Advertisement
ರಾಜ್ಯ ಸರಕಾರ ಉಳಿದೆಲ್ಲ ಮಹಾನಗರ ಪಾಲಿಕೆಗಳಿಗೆ ನಿವೃತ್ತ ನೌಕರರ ಪಿಂಚಣಿ ಹಣ ನೀಡಿ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಹಣ ನೀಡದೆ ತಾರತಮ್ಯ ತೋರುತ್ತಿದೆ ಎಂಬ ಆರೋಪ ಇದೆಯಾದರೂ, ಪ್ರಕರಣದ ಕುರಿತಾಗಿ ಸೂಕ್ಷ್ಮವಾಗಿ ಗಮನಿಸಿದರೆ ಉದಾಸೀನತೆ, ನಿರ್ಲಕ್ಷ್ಯದ ಕಾರಣದಿಂದ ಬರಬೇಕಾದ ಹಣ ಕೈ ತಪ್ಪಿರುವುದು ಗೋಚರಿಸುತ್ತದೆ.
Related Articles
Advertisement
ಆಯಾ ವರ್ಷಕ್ಕೆ ಬಂದ ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಸಕಾಲಕ್ಕೆ ಸಲ್ಲಿಸುವುದು ಹಾಗೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸುವುದು ಮುಖ್ಯವಾಗಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಬಳಕೆ ಪ್ರಮಾಣ ಪತ್ರದ ಸಲ್ಲಿಕೆ ಹಾಗೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಮರ್ಪಕವಾಗಿಲ್ಲದಿರುವುದೇ ಇಂದಿನ ಪಿಂಚಣಿ ಬಾಕಿ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ರಾಯಚೂರು, ಬೀದರ, ಕೊಪ್ಪಳದಂತಹ ಸಣ್ಣ ನಗರಗಳು ತಮಗೆ ಬಂದಂತಹ ಅನುದಾನ ಬಳಕೆಯೊಂದಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿ ಅಷ್ಟು ಇಷ್ಟು ಹಣ ಪಡೆದುಕೊಂಡಿವೆ. ಇವುಗಳಿಗೆ ಹೋಲಿಸಿದರೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಯೋಜನೆ ಗಾತ್ರ ದೊಡ್ಡದಾಗಿದೆ. ಆದರೆ, ಬಂದ ಅನುದಾನದ ಸಮರ್ಪಕ ಹಾಗೂ ಸಕಾಲಿಕ ಬಳಕೆಯ ಕೊರತೆ ಹಲವು ಕಡೆ ಎದ್ದು ಕಾಣುತ್ತಿದೆ.
ಆರೋಪ-ಪ್ರತ್ಯಾರೋಪವಷ್ಟೇ ಬಳುವಳಿ: ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದ ಬಗ್ಗೆ ಈ ಹಿಂದೆ ವಿನಯಕುಮಾರ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗಲೂ ಈ ಬೇಡಿಕೆ ಮಂಡನೆ ಆಗಿತ್ತು. ಮುಖ್ಯಮಂತ್ರಿ ಬಂದಾಗಲೂ ಈ ಬಗ್ಗೆ ಮನವಿ ಮಾಡಲಾಗಿತ್ತು. ನೀಡುತ್ತೇವೆ ಎಂಬ ಭರವಸೆ ಕಾಂಗ್ರೆಸ್‌ನವರದ್ದಾದರೆ, ಪಿಂಚಣಿ ಬಾಕಿಗೆ ನಿರ್ಲಕ್ಷ್ಯ ಎಂಬ ಆರೋಪ ಬಿಜೆಪಿಯದ್ದಾಗಿತ್ತು.
ಆದರೆ ಡಿಎಂಎ ಹಾಗೂ ನಗರಾಭಿವೃದ್ಧಿ ಇಲಾಖೆ ಮಟ್ಟದಲ್ಲಿ ಯಾಕೆ ವಿಳಂಬ, ಅದಕ್ಕೆ ಪರಿಹಾರದ ಕ್ರಮವೇನೆಂದು ಯಾರೊಬ್ಬರು ತೀವ್ರ ರೀತಿಯ ಯತ್ನ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಬಂದ ಅನುದಾನದ ವಿನಿಯೋಗದ ಬಳಕೆ ಪ್ರಮಾಣ ಪತ್ರದ ಸಕಾಲಿಕ ಸಲ್ಲಿಕೆ ಆಗದಿರುವುದು ಹಾಗೂ ಹೆಚ್ಚುವರಿ ಅನುದಾನಕ್ಕೆ ಸಮರ್ಪಕ ಒತ್ತಡ ಇಲ್ಲದಿರುವುದರಿಂದ, ನಗರಾಭಿವೃದ್ಧಿ ಇಲಾಖೆ ಆಯಾ ವರ್ಷದ ಹೆಚ್ಚುವರಿ ಅನುದಾನವನ್ನು ಇತರೆ ಕಾರ್ಯಗಳಿಗೆ ಅಥವಾ ಬೇಡಿಕೆ ಬಂದ ಕಡೆ ಹಂಚಿಕೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆಗೆ ಹೆಚ್ಚುವರಿ ಹಣ ಹಂಚಿಕೆ ಆಗದಿರುವುದಕ್ಕೆ ಇದು ಕೂಡ ಪ್ರಮುಖ ಕಾರಣಗಲ್ಲೊಂದಾಗಿದೆ. ಇದರ ಹಿಂದೆ ರಾಜಕೀಯ ತಾರತಮ್ಯ ನೀತಿ ಅಡಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ನಿವೃತ್ತಿ ನೌಕರರ ಪಿಂಚಣಿ ಬಾಕಿ ಹಣದ ಬಗ್ಗೆ ಸಮರ್ಪಕ ಕ್ರಮ ಇಲ್ಲದ್ದರಿಂದ ಬಾಕಿ ಪ್ರಮಾಣ 30, 40 ಕೋಟಿ ರೂ.ಗಳ ಬಾಕಿಯ ಬಾಲ ಇದೀಗ 105ಕೋಟಿ ರೂ.ಗೆ ಬೆಳೆದು ನಿಂತಿದೆ.
ಏಪ್ರಿಲ್‌ನಿಂದ ಮಾತ್ರ ಪಿಂಚಣಿ ಹಣ: ಪಿಂಚಣಿ ಬಾಕಿ ಹಣ ಕುರಿತಾಗಿ ಮಹಾಪೌರ ಡಿ.ಕೆ.ಚವ್ಹಾಣ ನೇತೃತ್ವದಲ್ಲಿ ಪಾಲಿಕೆ ಸರ್ವಪಕ್ಷಗಳ ಸದಸ್ಯರ ನಿಯೋಗ ಬೆಂಗಳೂರಿಗೆ ತೆರಳಿ ನಗರಾಭಿವೃದ್ಧಿ ಸಚಿವ ಆರ್. ರೋಷನ್‌ಬೇಗ್ ಅವರನ್ನು ಭೇಟಿ ಮಾಡಿ ಬಾಕಿ ಹಣಕ್ಕೆ ಒತ್ತಾಯಿಸಿತಾದರೂ, ಸರಕಾರ ಮಾತ್ರ ಇದಕ್ಕೆ ಒಪ್ಪದೆ, ಬಾಕಿ 105 ಕೋಟಿ ರೂ. ಹಣ ನೀಡಿಕೆ ಸಾಧ್ಯವಿಲ್ಲ.
ಏಪ್ರಿಲ್‌ನಿಂದ ಪಿಂಚಣಿ ಹಣವನ್ನು ಪಾವತಿ ಮಾಡುವುದಾಗಿ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದು, 105 ಕೋಟಿ ರೂ.ಗಳನ್ನು ಮರೆತು ಸರಕಾರದಿಂದ ಕೇವಲ ಎರಡು ತಿಂಗಳ ಬಾಕಿ ಹಣ ಹಾಗೂ ಮುಂದೆ ಪಿಂಚಣಿ ಹಣದ ಚಾಲ್ತಿ ಪಡೆದಿದೆ ಎಂಬುದಕ್ಕಷ್ಟೇ ಪಾಲಿಕೆ ತೃಪ್ತಿ ಪಟ್ಟುಕೊಳ್ಳುವಂತೆ ಆಗಿದೆ.
* ಅಮರೇಗೌಡ ಗೋನವಾರ