Advertisement

ನೆರೆ ರಾಜ್ಯಗಳು ಕರ್ನಾಟಕ ಒಂದಿಂಚು ಭೂಮಿ ಮುಟ್ಟಲು ಬಿಡುವುದಿಲ್ಲ

09:35 PM Jan 01, 2020 | Lakshmi GovindaRaj |

ಚನ್ನರಾಯಪಟ್ಟಣ: ರಾಜ್ಯದ ಗಡಿ ಭಾಗದ ಒಂದು ಇಂಚು ಭೂಮಿಯನ್ನು ನೆರೆ ರಾಜ್ಯಗಳು ಮುಟ್ಟಲು ಬಿಡುವುದಿಲ್ಲ. ಒಂದು ವೇಳೆ ಅದಕ್ಕೆ ಆಸೆ ಪಟ್ಟರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಸಿದರು.

Advertisement

ತಾಲೂಕಿನ ಚಿಕ್ಕೋನಹಳ್ಳಿ ಗೇಟಿನಲ್ಲಿ ಇರುವ ಸಾಯಿಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮಹಾರಾಷ್ಟ್ರದ ಶಿವಸೇವೆ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ಬೆಳಗಾವಿ ಜನರಿಗೆ ತೊಂದರೆ ನೀಡುಲು ಮುಂದಾಗುತ್ತಿದೆ. ಇದನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಸಹಿಸುವುದಿಲ್ಲ. ದೇಶ ಸೇವೆಯೇ ಬಿಜೆಪಿಯ ಜೀವಾಳ. ದೇಶಕ್ಕಾಗಲಿ ಹಾಗೂ ಪ್ರದೇಶಕ್ಕಾಗಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಪಕ್ಷ ಕ್ರಮ ಕೈಗೊಳ್ಳಲಿದೆ: ಗೋಕಾಕ್‌ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್‌ ಜಾರಕಿಹೋಳಿ, ಶಾಸಕಿ ಲಕ್ಷ್ಮೀಹೆಬ್ಟಾಳ್ಕರ್‌ ವಿರುದ್ಧ ಮರಾಠಿ ಸಮುದಾಯದವರು ಅಭ್ಯರ್ಥಿಯಾಗುವುದಾದರೆ ಐದು ಕೋಟಿ ರೂ. ಕೊಡುತ್ತೇನೆ ಎಂದು ಹೇಳಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದಿರುವ ಬಗ್ಗೆ ಕೇಳಿದ್ದೇನೆ. ಅದು ನಿಜವಾದರೆ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಹೋಬಳಿಗೂ ಜನ ಔಷಧಿ ಕೇಂದ್ರ: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಹಾಗೂ ಔಷಧಿ ಅಂಗಡಿಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಹಾಗೂ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯುವ ಮೂಲಕ ಬಡವರ ಪಾಲಿಗೆ ವರವಾಗಿ ಕಾರ್ಯ ನಿರ್ವಹಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಹೋಬಳಿ ಕೇಂದ್ರದಲ್ಲಿಯೂ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ತೆರೆಯಲಾಗುವುದು ಎಂದರು.

ನಕಲಿ ವೈದ್ಯರಿಗೆ ಕಡಿವಾಣ: ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದ್ದು, ಪ್ರತಿ ಜಿಲ್ಲಾಧಿಕಾರಿ ಜೊತೆ ಸಭೆ ಮಾಡಲಾಗಿದೆ. ಮಹಾನಗರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ನಕಲಿ ವೈದ್ಯರ ಹಾವಳಿ ಮಟ್ಟಹಾಕಲು ರಾಜ್ಯ ಸರ್ಕಾರ ಮುಂದಾಗಲಿದೆ. ಈ ಬಗ್ಗೆ ಸಾರ್ವಜನಿಕರು ನೇರವಾಗಿ ಅರೋಗ್ಯ ಇಲಾಖೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಆಯುಷ್ಮಾನ್‌ ಭಾರತ್‌: ಕೇಂದ್ರ ಸರ್ಕಾರ ಪ್ರತಿಯೋರ್ವ ನಾಗಕರೀಕನ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು ಅವರಿಗೆ ಅಗತ್ಯ ಇರುವ ಸೌಲಭ್ಯ ನೀಡಲು ಆಯುಷ್ಮಾನ್‌ ಭಾರತ್‌ ಜಾರಿಗೆ ತಂದಿದೆ. ಬಿಪಿಎಲ್‌ ಪಟಿತರ ಚೀಟಿ ಹೊಂದಿರುವವರು ಇದರ ಸೌಲಭ್ಯ ಪಡೆಯಬಹುದು. ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೂ ಈ ಸೌಲಭ್ಯ ವಿಸ್ತರಿಸಲಾಗಿದೆ. ತುರ್ತು ಚಿಕಿತ್ಸೆ ವೇಳೆ ಸಾಕಷ್ಟು ತೊಡಕುಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೆಲ ನಿಯಮಗಳನ್ನು ಬದಲಾವಣೆ ಮಾಡಲಾಗುವುದು ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಕೇಂದ್ರಕ್ಕೆ ಮಾಹಿತಿ ನೀಡಲಾಗುವುದು ಎಂದರು.

ಸಮುದಾಯದ ಬೇಡಿಕೆ: ವಾಲ್ಮೀಕಿ ಸಮುದಾಯಕ್ಕೆ ಶೇ. 7.5 ಮೀಸಲಾತಿ ನೀಡಲಾಗಿದೆ. ಇದರಿಂದ ನಮ್ಮ ಸಮುದಾಯದವರು ಶ್ರೀರಾಮುಲು ಉಪ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಡ ಹೇರುತ್ತಾರೆ. ಇದರಲ್ಲಿ ತಪ್ಪೇನಿದೆ, ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ ನಾನು ಬಿಜೆಪಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ. ಈ ಪಕ್ಷದಲ್ಲಿ ತನ್ನದೇ ನಿಲುವು, ಸಿದ್ಧಾಂತವಿದೆ ಅದರ ವಿರುದ್ಧ ಶ್ರೀರಾಮುಲು ಹೋಗುವುದಿಲ್ಲ. ಪಕ್ಷದ ಮುಖ್ಯಸ್ಥರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇವೆ.

ಉಪಮುಖ್ಯ ಮಂತ್ರಿ ಹುದ್ದೆ ನೀಡುವಂತೆ ಮನವಿ ಮಾಡಿದ್ದೇನೆ ಹೊರತು ನಾನು ಲಾಬಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಕಿರಣಕುಮಾರ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ವಿ.ಮಹೇಶ, ಸಾಯಿಮಂದಿರದ ಗುರುಮೂರ್ತಿ ಗುರೂಜಿ, ಸಾಯಿ ಕೀರಣ, ಬಿಜೆಪಿ ಮುಖಂಡ ನಂಜುಂಡಮೈಮ್‌, ಗಂಗಾಧರ, ಪ್ರವೀಣ ಮೊದಲಾದವರು ಉಪಸ್ಥಿತರಿದ್ದರು.

ವೈದ್ಯರ ನೇಮಕಾತಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಎರಡು ತಿಂಗಳೊಳಗೆ ವೈದ್ಯರು ಹಾಗೂ ನರ್ಸ್‌ಗಳ ನೇಮಕ ಮಾಡಲಾಗುವುದು. ನನಗೆ ರಾಜಕೀಯಕ್ಕಿಂತ ರಾಜ್ಯದ ಜನತೆಯ ಆರೋಗ್ಯ ಮುಖ್ಯ. ಹಾಗಾಗಿ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದ್ದು, ಸುಮಾರು ಎರಡು ಸಾವಿರ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದರು.

ತಮಿಳುನಾಡು, ಮಹಾರಾಷ್ಟ್ರದಲ್ಲಿ ಪುಂಡಾಟ: ಈಗಾಗಲೇ ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾಕಿಕೊಂಡು ಸಂಚಾರ ಮಾಡುವ ವಾಹನ ಚಾಲಕರ ಮೇಲೆ ಹಲ್ಲೆ ಮಾಡಲಾಗಿದೆ. ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವ ಮೂಲಕ ಶಿವಸೇನೆ ತಮ್ಮ ಪುಂಡಾಟ ಪ್ರಾರಂಭಿಸಿದೆ. ಬಿಜೆಪಿ ಸರ್ಕಾರ ಭಾಷೆ, ನೆಲ, ಜಲ ರಕ್ಷಣೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ, ರಾಜ್ಯಕ್ಕಾಗಿ ತ್ಯಾಗಕ್ಕೂ ಸಿದ್ದವಾಗಲಿದ್ದೇವೆ ಎಂದು ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಅಗತ್ಯವಿರುವ ಕಡೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಲಾಗುವುದು. ಈಗಾಗಲೇ ಕೇಂದ್ರ ಸರ್ಕಾರ 8 ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಪ್ರತಿ ಪಕ್ಷಗಳಿ ಇದಕ್ಕೆ ರಾಜಕೀಯ ಬಣ್ಣ ಬಳಿಯಬಾರದು.
-ಶ್ರೀರಾಮುಲು, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next