ರಾಮನಗರ: ಎನ್.ಡಿ.ಎ ಜೊತೆಗೆ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಮಾಧ್ಯಮಗಳ ಚರ್ಚೆಯನ್ನು ನಾನೂ ನೋಡುತ್ತಿದ್ದೇನೆ. ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂಬ ಸುದ್ದಿ ಯಾಕೆ ಚರ್ಚೆಯಾಗುತ್ತಿದೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಹಾಘಟಬಂಧನದ ಆಹ್ವಾನವೂ ಇಲ್ಲ, ಎನ್.ಡಿ.ಎ ಆಹ್ವಾನವೂ ಇಲ್ಲ. ಆಹ್ವಾನ ಬಂದಾಗ ಅದನ್ನು ನೋಡೋಣ. ಆಹ್ವಾನ ಬಂದರೆ ಏನು ಮಾಡಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದ ಹೇಳಿದರು.
ಎಚ್ಡಿಕೆಗೆ ವಿಪಕ್ಷ ನಾಯಕನ ಸ್ಥಾನಮಾನ ನೀಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಡಿನ ಜನತೆ ನನನ್ನು ಸ್ಥಾನಮಾನದಿಂದ ಗುರುತಿಸಿಲ್ಲ. ನಾನು ಎಲ್ಲೇ ಹೋದರೂ ನನ್ನ ವೈಯಕ್ತಿಕ ವರ್ಚಸ್ಸಿನಿಂದ ಗುರುತಿಸ್ತಾರೆ. ಆ ಸ್ಥಾನಮಾನಗಳಿಂದ ವರ್ಚಸ್ಸು ಗಳಿಸಬೇಕಿಲ್ಲ. ನಾನೂ ಈಗಲೂ ಬಿಜೆಪಿ ನಾಯಕರಲ್ಲಿ ಮನವಿ ಮಾಡ್ತೇನೆ. 65 ಮಂದಿ ಗೆದ್ದಿದ್ದಾರೆ, ಹಲವು ಹಿರಿಯ ನಾಯಕರಿದ್ದಾರೆ. ಒಬ್ಬ ಸಮರ್ಥ ನಾಯಕನ್ನ ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ. ದೆಹಲಿಯ ನಾಯಕರೂ ಕಾಲಹರಣ ಮಾಡಬೇಡಿ ಎಂದು ನಾನು ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ:ರಜಿನಿ “Thalaivar 171”ಗೆ ಕನಕರಾಜ್ ಆ್ಯಕ್ಷನ್ ಕಟ್: ಸ್ಟಾರ್ ನಟನಿಂದ ಗುಟ್ಟು ರಿವೀಲ್
ನಮ್ಮ ಪಕ್ಷದಿಂದ ಯಾವುದೇ ಡಿಮ್ಯಾಂಡ್ ಇಲ್ಲ, ಮಾತುಕತೆಯೂ ಆಗಿಲ್ಲ. ಜೆಡಿಎಸ್ 19 ಸ್ಥಾನ ಗೆದ್ದಿದೆ, ಬಿಜೆಪಿ 65 ಸ್ಥಾನ ಗೆದ್ದಿದೆ. ಅಲ್ಲಿಯೂ ಮಾಜಿ ಸಿಎಂ ಸೇರಿ ಅನೇಕ ಮಾಜಿ ಮಂತ್ರಿಗಳಿದ್ದಾರೆ. ಹಾಗಾಗಿ ಸೂಕ್ತ ವ್ಯಕ್ತಿ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದರು.
ರಾಷ್ಟ್ರ ರಾಜಕಾರಣಕ್ಕೆ ಎಚ್ಡಿಕೆ ಒಲವು ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವ ರಾಷ್ಟ್ರ ರಾಜಕಾರಣದ ಒಲವಿಲ್ಲ. ಕೇಂದ್ರದಲ್ಲಿ ಮಂತ್ರಿ ಮಾಡುವ ವಿಚಾರವೂ ಗೊತ್ತಿಲ್ಲ. ಯಾವ ವಿರೋಧ ಪಕ್ಷದ ಸ್ಥಾನವೂ ಬೇಕಿಲ್ಲ. ಒಬ್ಬ ಸಾಮಾನ್ಯ ವಿಧಾನಸಭಾ ಸದಸ್ಯನಾಗಿ ರಾಜ್ಯದ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.