ಹಕ್ಕುಗಳ ಮಾನ್ಯತೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಂತಾನೋತ್ಪತ್ತಿಯ ನಿರ್ಧಾರ ಪುರುಷರದ್ದೇ ಎಂಬಂತೆ ಇದೆ. ಜತೆಗೆ ಹೆಣ್ಣಿನ ಮೇಲೆ ಅವರ ನಿರ್ಧಾರವನ್ನು ಹೇರಲಾಗು ತ್ತದೆ. ಸಂತಾನೋತ್ಪತ್ತಿಯ ಹಕ್ಕಿನ ವಿಚಾರಕ್ಕೆ ಬಂದಾಗ ಮಹಿಳೆಯ ನಿರ್ಧಾರಗಳನ್ನು ಕೇಳಲಾಗುವುದೇ ಇಲ್ಲ. ಈ ವಿಚಾರದಲ್ಲಿ ನನಗೆ ನೆರವು ನೀಡಲು ಸಾಧ್ಯವಿಲ್ಲ. ಆದರೆ ನಾವು ಮಾನವೀಯತೆಯನ್ನು ಹೇಗೆ ಕಳೆದುಕೊಂಡಿದ್ದೇವೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.
ನಾವಿಂದು 21ನೇ ಶತಮಾನದಲ್ಲಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದೇವೆ. ಬಾಹ್ಯಾಕಾಶಕ್ಕೆ ನಿರಂತರ ಸಂಚರಿಸು ವವರಾಗಿದ್ದೇವೆ. ಆದರೆ ನಮಗೆ ಮಹಿಳೆಗೆ ಮಾನವೀಯತೆಯನ್ನು ತೋರಿಸಲು ಸಾಧ್ಯ ವಾಗಿಲ್ಲ. ಇದು ಕಟು ಸತ್ಯ ಎಂದು ಹೇಳಿದರು. ಸಾಮಾನ್ಯವಾಗಿ ಸಂತಾನೋತ್ಪತ್ತಿಯ ನಿರ್ಧಾರ ಗಂಡ, ಕುಟುಂಬದ್ದು, ಹಿರಿಯರು ಹೇಳಿದಂತೆ ಎಂಬಂತೆ ಇದೆ. ಗಂಡು ಅಥವಾ ಹೆಣ್ಣು ಮಗು ಬೇಕು ಎಂಬುದೂ ಇದೆ. ಇದೇ ಕಾರಣ ಭ್ರೂಣ ಹತ್ಯೆಯ ಪ್ರಕರಣಗಳೂ ನಡೆ ಯುತ್ತವೆ. ಆದರೆ ಸಂತಾನೋತ್ಪತ್ತಿಯ ವಿಚಾರದಲ್ಲಿ ನಿಜ ವಾದ ಹಕ್ಕು ಮಹಿಳೆಯದ್ದು. ಗರ್ಭಧಾರಣೆ ತಡೆ, ಗರ್ಭ ಪಾತ, ಮಗು ಹೊಂದುವ ನಿರ್ಧಾರ ಆಕೆಯದ್ದೇ. ಅದು ಆಕೆಯ ದೇಹ. ಆದ್ದರಿಂದ ನಿರ್ಧಾರ ಕೈಗೊಳ್ಳುವ ಹಕ್ಕೂ ಆಕೆಯದ್ದೇ ಎಂದು ನ್ಯಾ| ಸಿಕ್ರಿ ಹೇಳಿದ್ದಾರೆ.
ಮಾನವ ಹಕ್ಕುಗಳ ಕುರಿತಂತೆ ನ್ಯಾಯಾಂಗ ಕಾನೂನಿನಲ್ಲಿ ಏನು ಹೇಳಿದೆಯೋ ಅದನ್ನೇ ಮಾಡುತ್ತದೆ. ಕಾನೂನಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ನಾವು ಸಮಾನತೆ ವಿಚಾರ ಮಾತನಾಡುವಾಗ ಮಹಿಳೆಯೂ ತನ್ನ ಸಂಗಾತಿಯೊಂದಿಗೆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆಗಬೇಕು. ಗಂಡ ತನ್ನ ನಿರ್ಧಾರವನ್ನು ಆಕೆ ಮೇಲೆ ಹೇರುವುದಲ್ಲ. ಯಾಕೆಂದರೆ, ಸಂತಾನೋತ್ಪತ್ತಿ ವಿಚಾರದಲ್ಲಿ ಹಕ್ಕುಗಳ ಬಾಧ್ಯತೆ ಇರುವುದು ಮಹಿಳೆಗೆ. ತನ್ನ ದೇಹದಲ್ಲಿ ಆಕೆ ಕುಡಿಯನ್ನು ಧರಿಸುತ್ತಾಳೆ. ಹೀಗೆ ಬೇರಾರಿಗೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಗರ್ಭ ಧರಿಸುವುದು ಆಕೆಯ ಹಕ್ಕಾಗಿರುತ್ತದೆ. ಈ ವಿಚಾರದಲ್ಲಿ ಮಹಿಳೆಯ ನಿರ್ಧಾರವನ್ನು ಗೌರವಿಸುವುದು ಮಾನವನ ಘನತೆಯ ಸಂಗತಿಯೂ ಹೌದು ಎಂದು ಹೇಳಿದ್ದಾರೆ.
ಜತೆಗೆ ಮಹಿಳೆಯ ಹಕ್ಕಿನ ಬಗ್ಗೆ ಸಾಮಾಜಿಕ ಬದಲಾವಣೆಯಾಗದ ಹೊರತು ಯಾವುದೇ ಕಾನೂನುಗಳು ಪರಿಣಾಮ ಬೀರಲಾರವು. ಕಾನೂನುಗಳು ಸಮಾಜದಲ್ಲಿನ ಕೆಟ್ಟದ್ದನ್ನು ತಡೆಯಲು ಮಾತ್ರ ಸಹಕಾರಿ. ಆದರೆ ಬದಲಾವಣೆಯನ್ನು ತರಲು ಸಾಧ್ಯವಾಗುವುದಿಲ್ಲ. ಮಹಿಳೆ ಹಕ್ಕಿನ ಕುರಿತ ವಿಚಾರದಲ್ಲಿ ನಮ್ಮ ಸಮಾಜ, ನಮ್ಮ ಬುದ್ಧಿಯಲ್ಲಿ ಬದಲಾವಣೆ ಯಾಗಬೇಕು. ನಾವು ಅರ್ಧಾಂಗಿ ಎನ್ನುತ್ತೇವೆ. ಆದರೆ ಅವಳಿಗೆ ಅರ್ಧ ಕೊಡಲು ತಯಾರಿರುವುದಿಲ್ಲ. ಆದರೆ ಹಕ್ಕಿನಲ್ಲಾದರೂ ಆಕೆಗೆ ಅರ್ಧ ಬಿಟ್ಟುಕೊಡಬೇಕು ಎಂದು ಮಾರ್ಮಿಕವಾಗಿ ನ್ಯಾ| ಸಿಕ್ರಿ ಹೇಳಿದರು.