Advertisement

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

12:07 AM Apr 20, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ಹುಬ್ಬಳ್ಳಿಯ ಕಾಂಗ್ರೆಸ್‌ ಕಾರ್ಪೊರೆಟರ್‌ ಅವರ ಪುತ್ರಿ ನೇಹಾ ಹಿರೇಮಠ ಕಗ್ಗೊಲೆಗೆ ಸಂಬಂಧಿಸಿ ರಾಜ್ಯ ಸರಕಾರ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಆಕ್ರೋಶ ಭುಗಿ ಲೆದ್ದಿದೆ. ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಹಿಂದೂಪರ ಮತ್ತು ವಿದ್ಯಾರ್ಥಿ ಸಂಘಟನೆಗಳು ಹಲವೆಡೆ ಪ್ರತಿ ಭಟನೆ ನಡೆಸಿವೆ.

Advertisement

ಹುಬ್ಬಳ್ಳಿ ಘಟನೆಯ ಬೆನ್ನಿಗೆ ಹೇಳಿಕೆ ನೀಡಿರುವ ರಾಜ್ಯ ಸರಕಾರವು ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳು ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಆಗಿವೆ ಎಂದು ಹೇಳಿದೆ. “ವೈಯಕ್ತಿಕ ಕಾರಣದಿಂದ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ’ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಹಾಗೂ “ಇದು ಲವ್‌ ಜೆಹಾದ್‌ ಅಲ್ಲ, ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ’ ಎಂದು ಗೃಹ ಸಚಿವ ಡಾ| ಪರಮೇಶ್ವರ್‌ ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಹದಗೆಟ್ಟ ಕಾನೂನು ಸುವ್ಯವಸ್ಥೆ
ನೇಹಾ ಹತ್ಯೆ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು, ಕಾಂಗ್ರೆಸ್‌ ಸರಕಾರದ ಅತೀವ ಓಲೈಕೆಯಿಂದ ಜೆಹಾದಿ ಕೃತ್ಯಗಳು ಹೆಚ್ಚಳವಾಗುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಪ್ರಕರಣವೇ ಸಾಕ್ಷಿ ಎಂದು ಆರೋಪಿಸಿವೆ.

ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿಯಿಂದ ಸಮಾಜಘಾತಕ ಶಕ್ತಿಗಳಿಗೆ ಪೊಲೀಸ್‌ ಠಾಣೆಗಳಲ್ಲಿ ರಾಜಮರ್ಯಾದೆ ಸಿಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆ ನಡೆದಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ಖಂಡನೀಯ ಎಂದು ಬಿಜೆಪಿ ನಾಯಕರು ವಾಗ್ಧಾಳಿ ನಡೆಸಿದ್ದಾರೆ.

ನೇಹಾ ಹಿರೇಮಠ ಹತ್ಯೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ಶುಕ್ರವಾರ ರಸ್ತೆತಡೆ ನಡೆಸಿದರು. ಬಳ್ಳಾರಿ ನಗರದಲ್ಲಿ ವೀರಶೈವ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಹತ್ಯೆಯಾದ ವಿದ್ಯಾರ್ಥಿನಿ ನೇಹಾಳ ಅಂತ್ಯಸಂಸ್ಕಾರ ಮಂಟೂರ ರಸ್ತೆಯ ಕಲಬುರ್ಗಿ ರುದ್ರಭೂಮಿಯಲ್ಲಿ ಭಾರೀ ಪೊಲೀಸ್‌ ಬಂದೋಬಸ್ತ್ನಲ್ಲಿ ಶುಕ್ರವಾರ ನೆರವೇರಿತು.

Advertisement

ಯುವತಿ ತಂದೆ ಆಕ್ರೋಶ
ನೇಹಾಳ ತಂದೆ, ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನ್‌ ಹಿರೇಮಠ ಸರಕಾರದ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನೇಹಾಳ ಹತ್ಯೆ ವೈಯಕ್ತಿಕ ಹಾಗೂ ಆಕಸ್ಮಿಕ’ ಎಂದು ಸಿಎಂ ಹಾಗೂ ಗೃಹ ಸಚಿವರು ಹೇಳುತ್ತಿರುವುದು ಖಂಡನೀಯ. ಇವರು ಹೀಗೆ ಹೇಳುವ ಮೂಲಕ ನಮ್ಮ ಕುಟುಂಬಕ್ಕೆ ಅಗೌರವ ತರುವ ಕಾರ್ಯ ಮಾಡಿದರೆ ನಾನು ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ಮಗಳ ಮೇಲೆ ಕಳಂಕ ತರಬೇಡಿ ಎಂದು ಹರಿಹಾಯ್ದಿದ್ದಾರೆ.

ಸರಕಾರ ಹೇಳಿದ್ದೇನು?
-ಈ ಕೊಲೆ ಪ್ರಕರಣದಲ್ಲಿ ಪ್ರೀತಿ ನಿರಾಕರಿಸಿದ ಕಾರಣವಷ್ಟೇ ಕಂಡುಬಂದಿದೆ
-ಇದರಲ್ಲಿ ಯಾವುದೇ ಲವ್‌ ಜೆಹಾದ್‌ ಇಲ್ಲ; ಇಂತಹ ಘಟನೆಗಳು ಆಕಸ್ಮಿಕ
-ಇಂಥ ಪ್ರಕರಣಗಳು ಬೊಮ್ಮಾಯಿ ಸರ್ಕಾರದ ಅವಧಿಯಲ್ಲೂ ನಡೆದಿತ್ತು

Advertisement

Udayavani is now on Telegram. Click here to join our channel and stay updated with the latest news.

Next