Advertisement
ಕುಂದಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿ ಅಲ್ಲಲ್ಲಿ ಅಸಮರ್ಪಕ ಕಾಮಗಾರಿ ನಡೆಸಿದ ಕಾರಣ ಹೆದ್ದಾರಿ ಇಕ್ಕೆಲಗಳಲ್ಲಿ ಮಳೆ ನೀರು ನಿಲ್ಲುವುದು ಸರ್ವೆ ಸಾಮಾನ್ಯ ವಾಗಿದೆ. ಇದರಿಂದ ವಾಹನ ಸವಾರರು ಪಡುವ ಪಾಡು ಅಷ್ಟಿಷ್ಟಲ್ಲ. ಇದರ ಜತೆಗೆ ಸಂತೆಗೆ ಬರುವವರೂ ಹೈರಾಣಾಗಬೇಕಾಯಿತು.
ಶನಿವಾರ ಬೆಳಗ್ಗಿನಿಂದ ಸುರಿದ ಧಾರಾಕಾರ ಮಳೆಗೆ ಕುಂದಾಪುರದ ಸಂಗಂ ಬಳಿ ಇರುವ ಸಂತೆ ಮಾರುಕಟ್ಟೆ ಬಳಿ ಕೃತಕ ನೆರೆ ಸೃಷ್ಟಿಯಾಗಿತ್ತು. ಕುಂದಾಪುರದಲ್ಲಿ ಮಾಮೂಲಿಯಾಗಿ ಶನಿವಾರದಂದು ಸಂತೆ ನಡೆಯುತ್ತದೆ. ಊರ, ಪರವೂರುಗಳಿಂದ ಸಂತೆಗೆ ಖರೀದಿದಾರರು ಬಂದರೆ ರಾಜ್ಯದ ವಿವಿಧೆಡೆಯಿಂದ ವರ್ತಕರು ಬರುತ್ತಾರೆ. ಶನಿವಾರ ಸಂತೆಗೆ ಆಗಮಿಸಿದ ಮಂದಿಗೆ ಹೆದ್ದಾರಿ ಬಳಿ ಮೊಣಕಾಲೆತ್ತರಕ್ಕೆ ನಿಂತಿದ್ದ ಮಳೆ ನೀರು ಸ್ವಾಗತ ಕೋರಿತ್ತು. ಸಂತೆಯೊಳಕ್ಕೆ ಪ್ರವೇಶಿಸಿದ ಮಂದಿಯೂ ಕೂಡ ರಾಡಿಯೆದ್ದ ಕೆಸರು ಗದ್ದೆಯಂತಾದ ವ್ಯವಸ್ಥೆಯಲ್ಲಿಯೇ ನಡೆದು ಸಾಗಬೇಕಾಯಿತು. ಸಂತೆ ಮಾರುಕಟ್ಟೆ ಬಳಿಯಿಂದ ಸುಮಾರು 200 ಮೀಟರ್ ಉದ್ದಕ್ಕೆ ಮೊಣಕಾಲೆತ್ತರ ನೀರು ನಿಂತ ಕಾರಣ ಪಾದಚಾರಿಗಳು ನಡೆದಾಡಲು ಅನನುಕೂಲವಾಯಿತು. ಸಂತೆಗೆ ಬಂದ ವಾಹನ ಸವಾರರು ಪರದಾಡುವಂತಾಗಿತ್ತು. ಸ್ಥಳದಲ್ಲಿದ್ದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಸಿಬಂದಿ ಈ ಅವ್ಯವಸ್ಥೆಯೇ ನಡುವೆಯೇ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಹರಸಾಹಸಪಡುತ್ತಿರುವುದು ಕಂಡು ಬಂದಿತು.