Advertisement

ವಿದ್ಯೆ-ಜ್ಞಾನ ಪ್ರಸರಣ ವಿಕೇಂದ್ರೀಕರಣವಾಗಲಿ

12:11 PM Jan 25, 2017 | |

ದಾವಣಗೆರೆ: ಪ್ರಸಕ್ತ ವಾತಾವರಣದಲ್ಲಿ ವಿದ್ಯೆ ಮತ್ತು ಜ್ಞಾನ ಪ್ರಸರಣ ಪ್ರಕ್ರಿಯೆ ಏಕಪಕ್ಷೀಯವಾಗದೆ ವಿಕೇಂದ್ರೀಕರಣವಾಗಬೇಕಾದ ತುರ್ತು ಅಗತ್ಯತೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ| ಬಂಜಗೆರೆ ಜಯಪ್ರಕಾಶ್‌ ಪ್ರತಿಪಾದಿಸಿದ್ದಾರೆ. 

Advertisement

ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಪ್ರಸರಾಂಗ ಉದ್ಘಾಟನೆ ಮತ್ತು We Express ರಾಷ್ಟ್ರೀಯ ನಿಯತ ಕಾಲಿಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯೆ-ಜ್ಞಾನ ಪ್ರಸರಣ ಏಕಪಕ್ಷೀಯವಾಗುವುದು ಅತ್ಯಂತ ಅಪಾಯಕಾರಿ. ಸರ್ವ ಪ್ರಾತಿನಿಧ್ಯ ಹಾಗೂ ಸಾರ್ವತ್ರಿಕ ಐಕ್ಯತೆಗೆ ವಿದ್ಯೆ ಮತ್ತು ಜ್ಞಾನ ಪ್ರಸರಣ ವಿಕೇಂದ್ರೀಕರಣವಾಗಬೇಕು ಎಂದರು. 

ವಿಶ್ವವಿದ್ಯಾಲಯಗಳು ಮಾಡುತ್ತಿರುವ ಪ್ರಸಾರಾಂಗ ವಿಭಾಗವನ್ನು ಸರ್ಕಾರಿ ಕಾಲೇಜು ಮಾಡಿರುವುದು ನಿಜಕ್ಕೂ ಎಲ್ಲ ಕಾಲೇಜುಗಳಿಗೆ ಮಾದರಿ. ಕಾಲೇಜುಗಳಲ್ಲಿ ಪ್ರಸಾರಾಂಗ ಪ್ರಾರಂಭಿಸಿ, ನಿಯತ ಕಾಲಿಕೆ, ಸಣ್ಣ-ಪುಟ್ಟ ಪುಸ್ತಕ ಹೊರ ತಂದು ಸಮಾಜದ ಇತರೆಯವರಿಗೆ ಮುಟ್ಟಿಸುವ  ಕೆಲಸ ಮಾಡಬೇಕು. ಆಗ ನಿಜ ಅರ್ಥದಲ್ಲಿ ವಿದ್ಯೆ ಮತ್ತು ಜ್ಞಾನ ಪ್ರಸರಣ ಆಗುತ್ತದೆ. 

ವಿದ್ಯಾರ್ಥಿಗಳು ಕನಿಷ್ಠಪಕ್ಷ 25 ರೂಪಾಯಿ, ಖಾಯಂ ಉಪನ್ಯಾಸಕರು 1 ಸಾವಿರ, ಅತಿಥಿ ಉಪನ್ಯಾಸಕರು 100 ರೂಪಾಯಿ ದೇಣಿಗೆ ನೀಡಿದರೆ ಪ್ರಸಾರಾಂಗಕ್ಕೆ ಸಾಕಷ್ಟು ಅನುದಾನ ಸಿಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿಗದಿತ ಅನುದಾನ ದೊರಕಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಸಹಕಾರದೊಂದಿಗೆ ಒಳ್ಳೆಯ ಪುಸ್ತಕ ಹೊರ ತರಬೇಕು, ವಾಚನಾಸಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಇಂದಿನ ವಿದ್ಯಾರ್ಥಿಗಳು, ಯುವ ಜನರು ಮೋಜು ಮಾಡುವುದೇ ಜೀವನ ಎಂಬಂತೆ ವರ್ತಿಸುತ್ತಿದ್ದಾರೆ. ಸಾಮಾಜಿಕ ಆಗುಹೋಗುಗಳಿಂದ ಬಹು ದೂರ ಸಾಗುತ್ತಿದ್ದಾರೆ. ಜಿಯೋನಂತಹ ಉಚಿತ ಅಂತರ್ಜಾಲ ವ್ಯವಸ್ಥೆಯ ಮೊಬೈಲ್‌ ಸುಲಭವಾಗಿ ದೊರೆಯುತ್ತಿರುವುದು ವಿದ್ಯಾರ್ಥಿ, ಯುವ ಸಮುದಾಯ ಸಮಾಜದಲ್ಲಿನ ಜ್ವಲಂತ ಸಮಸ್ಯೆಗೆ ಸ್ಪಂದಿಸದೇ ತಮ್ಮ ಪಾಡಿಗೆ ತಾವು ಇರಲಿ ಎಂಬ ಏಕೈಕ ಕಾರಣಕ್ಕೆ.

Advertisement

ಸಮಾಜದಲ್ಲಿನ ಇನ್ನೊಬ್ಬರ ನೋವಿಗೆ, ಸಂವೇದನೆಗೆ ಸ್ಪಂದಿಸದ ಸಾಮಾಜಿಕ ಹೊಣೆಗಾರಿಕೆ ಇಲ್ಲದ ವಿದ್ಯೆ ವ್ಯರ್ಥ. ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆ ಹೊರುವ ನೈತಿಕತೆ ಬೆಳೆಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಅದು ತಮ್ಮ ಪ್ರಕಾರ ವೈಯಕ್ತಿಕ ಅನೈತಿಕತೆ. ವಿದ್ಯಾರ್ಥಿಗಳು ಜನರ ಸಮಸ್ಯೆಗೆ ಸ್ಪಂದಿಸಿ, ಎಲ್ಲರಿಗೂ ಎಲ್ಲವೂ ದೊರೆಯುವಂತಾಗಬೇಕು ಎಂಬ ವಾತಾವರಣ ನಿರ್ಮಾಣ ಮಾಡಬೇಕು.

 ಉತ್ತಮ ವ್ಯಕ್ತಿತ್ವ, ವಿವೇಕ ನಮ್ಮೊಳಗಿನಿಂದ ಬಂದಾಗ ಮಾತ್ರ ಒಳ್ಳೆಯ, ಸುಭದ್ರ ದೇಶ ಕಟ್ಟಲು ಸಾಧ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳು, ಯುವ ಜನಾಂಗ ಕೇವಲ ವಿಲಾಸಿ ಜೀವನಕ್ಕೆ ಇಷ್ಟ ಪಡದೆ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಜೀವನದ ಗುರಿ ತಲುಪಿಸುವಂತಹ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವಂತಹ ಶಕ್ತಿಯನ್ನು ಸಾಹಿತ್ಯ ಅಧ್ಯಯನ ನೀಡುತ್ತದೆ. 

ಇಂದು ಒಬ್ಬ ಮನುಷ್ಯನ ಪ್ರತಿಭೆ, ವ್ಯಕ್ತಿತ್ವವನ್ನು ಕೇವಲ ಅಂಕಪಟ್ಟಿಗಳಿರುವ ಸಂಖ್ಯೆಗಳ ಆಧಾರದಲ್ಲಿ ಅಳೆಯುತ್ತಿದೇವೆ. ಶಿಕ್ಷಣ ಎನ್ನುವುದು ತನ್ನನ್ನು ತಾನು ಅರಿಯುವ ಜೊತೆಗೆ ಇತರರ ನೋವನ್ನ ಅರ್ಥ ಮಾಡಿಕೊಳ್ಳುವುದು, ಸ್ಪಂದಿಸುವುದನ್ನ ಕಲಿಸಬೇಕು. ಕಾಲೇಜುಗಳು ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆ ಹೊರುವಂತಹ ಸಾಂಸ್ಕೃತಿಕ ವಾತಾವರಣದ ಕೇಂದ್ರಗಳಾಗಬೇಕು ಎಂದರು. 

ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಕಲಮರಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ| ಆರ್‌. ತಿಪ್ಪಾರೆಡ್ಡಿ, ಉಪನ್ಯಾಸಕ ಡಾ| ಗಂಗಾಧರಯ್ಯ ಹಿರೇಮs…, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ್‌ ಇದ್ದರು. ಕೆ. ಪೂಜಾ ಪ್ರಾರ್ಥಿಸಿದರು. ಡಾ| ಜಿ.ಎಂ. ದಿನೇಶ್‌ ಸ್ವಾಗತಿಸಿದರು. ಪ್ರೊ| ಎಂ.ಎಲ್‌. ತ್ರಿವೇಣಿ ವಂದಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next