Advertisement
ಕಾರ್ಕಳ ತಾಲೂಕು ವ್ಯಾಪ್ತಿಯ ದಲಿತ ಕುಂದು ಕೊರತೆ ಸಭೆಯು ಜು. 20ರಂದು ತಹಶೀಲ್ದಾರ್ ಪುರಂದರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಂದುಕೊರತೆ ಸಭೆ
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಪ.ಜಾತಿ, ಪ.ಪಂಗಡದ 8 ಕಾಲನಿಗಳಿದ್ದು ಈ ಎಲ್ಲ ಕಾಲನಿಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಈ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಯ ಕುಂದುಕೊರತೆ ಸಭೆಯನ್ನು ಪುರಸಭೆಯಲ್ಲಿ ನಡೆಸುವಂತೆ ಶ್ರೀನಿವಾಸ್ ಕಾರ್ಲ ಒತ್ತಾಯಿಸಿದರು.
Related Articles
ಪಳ್ಳಿಯಲ್ಲಿ ಜನರಿಗೆ ಸಮಸ್ಯೆಯಾಗುವ ಗಣಿಗಾರಿಕೆಗೆ ಪರವಾನಿಗೆ ನೀಡಿರುವ ಬಗ್ಗೆ ಅಣ್ಣಪ್ಪ ನಕ್ರೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹಿಂದಿನ ಕುಂದುಕೊರತೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಲಾಗಿದ್ದು ಗಣಿಗಾರಿಕೆಯಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಗಿತ್ತು. ಕಳೆದ 4 ವರ್ಷಗಳಿಂದ ವಿರೋಧ ಮಾಡುತ್ತಾ ಬಂದಿದ್ದರೂ ಗಣಿಗಾರಿಕೆಗೆ ಅಧಿಕೃತವಾಗಿ ಪರವಾನಿಗೆ ನೀಡಲಾಗಿದೆ. ಹಾಗಾದರೆ ಕುಂದುಕೊರತೆ ಸಭೆ ನಡೆಸುವ ಅಗತ್ಯ ಏನು ಎಂದು ಪ್ರಶ್ನಿಸಿದರು.
Advertisement
ಅಂಬೇಡ್ಕರ್ ಪ್ರತಿಮೆಗೆ ಆಗ್ರಹತಾಲೂಕು ಕೇಂದ್ರ ಬಳಿಯ ಬಂಡೀಮಠದಲ್ಲಿರುವ ಅಂಬೇಡ್ಕರ್ ಪ್ರತಿಮೆಯು ಕುಸಿಯುವ ಹಂತದಲ್ಲಿದ್ದು ಹೊಸ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವ ಬಗ್ಗೆ ಹಿಂದಿನ ಸಭೆಯಲ್ಲಿಯೇ ಪುರಸಭೆಗೆ ಮನವಿ ಮಾಡಲಾಗಿತ್ತಾದರೂ ಅಧಿಕಾರಿಗಳು ಈ ವರೆಗೂ ಈ ಬಗ್ಗೆ ಗಮನಹರಿಸಿಲ್ಲ ಎಂದು ಅಣ್ಣಪ್ಪ ನಕ್ರೆ ಅವರು ಹೇಳಿದರು. ಈ ಬಗ್ಗೆ ಮಾತನಾಡಿದ ತಹಶೀಲ್ದಾರ್ ಕೂಡಲೇ ಅಂಬೇಡ್ಕರ್ ಪ್ರತಿಮೆ ಪುನರ್ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ರಸ್ತೆಗೆ ಮನವಿ
ಮಾಳ ಪಂಚಾಯತ್ ವ್ಯಾಪ್ತಿಯ ಹನೆಗುಂಡಿ, ಮುಗ್ಗೇರ್ಕಳ ಪ್ರದೇಶದಲ್ಲಿ ಪ.ಜಾತಿ, ಪ.ಪಂಗಡದ ಸುಮಾರು 25ರಿಂದ 30 ಮನೆಗಳಿದ್ದು ಸೂಕ್ತ ರಸ್ತೆ ಇಲ್ಲದೆ ಸಂಕಷ್ಟಪಡುವಂತಾಗಿದೆ. ಒಂದೆರಡು ಪ.ಜಾತಿ ಪ.ಪಂಗಡದ ಅನುದಾನದಿಂದ ಈ ರಸ್ತೆ ಅಭಿವೃದ್ಧಿ ಶೀಘ್ರದಲ್ಲಿ ನಡೆಯಬೇಕಾಗಿದೆ ಎಂದು ವಿಟuಲ ಗೌಡ ಹೇಳಿದರು. ಅಲ್ಲದೆ ಮಾಳದಲ್ಲಿರುವ ಸಮಾಜ ಮಂದಿರಕ್ಕೆ ಹೋಗಲು ಸೂಕ್ತ ರಸ್ತೆಯ ಅಗತ್ಯವಿದೆ ಹಾಗೂ ಈ ಸಮಾಜ ಮಂದಿರದ ಸುತ್ತಲಿನ ಜಾಗ ಅತಿಕ್ರಮಣವಾಗಿದೆ ಎಂದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ತಹಶೀಲ್ದಾರ್ ಅವರು ನೀಡಿದರು. ಹೆಬ್ರಿಯಲ್ಲಿ ಕುಂದುಕೊರತೆ ಸಭೆಗೆ ಆಗ್ರಹ
ಹೆಬ್ರಿ ಪ್ರತ್ಯೇಕ ತಾಲೂಕು ಕೇಂದ್ರವಾಗಿರುವುದರಿಂದ ಹೆಬ್ರಿಯ ಜನರ ಅನುಕೂಲಕ್ಕಾಗಿ ಹೆಬ್ರಿಯಲ್ಲಿ ಕುಂದುಕೊರತೆ ಸಭೆ ನಡೆಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಅವರು ಹೆಬ್ರಿಯಲ್ಲಿ ಎಲ್ಲ ಇಲಾಖೆಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿಯೇ ಕುಂದುಕೊರತೆ ಸಭೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಬ್ರಿಯಲ್ಲಿ ಸಭೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಹೆಬ್ರಿ ತಹಶೀಲ್ದಾರ್ ಸತೀಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವಿಜಯಕುಮಾರ್ ಅವರು ಸ್ವಾಗತಿಸಿ, ವಂದಿಸಿದರು. 94ಸಿ ಯಡಿ ದಲಿತರಿಗೆ ಅನ್ಯಾಯ
ನಲ್ಲೂರು ಪಂಚಾಯತ್ ವ್ಯಾಪ್ತಿಯಲ್ಲಿ 94ಸಿ ಅಡಿಯಲ್ಲಿ ಇತರ ಸಮುದಾಯದವರಿಗೆ ಹಕ್ಕುಪತ್ರ ನೀಡಲಾಗಿದ್ದು ದಲಿತ ಸಮುದಾಯದವರಿಗೆ ಈ ವರೆಗೂ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಅಣ್ಣಪ್ಪ ನಕ್ರೆ ಹೇಳಿದರು. ಈ ಸಂದರ್ಭ ಸ್ಪಷ್ಟನೆ ನೀಡಿದ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು 94ಸಿ ಅಡಿ ಅರ್ಜಿ ಸಲ್ಲಿಸಲಾದ ಸ್ಥಳವು ಡೀಮ್ಡ್ ಫಾರೆಸ್ಟ್ ಆಗಿದ್ದು ಈಗಾಗಲೇ ನೀಡಲಾಗಿರುವ ಹಕ್ಕುಪತ್ರಗಳನ್ನು ರದ್ದುಗೊಳಿಸಲಾಗುವುದು ಎಂದರು. ನಿರ್ಮಾಣವಾಗದ ಅಂಬೇಡ್ಕರ್ ಭವನ
ಕಾರ್ಕಳದ ಕಾಬೆಟ್ಟುವಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1.60 ಲಕ್ಷ ರೂ. ಅನುದಾನ ಮಂಜೂರಾಗಿ 2 ವರ್ಷಗಳು ಕಳೆದಿದ್ದರೂ ಇನ್ನೂ ಟೆಂಡರ್ ಪ್ರಕ್ರಿಯೆ ನಡೆಯದಿರುವ ಬಗ್ಗೆ ರಮೇಶ್ ಪೆರ್ವಾಜೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರು, ಇದು ಸರಕಾರದ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆಯಾಗಿದ್ದು ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದೆ ಎಂದರು.