Advertisement

ಪಡುಬಿದ್ರಿ ಸುತ್ತಮುತ್ತ ನೆರೆ, ಜನಜೀವನ ಅಸ್ತವ್ಯಸ್ತ

03:50 PM Jul 08, 2018 | Team Udayavani |

ಪಡುಬಿದ್ರಿ: ಪುನರ್ವಸು ಮಳೆಯ ಅಬ್ಬರದಿಂದಾಗಿ ಪಡುಬಿದ್ರಿ ಸುತ್ತಮುತ್ತ ನೆರೆ ಹಾವಳಿಯಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಹರಿವ ತೋಡುಗಳನ್ನು ಆಯಾಯ ಪ್ರದೇಶಗಳಲ್ಲಿನ ಮನೆಯವರು ಮುಚ್ಚಿರುವುದು ಅಥವಾ ಮೆಗಾ ಯೋಜನೆಯಾಗಿರುವ ಯುಪಿಸಿಎಲ್‌ ಪೈಪ್‌ಲೈನ್‌ ರಸ್ತೆಗೆ ಸಣ್ಣ ಸಣ್ಣ ತೂಬುಗಳನ್ನು ಅಳವಡಿ ಸಿರುವುದು ನೆರೆ ನೀರಿನ ಪ್ರಮಾದಕ್ಕೆ ಕಾರಣವೆನಿಸಿವೆ. 

Advertisement

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ಮಳೆ ನೀರು ತುಂಬಿ ಭಕ್ತರಿಗೆ ತೊಂದರೆಯುಂಟಾಗಿದೆ. 

ಪಲಿಮಾರು ಮನೆ ಮಂದಿಯ ಸ್ಥಳಾಂತರ
ಪಲಿಮಾರು ರೈಲ್ವೆ ನಿಲ್ದಾಣ ಸಮೀಪ, ಉಚ್ಚಿಲ ಇಂದಿರಾನಗರ ಬಳಿ ಕೆಲ ಮನೆಗಳು ಜಲಾವೃತವಾಗಿದ್ದು ಈ ಮನೆಗಳವರನ್ನು ಸ್ಥಳಾಂತರಿಸಲಾಗಿದೆ.

ಉಚ್ಚಿಲ ಕಟ್ಟಿಂಗೇರಿಯಲ್ಲಿ ತೋಡು ಹೂಳೆತ್ತದೆ ಕೃತಕ ನೆರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸುಮಾರು 25ಕ್ಕೂ ಅಧಿಕ ಮನೆಗಳ ಜನರು ತೊಂದರೆ ಅನುಭವಿಸಿದ್ದಾರೆ. ನೆರೆಯಿಂದಾಗಿ ಇಲ್ಲಿನ ನಿವಾಸಿ ಅಯಿಷಾ ಎಂಬವರು ರಾತ್ರಿಯೇ ಮನೆ ಬಿಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಉಚ್ಚಿಲ ಮಡಾ ಗ್ರಾಮದ ಪೊಲ್ಯ ನಿವಾಸಿ ಸಫಿಯಾ ಅವರ ಮನೆಯ ಬಾವಿ ಸಂಪೂರ್ಣ ಕುಸಿದಿದೆ.

ರಸ್ತೆಗಳ ಸಂಪರ್ಕ ಕಡಿತ
ತೆಂಕ ಗ್ರಾಮದ ಜ್ಯೋತಿ ಶೆಟ್ಟಿ ಎಂಬವರ ಮನೆಯ ಸುತ್ತಮುತ್ತ ನೆರೆ ನೀರು ಆವರಿಸಿದ್ದು ಆ ಕುಟುಂಬವನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ತೆಂಕ ಮಸೀದಿ ಬಳಿಯ ಮಹಮ್ಮದ್‌ ಗೌಸ್‌ ಸಾಹೇಬರ ಮನೆಯ ಗೋಡೆ ಕುಸಿದಿದೆ. ಪೂಲ – ಪೂಂದಾಡು ರಸ್ತೆ ಸಂಪರ್ಕ ಕಡಿದು ಹೋಗಿದೆ. ಎರ್ಮಾಳು ಅದಮಾರು ರಸ್ತೆಯನ್ನೂ ಜನ, ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. 

Advertisement

ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಕೆಮುಂಡೇಲುವಿನಲ್ಲಿ ಲೋಕೋಪಯೋಗಿ ಇಲಾಖೆಯ ಅಸಮರ್ಪಕ ರಸ್ತೆ ಕಾಮಗಾರಿ ಯಿಂದ ಜಯಲಕ್ಷ್ಮೀ ಶಂಕರ ರಾವ್‌ ಅವರ ಮನೆ ಸುತ್ತ ಕೃತಕ ನೆರೆಯಿಂದ ಅನಾಹುತ ಉಂಟಾಗಿದೆ. 

ಪಡುಬಿದ್ರಿಯ ಬೆರಂದಿಕೆರ ಬಳಿ ಹೊಟೇಲ್‌ ತ್ಯಾಜ್ಯ ನೀರು ಮಳೆ ನೀರಿನೊಂದಿಗೆ ಸೇರಿ ರಸ್ತೆಯಲ್ಲಿ ಹರಿದು ಪಾದಚಾರಿಗಳು ಸಂಕಷ್ಟಪಡ ಬೇಕಾಯಿತು. ಸುಜ್ಲಾನ್‌ ಯೋಜನಾ ಪ್ರದೇಶದ ಒಳಭಾಗದ ಮಳೆ ನೀರು ಅಬ್ಬೇಡಿ ಬಾಬು ದೇವಾಡಿಗ ಮನೆ ಎದುರಿರುವ ಮೊರಿಯಲ್ಲಿ ರಭಸವಾಗಿ ಹರಿಯುತ್ತಿರುವುದರಿಂದ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿಯಿದೆ. ಸುಜ್ಲಾನ್‌ ಪುನರ್ವಸತಿ ಕಾಲನಿ ಬಳಿಯಿರುವ ಕೆರೆ ತುಂಬಿ ಅಪಾಯದ ಮಟ್ಟ ತಲುಪಿದೆ.

ಪಲಿಮಾರು ಗ್ರಾ.ಪಂ. ವ್ಯಾಪ್ತಿಯ ನಂದಿಕೂರು ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿ ಕೆಲ ಮನೆಗಳಿಗೆ ನೆರೆಯಿಂದ ತೊಂದರೆಯಾಗಿದೆ. ಶಾಂಭವಿ ನದಿ ಉಕ್ಕಿ ಹರಿದ ಪರಿಣಾಮ ಅವರಾಲು ಕೊಡಂಚಲ ಇಂದಿರಾ ಆಚಾರ್ಯ ಹಾಗೂ ಗೋಪಾಲ ಆಚಾರ್ಯ ಮನೆ ಜಲಾವೃತವಾಗಿದೆ. ಸಂಕಷ್ಟಕ್ಕೀಡಾದ ಗ್ರಾಮಸ್ಥರನ್ನು ಸ್ಥಳಾಂತ‌ರಿಸ ಲಾಗಿದೆ. ಎಂದು ಗ್ರಾ. ಪಂ ಅಧ್ಯಕ್ಷ ಜಿತೇಂದ್ರ ಪುಟಾರ್ದೋ ತಿಳಿಸಿದ್ದಾರೆ. ಅವರಾಲು ಪ್ರದೇಶದಲ್ಲಿ ಹೆಜಮಾಡಿ ಸಂಪರ್ಕ ಕಲ್ಪಿಸಲು ಶಾಂಭವಿ ನದಿ ಬದಿ ನಿರ್ಮಿಸಿದ ರಸ್ತೆ ಜಲಾವೃತವಾಗಿದೆ. ಶಾಂಭವಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಪಲಿಮಾರು 8 ಮನೆಗಳ ಸುಮಾರು 30 ಜನರನ್ನು, ದನಕರುಗಳನ್ನು ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next