ಮಂಡ್ಯ: ಮಾಂಸಕ್ಕಾಗಿ ಹತ್ಯೆ ಮಾಡಲು ಕಸಾಯಿ ಖಾನೆಯಲ್ಲಿ ಕೂಡಿ ಹಾಕಲಾಗಿದ್ದ ಗೋವುಗಳನ್ನು ರಕ್ಷಣೆ ಮಾಡುವಂತೆ ಮಾಹಿತಿ ನೀಡಿದರೂ ಪೊಲೀಸರು ಸರಿಯಾಗಿ ಪರಿಶೀಲನೆ ಮಾಡದೆ ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸೋಮವಾರ ಸಂಜೆ 7.30ರ ಸಮಯದಲ್ಲಿ ನಗರದ ಪೂರ್ವ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಕಾರ್ಯಕರ್ತರು ಕೂಡಲೇ ಗೋಹತ್ಯೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ಗುತ್ತಲು ಬಡಾವಣೆಯ ಕಾಂಗ್ರೆಸ್ ಮುಖಂಡನಿಗೆ ಸೇರಿದ್ದ ಕಸಾಯಿ ಖಾನೆಯಲ್ಲಿ ಗೋವುಗಳನ್ನು ಕೂಡಿ ಹಾಕಲಾಗಿತ್ತು. ಇವುಗಳಲ್ಲಿ ದೇವರ ಬಸವಗಳು, ದೇಸಿ ಗೋವು, ಎಮ್ಮೆಗಳು ಸೇರಿದಂತೆ ಒಟ್ಟು ೩೮ ಜಾನುವಾರುಗಳಿದ್ದವು. ಇದರ ಬಗ್ಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಲಾಗಿತ್ತು.
ಮಾಹಿತಿ ಆಧರಿಸಿ ಪೊಲೀಸರು ಸೋಮವಾರ ಸಂಜೆ ದಾಳಿ ಮಾಡಿ ಮೂರು ಕ್ಯಾಂಟರ್‌ಗಳಲ್ಲಿ 2 ಹಸು ಹಾಗೂ ಎಮ್ಮೆಗಳು ಸೇರಿದಂತೆ 28 ಜಾನುವಾರುಗಳನ್ನು ರಕ್ಷಣೆ ಮಾಡಿದ್ದರು. ಅಲ್ಲದೆ, ದಾಳಿ ಮಾಡಿದ ಸಂದರ್ಭದಲ್ಲಿ ಸ್ಥಳ ಮಹಜರು ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ದೂರ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ದೇವರ ಬಸವಗಳನ್ನು ಬಿಟ್ಟು, ಕೇವಲ ಎಮ್ಮೆ ಹಾಗೂ ಕರುಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪರ ಪೊಲೀಸರು ನಿಂತಿದ್ದಾರೆ ಎಂದು ಹಿಂದೂಪರ ಕಾರ್ಯಕರ್ತರು ಗಂಭೀರ ಆರೋಪ ಮಾಡಿದರು.
ಕಾಟಾಚಾರಕ್ಕೆ ಎಮ್ಮೆ ಕರುಗಳನ್ನು ವಶಪಡಿಸಿಕೊಂಡು ದೊಡ್ಡ ಗೂಳಿ, ದೇವರ ಬಸವಗಳನ್ನು ಬಿಟ್ಟು ಬಂದಿದ್ದಾರೆ. ಮತ್ತೆ ಸ್ಥಳ ಮಹಜರು ಮಾಡಿ ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಮತ್ತೊಮ್ಮೆ ಸ್ಥಳ ಮಹಜರು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದ್ದಾರೆ.