Advertisement

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ್ದು ನೆಹರು

12:40 PM Aug 13, 2018 | Team Udayavani |

ಬೆಂಗಳೂರು: ಭಾರತಕ್ಕೆ ಮಹಾತ್ಮ ಗಾಂಧೀಜಿ ರಾಷ್ಟ್ರಪಿತರಾದರೆ, ಪಂಡಿತ್‌ ಜವಾಹರಲಾಲ್‌ ನೆಹರೂ ದೇಶದ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ಪಿತಾಮಹ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಬಣ್ಣಿಸಿದರು.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಅಂಕಿತ ಪ್ರಕಾಶನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ “ಭಾರತದ ಸಂಸತ್ತು; ಒಂದು ಕಾರ್ಯನಿರತ ಪ್ರಜಾಪ್ರಭುತ್ವ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದವರು ನೆಹರೂ. ಹೀಗಾಗಿ ಗಾಂಧೀಜಿ ಈ ದೇಶದ ರಾಷ್ಟ್ರಪಿತ ಹೇಗೋ, ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ ಪಿತಾಮಹ ನೆಹರು.

ಇದನ್ನು ತಾನು ಯಾವುದೇ ದೃಷ್ಟಿಕೋನದಿಂದ ಹೇಳುತ್ತಿಲ್ಲ. ಸಣ್ಣ ಅನುಭವದಿಂದ ವಿಶ್ಲೇಷಿಸುತ್ತಿದ್ದೇನೆ ಎಂದರು. ದೇಶಕ್ಕೆ ಯಾವ ಮಾದರಿಯ ವ್ಯವಸ್ಥೆ ಇರಬೇಕು ಎಂಬುದರ ಬಗ್ಗೆ ಡಾ.ಅಂಬೇಡ್ಕರ್‌ ನೇತೃತ್ವದಲ್ಲಿ ದೊಡ್ಡ ಮೇಧಾವಿಗಳೆಲ್ಲ ಸಂಸತ್ತಿನೊಳಗೆ ಸುದೀರ್ಘ‌ ಚರ್ಚಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಿದರು. ಇದಕ್ಕೆ ಅಡಿಪಾಯ ಹಾಕಿದವರು ನೆಹರೂ.

ಸಂಸ್ಕೃತಿ, ಭಾಷೆ ಸೇರಿ ದೇಶದ ಸಮಸ್ಯೆಗಳಿಗೆ ಭಗವದ್ಗೀತೆಗಿಂತ ಹೆಚ್ಚು ಸೂಕ್ತವಾದ ಪರಿಹಾರ ಕೊಡುವಂತಹ ಸಂವಿಧಾನವನ್ನು ಅಂಬೇಡ್ಕರ್‌ ನೀಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ನೆಹರೂ ಬಗ್ಗೆ ಕೆಲವರು ಲಘುವಾಗಿ ಮಾತನಾಡುತ್ತಿದ್ದಾರೆ. ನಾವು ಏಕೆ ಈ ಸ್ಥಿತಿಗೆ ಬಂದಿದ್ದೇವೆ? ಈ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಜಾತಿ, ಭಾಷೆ, ಪ್ರಾದೇಶಿಕ ಪಕ್ಷಗಳು ಮತ್ತಿತರ ದೋಷಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಪ್ರಯತ್ನಗಳು ನಡೆಯಬಹುದು. ಆದರೆ, ಯಾರು ಏನೇ ಮಾಡಿದರೂ ಈ ನೆಲದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ. ಇದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ತನ್ನ ಜೀವಿತಾವಧಿಯವರೆಗೂ ಇದು ಇರುತ್ತದೆಂಬ ವಿಶ್ವಾಸವಿದೆ ಎಂದರು. 

Advertisement

ನಿವೃತ್ತ ನ್ಯಾ.ಎಂ.ಎನ್‌. ವೆಂಕಟಾಚಲಯ್ಯ ಮಾತನಾಡಿ, ಅಧ್ಯಕ್ಷೀಯ ಆಡಳಿತ ವ್ಯವಸ್ಥೆ ಹೆಚ್ಚು ಸ್ಥಿರತೆ ಹೊಂದಿರುತ್ತದೆ. ಹೊಣೆಗಾರಿಕೆ ಕಡಿಮೆ. ಆದರೆ, ಸಂಸದೀಯ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಹೆಚ್ಚು. ಇದೇ ಕಾರಣಕ್ಕೆ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದರು. 

ಆಶಯ ಸಾಕಾರಗೊಳ್ಳುತ್ತಿದೆಯೇ?: ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಸ್ವಾತಂತ್ರ್ಯದ ಫ‌ಲ ಪ್ರತಿಯೊಬ್ಬರಿಗೂ ಸಿಗಬೇಕು ಎಂಬುದು ಪ್ರಜಾಪ್ರಭುತ್ವದ ಮೂಲಗುರಿ. ಆದರೆ, ವಾಸ್ತವವಾಗಿ ಈ ಆಶಯ ಈಡೇರುತ್ತಿದೆಯೇ? ಬಹಿರಂಗವಾಗಿ ಕೊಲೆ-ಅತ್ಯಾಚಾರಗಳು ನಡೆಯುತ್ತಿವೆ. ಈ ರೀತಿಯ ಪ್ರಜಾಪ್ರಭುತ್ವ ನಮಗೆ ಬೇಕಿತ್ತಾ?

ಸಮಾಜದಲ್ಲಿ ಜಾತೀಯತೆ ಇರಬಾರದೆಂದು ಯಾಕೆ ತೀರ್ಮಾನ ಕೈಗೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ? ಈ ಪ್ರಶ್ನೆಗಳಿಗೆ ಬಹುಬೇಗ ಉತ್ತರ ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಮಾಜಿ ಸಂಸದ ಮತ್ತು ಅನುವಾದಕ ಡಾ.ಬಿ.ಎಲ್‌. ಶಂಕರ್‌, ಅನುದಾದಕ ಪ್ರೊ.ವಲೇರಿಯನ್‌ ರೊಡ್ರಿಗಸ್‌ ಮಾತನಾಡಿದರು.

ನಾನು ಮೂಲ ಕಾಂಗ್ರೆಸ್ಸಿಗ: ತಾನು ಮೂಲ ಕಾಂಗ್ರೆಸ್ಸಿಗ. ಆದರೆ, ಇಂದಿರಾ ಗಾಂಧಿ ತೆಗೆದುಕೊಂಡ ಕೆಲವು ಕಾರ್ಯಕ್ರಮಗಳಿಂದ ಬಂಡಾಯ ಕಾಂಗ್ರೆಸ್‌ ಸೇರಿದೆ ಎಂದು ಮೆಲುಕು ಹಾಕಿದ ಎಚ್‌.ಡಿ. ದೇವೇಗೌಡ, 1956ರಲ್ಲಿ ಭಾಷಾವಾರು ಪ್ರಾಂತಕ್ಕೆ ದೊಡ್ಡ ಹೋರಾಟ ನಡೆಯಿತು. ಅಲ್ಲಿಂದ ಆಯಾ ಪ್ರಾಂತಗಳಲ್ಲಿ ಆಯಾ ಜಾತಿವಾರು ಪ್ರಾಬಲ್ಯ ಶುರುವಾಯಿತು. ಪ್ರಾದೇಶಿಕ ಪಕ್ಷಗಳು ತಲೆ ಎತ್ತಿದವು. ಪ್ರಾದೇಶಿಕ ಪಕ್ಷಗಳ ಜಾತಿ, ಭಾಷೆ ಪ್ರಭಾವಗಳು ಅವುಗಳಿಗೆ ಬೆಂಬಲ ಕೊಟ್ಟವು. ಇದರಿಂದ ದಿನೇದಿನೆ ಕಾಂಗ್ರೆಸ್‌ ತನ್ನ ಶಕ್ತಿ ಕಳೆದುಕೊಳ್ಳಲು ಕಾರಣವಾಯಿತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next