ಶಿರಸಿ: ಕಲೆ, ಸಂಸ್ಕೃತಿಗಳ ಏಳ್ಗೆಗಾಗಿ ಸ್ಥಾಪಿತವಾದ ಅಕಾಡೆಮಿಗಳ ಅಧ್ಯಕ್ಷರ ನೇಮಕಾತಿಗೆ ಇನ್ನೂ ರಾಜ್ಯ ಸರಕಾರ ಮೀನಮೇಷ ಎಣಿಸುತ್ತಿದೆ. ಹೊಸ ಸರಕಾರ ರಚನೆಗೊಡರೂ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡುತ್ತಿದೆ.
ಈ ಮೊದಲು ಸಮ್ಮಿಶ್ರ ಸರಕಾರದಲ್ಲಿ ರಚನೆಗೊಂಡ ಅಕಾಡೆಮಿಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಸೂಚನೆ ಮೇರೆಗೆ ಅಕಾಡೆಮಿಗಳನ್ನು ವಿಸರ್ಜಿಸಿದ್ದರು. ಈಗಾಗಲೇ ನಿಗಮ ಮಂಡಳಿಗಳಿಗೆ ಪುನರ್ ನೇಮಕಗೊಳಿಸಿದ್ದರೂ ಇತ್ತ ಅಕಾಡೆಮಿ ಗಳನ್ನು ಮಾತ್ರ ನಿರ್ಲಕ್ಷ ಮಾಡಿದ್ದಕ್ಕೆ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.
ಅಲ್ಪಾಯಸ್ಸು: ಸಿದ್ದರಾಮಯ್ಯ ಅಧಿಕಾರದ ಕೊನೇ ಕ್ಷಣದಲ್ಲಿ ಯಕ್ಷಗಾನ ಸೇರಿದಂತೆ ಹಲವು ಅಕಾಡೆಮಿಗಳ ಅಧ್ಯಕ್ಷರನ್ನು, ಸದಸ್ಯರನ್ನು ನೇಮಕಗೊಳಿಸಿದ್ದರು. ಆದರೆ, ಎರಡು ತಿಂಗಳಲ್ಲಿ ಚುನಾವಣೆ ನಡೆದು ಮೈತ್ರಿ ಸರಕಾರದಲ್ಲೂ ಸಂಸತ್ ಚುನಾವಣೆ ಹೇಳಿ ಸೇವೆ ಸಲ್ಲಿಸಲು ಸಿಕ್ಕ ಅವಧಿ ಕೇವಲ ಒಂದರಿಂದ ಒಂದೂವರೆ ವರ್ಷ ಮಾತ್ರ. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅಕಾಡೆಮಿಗಳ ನೇಮಕಾತಿ ರದ್ದುಗೊಳಿಸಿತ್ತು. ರದ್ದತಿ ಆದೇಶ ಹೊರಡಿಸಿ ಮೂರು ತಿಂಗಳು ಗತಿಸಿವೆ. ಯಕ್ಷಗಾನ ಅಕಾಡೆಮಿ, ಕೊಂಕಣಿ, ಬಯಲಾಟ, ನಾಟಕ, ಕೊಡವ ಸೇರಿದಂತೆ ಹಲವು ಅಕಾಡೆಮಿಗಳ ಅಧ್ಯಕ್ಷರು ಅಲ್ಪ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರೂ ಅವರನ್ನೂ ಸರಕಾರ ಕಿತ್ತು ಹಾಕಿತ್ತು.
ಸಾಂಸ್ಕೃತಿಕ ನೀತಿ ಇದ್ದರೂ: ಕಳೆದೆರಡು ವರ್ಷಗಳ ಹಿಂದಷ್ಟೇ ರಚನೆ ಮಾಡಲಾಗಿದ್ದ ಯಕ್ಷಗಾನ ಅಕಾಡೆಮಿ ಸಹಿತ ಒಟ್ಟೂ 15 ಅಕಾಡಮಿಗಳಿಗೆ ಇನ್ನೂ ಅಧ್ಯಕ್ಷರ ನೇಮಕಾತಿ ಆಗಿಲ್ಲ. ವಿವಿಧ ಅಕಾಡೆಮಿಗಳ ಅಧ್ಯಕ್ಷರ, ಸದಸ್ಯರ ಅಧಿಕಾರ ರದ್ದುಗೊಳಿಸಿ ಅಧೀನ ಕಾರ್ಯದರ್ಶಿ ಪಿ.ಎಸ್. ಮಾಲತಿ ಕಳೆದ ಜು.31ರಂದು ಆದೇಶ ಮಾಡಿದ್ದರು. ಈ ಮಧ್ಯೆ ನಾಟಕ ಅಧ್ಯಕ್ಷ ಜಿ. ಲೋಕೇಶ ಸರಕಾರ ಬದಲಾದ ಕೂಡಲೇಅಕಾಡೆಮಿಗಳ ಅವಧಿ ಮೊಟಕುಗೊಳಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಾಂಸ್ಕೃತಿಕ ನೀತಿ ಪ್ರಸ್ತಾವ ಸರಕಾರದ ಮುಂದೆ ಇದ್ದರೂ ಪ್ರಾಜ್ಞರಿರುವ ಅಕಾಡೆಮಿಗಳಿಗೆ ಈ ರಾಜಕೀಯ ಬಣ್ಣ ಸರಿಯಲ್ಲ ಎಂಬುದು ಹಕ್ಕೊತ್ತಾಯವಾಗಿದೆ.
ಇಲ್ಲೂ ಪ್ರಾತಿನಿಧ್ಯವಿಲ್ಲ: ಕಲೆ ಸಂಸ್ಕೃತಿಗಳ ಬೆಳವಣಿಗೆಗೆ ಅಕಾಡೆಮಿಗಳ ಕೊಡುಗೆ ಅನುಪಮ. ಕನ್ನಡದ ಬೆಳವಣಿಗೆಗೆ ಅಪ್ಪಟ ಕನ್ನಡದ ಕಲೆ ಯಕ್ಷಗಾನದ್ದೂ ಪಾಲು ಸಾಕಷ್ಟಿದೆ. ಆದರೆ, ರಾಜ್ಯೋತ್ಸವದಂದು ನೀಡುವ ಪ್ರಶಸ್ತಿಗೆ ಸಚಿವ ಸಿ.ಟಿ. ರವಿ ಅಧ್ಯಕ್ಷತೆಯಲ್ಲಿ ದೊಡ್ಡರಂಗೇ ಗೌಡ, ಮಲ್ಲೇಪುರಂ ವೆಂಕಟೇಶ, ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಸೇರಿದಂತೆ ಹದಿನೇಳು ಜನರ ಪ್ರಾಜ್ಞರ ಸಮಿತಿ ನೇಮಕ ಮಾಡಲಾಗಿದೆ. ಈ ಪಟ್ಟಿಯಲ್ಲಿ ಇಡೀ ಕರ್ನಾಟಕದ ಪ್ರಾತಿನಿಧ್ಯ ಕಲೆ ಯಕ್ಷಗಾನ, ತಾಳಮದ್ದಲೆ, ಬಯಲಾಟ, ಮೂಡಲಪಾಯದ ಪ್ರಾತಿನಿಧ್ಯ ಇಲ್ಲ! ಈ ಬಾರಿ ಅಪ್ಪಟ ಕನ್ನಡದ ಕಲೆಯ ಸಾಧಕರಿಗೆ ಪುರಸ್ಕಾರ ಕೈತಪ್ಪುವುದೇ ಎಂಬ ಆತಂಕ ಕೂಡ ಮನೆ ಮಾಡಿದೆ.
ವಿಳಂಬ ಯಾಕೆ?: ರಾಜ್ಯೋತ್ಸವ ಮೊದಲಾದರೂ ಅಕಾಡೆಮಿಗಳಿಗೆ ಪುನರಜನ್ಮ ನೀಡಲಾಗುತ್ತದೆ ಎಂಬ ನಿರೀಕ್ಷೆಯೂ ಬಹುತೇಕ ಹುಸಿಯಾದಂತೆ ಆಗಿದೆ. ಮುಂದೆ ಉಪ ಚುನಾವಣೆ ಘೋಷಣೆ ಆಗುವುದರಿಂದ ಅಷ್ಟರೊಳಗೆ ಆಗದೇ ಇದ್ದರೆ ಮತ್ತೂ ಎರಡು ತಿಂಗಳು ಮುಂದೂಡಲಿದೆ!
-ರಾಘವೇಂದ್ರ ಬೆಟ್ಟಕೊಪ್ಪ