Advertisement

ಸಂಪುಟಕ್ಕೆ ನೆರೆ ಬಿಸಿ; ಕೇಂದ್ರ ಸರಕಾರದಿಂದ ಇನ್ನೂ ತಲುಪದ ನೆರೆ ಪರಿಹಾರ

12:06 PM Oct 05, 2019 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ನೆರೆ ಪರಿಹಾರ ವಿಳಂಬ ಧೋರಣೆಯು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಮಾರ್ದನಿಸಿದೆ.

Advertisement

ಕೇಂದ್ರದಿಂದ ಇನ್ನೂ ಪರಿಹಾರ ಬಿಡುಗಡೆ ಯಾಗದ ಬಗ್ಗೆ ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಸಿಎಂ ಯಡಿಯೂರಪ್ಪ ಅವರು, ಕೇಂದ್ರದಲ್ಲಿ ನಮ್ಮದೇ ಪಕ್ಷದ ಸರಕಾರವಿದ್ದು, ಇಷ್ಟೊತ್ತಿಗೆ ಪರಿಹಾರ ಕೊಡಬೇಕಾಗಿತ್ತು. ಶೀಘ್ರದಲ್ಲೇ ಬರುವ ವಿಶ್ವಾಸವಿದೆ ಎಂದು ಹೇಳಿದರು. ಜತೆಗೆ ಈ ಬಗ್ಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದೂ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನೆರೆ ಪರಿಹಾರ ವಿಚಾರದಲ್ಲಿ ವಿಪಕ್ಷಗಳು ಟೀಕೆ ಯಲ್ಲಿ ತೊಡಗಿವೆ. ನಾವು ಸಮಾಧಾನವಾಗಿ ಉತ್ತರ ನೀಡಬೇಕಾಗಿದೆ. ಅನಗತ್ಯವಾಗಿ ಗೊಂದಲ, ವಿವಾದ ಸೃಷ್ಟಿಸುವುದು ಬೇಡ. ನಾವೇ ಕೇಂದ್ರ ಸರಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

ವಿಪಕ್ಷಗಳಿಗೆ ಆಹಾರವಾಗಬೇಡಿ
ಪರಿಹಾರ ವಿಚಾರದಲ್ಲಿ ವಿಪಕ್ಷಗಳಿಗೆ ಆಹಾರ ವಾಗ ಬೇಡಿ ಎಂದು ತಾಕೀತು ಮಾಡಿದ ಸಿಎಂ, ನಾನೂ 3 ದಿನ ಪ್ರವಾಹ ಪೀಡಿತ ಪ್ರದೇಶ ಗಳಿಗೆ ಭೇಟಿ ನೀಡಲಿದ್ದೇನೆ. ರಾಜ್ಯ ಸರಕಾರದಿಂದ ಕೈಗೊಂಡಿರುವ ಪರಿಹಾರ ಕಾರ್ಯ ಸಂತ್ರಸ್ತರಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಹೇಳಿದರು ಎನ್ನಲಾಗಿದೆ.

ರಾಜ್ಯಕ್ಕೆ ವಿಶೇಷ ಪ್ಯಾಕೇಜ್‌?
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಜೆ.ಸಿ. ಮಾಧು ಸ್ವಾಮಿ, ರಾಜ್ಯಕ್ಕೆ ಒಂದೆರಡು ದಿನಗಳಲ್ಲಿ ಪರಿಹಾರ ಬಿಡುಗಡೆ ಯಾಗಲಿದೆ ಎಂದರು. ಅಷ್ಟೇ ಅಲ್ಲ, ವಿಶೇಷ ಪ್ಯಾಕೇಜ್‌ ದೊರಕುವ ವಿಶ್ವಾಸವೂ ಇದ್ದು, ನಮಗಲ್ಲದೆ ಬೇರೆ ಯಾರಿಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

Advertisement

ಈಗಾಗಲೇ ನೆರೆ ಪರಿಹಾರ ನೀಡುವ ಸಂಬಂಧ ರಾಜ್ಯದ ಇಬ್ಬರು ಅಧಿಕಾರಿಗಳನ್ನು ಕರೆಸಿಕೊಂಡು ಪ್ರಧಾನಿ ಮೋದಿ ಅವರು ಚರ್ಚಿಸಿದ್ದಾರೆ. ನಾವು ವಿಶೇಷ ಪ್ಯಾಕೇಜ್‌ಗಾಗಿಯೇ ಮನವಿ ಮಾಡಿದ್ದೇವೆ ಎಂದು ಸಚಿವರು ಹೇಳಿದರು.

ವಿದೇಶ ಪ್ರವಾಸದಲ್ಲಿದ್ದ ಕಾರಣ ತಡ
ಪ್ರಧಾನಿಯವರು ವಿದೇಶ ಪ್ರವಾಸದ ಲ್ಲಿದ್ದ ಕಾರಣ ಸ್ವಲ್ಪ ವಿಳಂಬವಾಗಿದೆ. ಆದರೆ ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ರಾಜ್ಯ ಸರಕಾರವು ಎಲ್ಲ ರೀತಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುತ್ತಿದೆ. ಇದೇ ಮೊದಲ ಬಾರಿಗೆ ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ. ನೆರವು ಘೋಷಿಸಲಾಗಿದೆ. ಕೇಂದ್ರ ಸರಕಾರ ಎಷ್ಟೇ ಕೊಟ್ಟರೂ ನಾವಂತೂ 5 ಲಕ್ಷ ರೂ. ನುಡಿದಂತೆ ಕೊಡಲೇಬೇಕಲ್ಲವೇ ಎಂದರು.

ಪೂರಕ ಅಂದಾಜು
ಅ.10ರಿಂದ ಆರಂಭವಾಗುವ ಅಧಿವೇಶನದಲ್ಲಿ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯವರು ಮಂಡಿಸಿರುವ ಬಜೆಟ್‌ಗೆ ಅನುಮೋದನೆ ಕೋರುತ್ತೇವೆ. ಸದ್ಯಕ್ಕೆ ಹೊಸ ಬಜೆಟ್‌ ಮಂಡಿಸುವ ಸಾಧ್ಯತೆಯಿಲ್ಲ. ಆದರೆ ನೆರ ಪರಿಹಾರ ಸಂಬಂಧ ಪೂರಕ ಅಂದಾಜು ಮಂಡಿಸ ಲಾಗುವುದು ಎಂದು ಹೇಳಿದರು.ಬಜೆಟ್‌ಗೆ ಅನುಮೋದನೆ ಕೊಡದಿದ್ದರೆ ಲೇಖಾನುದಾನ ಪಡೆಯಬೇಕಾಗುತ್ತದೆ. ಆ ರೀತಿ ಆಗದು ಎಂಬ ವಿಶ್ವಾಸ ನಮಗಿದೆ. ಸದ್ಯಕ್ಕೆ ಅಧಿವೇಶನ ಮೂರು ದಿನ ನಿಗದಿಯಾಗಿದೆ. ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆಯಾಗಿ ವಿಸ್ತರಣೆ ಸಹ ಮಾಡಬಹುದಾಗಿದೆ ಎಂದು ತಿಳಿಸಿದರು.

20 ಕೈದಿಗಳ ಬಿಡುಗಡೆ
ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಅಂಗವಾಗಿ ನಿರ್ದಿಷ್ಟ ವರ್ಗದ 20 ಕೈದಿಗಳನ್ನು ವಿಶೇಷ ಮಾಫಿಯೊಂದಿಗೆ ಎರಡು ಮತ್ತು ಮೂರನೇ ಹಂತದಲ್ಲಿ ಬಿಡುಗಡೆಗೊಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಈ ಹಿಂದೆ ಸ್ವಾತಂತ್ರೊéàತ್ಸವ ಸಂದರ್ಭದಲ್ಲಿ ನಾನಾ ಕಾರಣಗಳಿಗೆ ಆರು ಶಿಕ್ಷಾ ಬಂದಿಗಳ ಬಿಡುಗಡೆಗೆ ನಿರ್ಧರಿಸಲಾಗಿತ್ತಾದರೂ ಕೊನೆಯ ಹಂತದಲ್ಲಿ ತಡೆಯಾಗಿತ್ತು. ಆ ಆರು ಸೇರಿ ಒಟ್ಟು 20 ಮಂದಿಯನ್ನು ಈಗ ಬಿಡುಗಡೆ ಮಾಡಲು ಸಂಪುಟ ಒಪ್ಪಿದೆ.

ಆಶಾ: 500 ರೂ. ಹೆಚ್ಚಳ
ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಮಾಸಿಕ ನಿಶ್ಚಿತ ಗೌರವ ಧನ 500 ರೂ. ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಸ್ತುತ ಆಶಾ ಕಾರ್ಯಕರ್ತೆಯರು 6,000 ರೂ. ಪಡೆಯುತ್ತಿದ್ದು ನ. 1ರಿಂದ ಜಾರಿಗೆ ಬರು ವಂತೆ 6,500 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು. ರಾಜ್ಯದಲ್ಲಿ 41,425 ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸು ತ್ತಿದ್ದು ಕೇಂದ್ರದಿಂದ 2,500 ರೂ. ದೊರೆಯಲಿದ್ದು, ರಾಜ್ಯ ಸರಕಾರ 4,000 ರೂ. ನೀಡಲಿದೆ ಎಂದವರು ತಿಳಿಸಿದರು.

ನೆರೆ ಪರಿಹಾರ ವಿಚಾರವಾಗಿ ವಿಪಕ್ಷಗಳು ಬೊಬ್ಬೆ ಹಾಕುವುದು ನಿಲ್ಲಿಸಬೇಕು. ಕೇಂದ್ರ ಸರಕಾರ ಯಾವ ರಾಜ್ಯಕ್ಕೂ ಹಣ ಕೊಟ್ಟಿಲ್ಲ, ಹಾಗೆಂದು ನಾವು ಕಾದು ಕುಳಿತಿಲ್ಲ. ರಾಜ್ಯ ಸರಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ. ದೊಡ್ಡ ಪ್ರಮಾಣದ ಅನುದಾನ ಬೇಕಿದೆ, ಮತ್ತೂಂದು ಬಾರಿ ದಿಲ್ಲಿಗೆ ಹೋಗಿ ಪರಿಹಾರ ಕೇಳುತ್ತೇನೆ. ಸ್ವಲ್ಪ ತಾಳ್ಮೆ ಇರಲಿ, ರಾಜಕೀಯ ಬೇಡ.
– ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next