Advertisement

ಕನ್ನಡ ಶಾಲೆಗಳನ್ನು ನಿರ್ಲಕ್ಷಿಸುವುದು ತರವಲ್ಲ: ಎಡ್ವಿನ್‌

04:00 AM Jul 17, 2017 | Team Udayavani |

ಬೆಳ್ಮಣ್‌: ಸರಕಾರ ಕನ್ನಡ ಶಾಲೆಗಳನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಅನುದಾನಿತ ಶಾಲೆಗಳಿಗೆ ಸರಿಯಾಗಿ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಕನ್ನಡದ ಬಗ್ಗೆ ಅಭಿಮಾನ ಸರಕಾರಕ್ಕಿಲ್ಲ. ಒಂದು ವೇಳೆ ಇದ್ದಿದ್ದರೆ ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿಲ್ಲ. ಎಂದರಲ್ಲದೆ ಸಾಹಿತ್ಯ ಉಳಿಯಬೇಕಾದರೆ ಸಾಹಿತ್ಯದ ಔತಣ ಬಡಿಸಬೇಕು. ಕನ್ನಡ ಭಾಷೆಗೆ ಯಾವುದೇ ಜಾತಿ ಧರ್ಮ ಎಂಬುದು ಇಲ್ಲ ಎಂದು ಬೆಳ್ಮಣ್‌ ಸಂತ ಜೋಸೆಫರ ಧರ್ಮಕೇಂದ್ರದ ಪ್ರಧಾನ ಧರ್ಮಗುರು ರೆ|ಫಾ| ಎಡ್ವಿನ್‌ ಡಿ’ಸೋಜಾ ಹೇಳಿದರು.

Advertisement

ಅವರು  ರವಿವಾರ ಬೆಳ್ಮಣ್‌ ಸಂತ ಜೋಸೆಫರ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕ, ಬೆಳ್ಮಣ್‌ ಹೋಬಳಿ ಮತ್ತು ಬೆಳ್ಮಣ್‌ ವಲಯ ಪತ್ರಕರ್ತರ ಬಳಗ, ರೋಟರಿ ಕ್ಲಬ್‌ ಬೆಳ್ಮಣ್‌, ಹಾಗೂ ಕನ್ನಡ ಸಾಹಿತ್ಯ ಸಂಘ ಇವರ ಸಹಭಾಗಿತ್ವದಲ್ಲಿ  ಪತ್ರಿಕಾ  ದಿನಾಚರಣೆಯ ಪ್ರಯುಕ್ತ  ನಡೆದ ಬೆಳ್ಮಣ್‌ ಹೋಬಳಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ನೇಮಕಾತಿ ಮಾಡಲಿ
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ‌ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಕನ್ನಡದ ಅಭಿಮಾನ ಸರಕಾರಕ್ಕೆ ಇಲ್ಲ. ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರ ಶಿಕ್ಷಕರ ನೇಮಕಾತಿಯನ್ನು ಮಾಡಬೇಕಾಗಿದೆ. ಕನ್ನಡದ ಬಗ್ಗೆ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ತರಗತಿಗೊಬ್ಬ ಶಿಕ್ಷಕರಿರುವ ಶಾಲೆಗೆ ಮಕ್ಕಳನ್ನು ಸೇರಿಸುವ ಅನಿವಾರ್ಯತೆ ಇದೆ ಎಂದರು.

ಸಾಹಿತ್ಯದ ಮಾಧ್ಯಮ
ಸಾಹಿತಿ ಈದು ಕೊಪ್ಪಳ ಶ್ರೀಕರ್‌ ಭಟ್‌ ಮರಾಠೆ ಅವರು ಸಮ್ಮೇಳನ ಆಧ್ಯಕ್ಷತೆ ವಹಿಸಿ ಮಾತನಾಡಿ, ಮಾಧ್ಯಮಗಳಲ್ಲಿ ಸುದ್ದಿಗಳ ಪರಿಶೀಲನೆ, ಪುನಃ ಪರಿಶೀಲನೆ, ಪರಾಮರ್ಶೆಗಳಿಗೆ ಅಲ್ಲಿ ಸಮಯವೂ ಇಲ್ಲ; ವ್ಯವಧಾನವೂ ಇಲ್ಲ. ಒಂದೇ ಸಾಲಿನ ಸುದ್ದಿ “ಬ್ರೇಕಿಂಗ್‌ ನ್ಯೂಸ್‌’ನ ಮೂರು ತುಂಡುಗಳಾಗಿ ಪ್ರಸಾರಗೊಳ್ಳುವುದೇ ಅಲ್ಲಿನ ಕೌತುಕವೆಂದು ಅಭಿಪ್ರಾಯ ಪಟ್ಟರು.

ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಆಶಯ ಭಾಷಣ ಮಾಡಿದರು.  ಬೆಳ್ಮಣ್‌ ಗ್ರಾಮ ಪಂಚಾಯತ್‌  ಸದಸ್ಯ ಪ್ರಭಾಕರ್‌ ಶೆಟ್ಟಿ ಕನ್ನಡ ಧ್ವಜಾರೋಹಣಗೆ„ದರು.

Advertisement

ಉಪಸ್ಥಿತಿ
ಉಡುಪಿ ಜಿಲ್ಲಾ ಕಸಪಾ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹೋಬಳಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಜಿಲ್ಲಾ ಪಂಚಾಯತ್‌ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ತಾಲೂಕು ಪಂಚಾಯತ್‌ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಉದ್ಯಮಿ ಗ್ರೆಗರಿ ಮಿನೇಜಸ್‌, ಬೆಳ್ಮಣ್‌ ರೋಟರಿ ಕ್ಲಬ್‌ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿ ನಾರಾಯಣ ಮಣಿ, ಅಲ್ವಿನ್‌ ಅಗೇರಾ, ಸಾಹಿತ್ಯ ಸಂಘದ ಅಧ್ಯಕ್ಷೆ ದೀಕ್ಷಾ, ಕಾರ್ಯದರ್ಶಿ ಸೃಷ್ಟಿ ಶೆಟ್ಟಿ ಮತ್ತಿತರಿದ್ದರು. 

ಸಮ್ಮೇಳನದ ಸಂಚಾಲಕ ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಅರುಣ್‌ ರಾವ್‌ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿ, ಬೆಳ್ಮಣ್‌ ಹೋಬಳಿ ಕಾರ್ಯದರ್ಶಿ ಹರಿಪ್ರಸಾದ್‌ ನಂದಳಿಕೆ ವಂದಿಸಿದರು. 
ಬಳಿಕ ಮಾಧ್ಯಮ ಮತ್ತು ಸಾಹಿತ್ಯ ಹಾಗೂ ಮಾಧ್ಯಮ ಮತ್ತು ಕೃಷಿರಂಗ ಕುರಿತು  ಎರಡು ಗೋಷ್ಠಿಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next