Advertisement

ಕಾಶ್ಮೀರ ಬಿಕ್ಕಟ್ಟಿಗೆ ನೆಹರು ಕಾರಣ

12:16 PM Jul 27, 2018 | Team Udayavani |

ಬೆಂಗಳೂರು: ಕಾಶ್ಮೀರ ಸಮಸ್ಯೆಯ ಹುಟ್ಟು, ಉಲ್ಬಣ ಮತ್ತು ಈಗಿನ ಬಿಕ್ಕಟ್ಟಿಗೆ ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರ ತಪ್ಪು ನೀತಿ ಹಾಗೂ ನಿರ್ಧಾರಗಳೇ ಕಾರಣ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಕಾರ್ಗಿಲ್‌ ಯುದ್ಧದಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಯೋಧರ ಸ್ಮರಣೆ ಹಾಗೂ ಗೌರವಾರ್ಥ ಗುರುವಾರ ಆರ್‌.ವಿ ಟೀಚರ್ಸ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಕಾರ್ಗಿಲ್‌ ವಿಜಯ್‌ ದಿವಸ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆಡಳಿತಗಾರ ಪರಾಕ್ರಮಿ ಮತ್ತು ಧೈರ್ಯಶಾಲಿಯಾಗಿದ್ದರೆ ಯಾವತ್ತೂ ದೇಶಕ್ಕೆ ದುರ್ಗತಿ ಬರುವುದಿಲ್ಲ ಎಂದು ಹೇಳಿದರು.

ದೇಶ ವಿಭಜನೆ ಬಳಿಕ ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕವಾಗಿ ಅಖಂಡ ಕಾಶ್ಮೀರ ಭಾರತಕ್ಕೆ ಸೇರಿದ್ದು. ಆದರೆ, ನೆರೆಯ ಪಾಕಿಸ್ತಾನ ಕಾಶ್ಮೀರದ ಬಹುಪಾಲು ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿತು. ಸರ್ದಾರ ವಲ್ಲಭಭಾಯಿ ಪಟೇಲ್‌ ಅವರು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಮುಕ್ಕಾಲು ಭೂ ಪ್ರದೇಶವನ್ನು ವಶಪಡಿಸಿಕೊಂಡಿದ್ದರು.

ಈ ಮಧ್ಯೆ ಕದನ ವಿರಾಮ ಘೋಷಿಸುವಂತೆ ಪ್ರಧಾನಿ ನೆಹರು ಹೇಳಿದರು. ಇದಕ್ಕೆ ಒಪ್ಪದ ಸರ್ದಾರ್‌ ಪಟೇಲ್‌, ಪೂರ್ಣ ಭೂ ಪ್ರದೇಶ ವಶಪಡಿಸಿಕೊಳ್ಳುವರೆಗೆ ಯುದ್ಧ ನಿಲ್ಲಿಸುವುದು ಬೇಡ ಎಂದರು. ಆದರೆ, ಪ್ರಧಾನಿ ಹುದ್ದೆಯ ಪರಮಾಧಿಕಾರ ಚಲಾಯಿಸಿ ನೆಹರು ಕದನ ವಿರಾಮಕ್ಕೆ ಫ‌ರ್ಮಾನು ಹೊಡಿಸಿದರು. ಇದರಿಂದ ಆಗ ಭಾರತಕ್ಕೆ ಹಿನ್ನಡೆ ಉಂಟಾಯಿತು ಎಂದು ತಿಳಿಸಿದರು.

ಮಿಥಿಕ್‌ ಸೊಸೈಟಿಯ ಕಾರ್ಯದರ್ಶಿ ವಿ. ನಾಗರಾಜ, 74 ದಿನಗಳ ಕಾಲ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಅತ್ಯಂತ ವಿಷಮ ಪರಿಸ್ಥಿತಿಯಲ್ಲೂ ನಮ್ಮ ದೇಶದ ಸೈನಿಕರು ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ ದೇಶವನ್ನು ರಕ್ಷಿಸುವುದರ ಜೊತೆಗೆ ದೇಶದ ಸ್ವಾಭಿಮಾನ ಮತ್ತು ಗರಿಮೆಯನ್ನು ಎತ್ತಿ ಹಿಡಿದರು.

Advertisement

ಈ ಯುದ್ಧದಲ್ಲಿ 500 ಸೈನಿಕರು ಹತಾತ್ಮರಾದರೆ, 500ಕ್ಕೂ ಹೆಚ್ಚು ಜನ ಅಂಗವಿಕಲರಾದರು. ಯುದ್ಧ ನಡೆದು 17 ವರ್ಷ ಕಳೆದಿದೆ. ದೇಶಕ್ಕೆ ಸೈನಿಕರ ಅವಶ್ಯಕತೆಯಿದೆ. ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಭಾವನೆ ಉದ್ದೀಪನಗೊಳಿಸುವುದು ಕಾರ್ಗಿಲ್‌ ವಿಜಯ್‌ ದಿವಸ್‌ ಆಚರಣೆಯ ಉದ್ದೇಶ.

ಮಕ್ಕಳಲ್ಲಿ ದೇಶ ಭಕ್ತಿ, ರಾಷ್ಟ್ರೀಯತೆ ಭಾವನೆ ಬಿತ್ತುವಲ್ಲಿ ಶಿಕ್ಷಕ ಸಮುದಾಯ ಮತ್ತು ಪೋಷಕರ ಪಾತ್ರ ಬಹಳ ದೊಡ್ಡದಿದೆ ಎಂದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ಅಧ್ಯಕ್ಷ ಡಾ. ಎಂ.ಕೆ. ಪಾಂಡುರಂಗ ಶೆಟ್ಟಿ, ಆರ್‌.ವಿ. ಟೀಚರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ. ಕೃಷ್ಣಯ್ಯ, ರಾಜೇಶ್‌ ಪದ್ಮಾರ್‌ ಮತ್ತಿತರರು ಉಪಸ್ಥಿತರಿದ್ದರು.

“ಈಗ ಕಾರ್ಗಿಲ್‌ ವಿಜಯ ದಿವಸ್‌ ಆಚರಿಸುತ್ತಿರುವಂತೆ ಭವಿಷ್ಯದಲ್ಲಿ “ಕಾಶ್ಮೀರ ವಿಜಯ್‌ ದಿವಸ್‌’ ಆಚರಿಸುವ ಸಂದರ್ಭ ಬರಲೇಬೇಕು ಅನ್ನುವುದು ಪ್ರತಿಯೊಬ್ಬರ ಉತ್ಕಟ ಆಕಾಂಕ್ಷೆಯಾಗಬೇಕು. ಆಗ ಮಾತ್ರ ದೇಶದ ಹಿರಿಮೆ ಮತ್ತು ಗರಿಮೆ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ’. 
-ವಜೂಭಾಯಿ ವಾಲಾ, ರಾಜ್ಯಪಾಲ.

Advertisement

Udayavani is now on Telegram. Click here to join our channel and stay updated with the latest news.

Next