Advertisement

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

06:13 PM Nov 26, 2024 | Team Udayavani |

ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳ ಬಾಯಾರಿಕೆ ನೀಗಿಸುವ ನಗರದ ಮಧ್ಯ ಭಾಗದ ಕೋಟೆಯ ಬಳಿಯ 3.03 ಎಕರೆ ವಿಸ್ತೀರ್ಣದ ಮಾದರ ಹೊಂಡ (ಕೆರೆ) ಸರಿಯಾದ ನಿರ್ಹಣೆಯಿಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆರೆ ತುಂಬ ಕಸದ ರಾಶಿ ಜೊತೆಗೆ ಆಳೆತ್ತರದ ಗಿಡ-ಗಂಟಿಗಳು ಮತ್ತು ಪಾಚಿ ಬೆಳೆದು ಕೊಳಚೆ ಪ್ರದೇಶವಾಗಿಗೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹಿಂದೆಲ್ಲ ಕೆರೆ ಈ ಭಾಗದ ಜನ, ಜಾನುವಾರುಗಳಿಗೆ ನೀರಿನ ಬವಣೆ ಈಡೇರಿಸುತ್ತಿತ್ತು. ಆದರೆ ಕೆಲ ವರ್ಷಗಳಿಂದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕೆರೆ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ಒತ್ತುವರಿ ಸಮಸ್ಯೆ: ಈ ಕೆರೆ ಜಾಗೆಯನ್ನು ಒತ್ತುವರಿ ಮಾಡಲಾಗುತ್ತಿದೆ. ಒಂದು ಭಾಗದಲ್ಲಿ ಕೆರೆ ಸಂಪೂರ್ಣ ಒತ್ತುವರಿಯಾಗುತ್ತಿದ್ದು, ಇನ್ನೊಂದು ಕಡೆ ಕೆರೆ ತುಂಬೆಲ್ಲ ಗಿಡಗಂಟಿಗಳು ಬೆಳೆದಿವೆ. ಸರ್ಕಾರ ಅಂತರ್ಜಲ ಮಟ್ಟವನ್ನು ಸುಧಾರಿಸಲು ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿ ಅವುಗಳನ್ನು ಪುನಶ್ಚೇತನ ಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಈ ಕೆರೆ ಮಾತ್ರ ಯಾವುದೇ ಅಭಿವೃದ್ಧಿಯಾಗಿಲ್ಲ. ಇದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ
ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಸ್ಥಳೀಯರ ನಿರ್ಲಕ್ಷ್ಯವೂ ಕಾರಣ: ಸ್ಥಳೀಯ ಕೆಲ ನಿವಾಸಿಗಳು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡದೇ ಹೆಚ್ಚಾಗಿ ಕೆರೆಯ ದಡದಲ್ಲೇ ಎಸೆಯುತ್ತಿದ್ದಾರೆ. ಇದರಿಂದ ಕೆರೆ ಮತ್ತಷ್ಟು ಮಲೀನವಾಗುತ್ತದೆ. ಕೆರೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ತೋರಬೇಕಿದ್ದ ಸ್ಥಳೀಯರೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ಅನುದಾನವಿದೆ ಅಭಿವೃದ್ಧಿಯಾಗಿಲ್ಲ: ಈ ಕೆರೆ ನಗರಸಭೆ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿ ಹೊಣೆ ಅವರದೇ ಆಗಿದೆ. ಆದರೆ ಇಲ್ಲಿವರೆಗೂ ಯಾವುದೇ ಅಭಿವೃದ್ಧಿಗೆ ಮುಂದಾಗಿಲ್ಲ. ಕೆರೆ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಕಳೆದ 2020-21ನೇ ಸಾಲಿನ 15ನೇ ಹಣಕಾಸಿನಲ್ಲಿ 54 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಕೆರೆ ಸ್ವಚ್ಛಗೊಳಿಸುವುದು ಹಾಗೂ ಚರಂಡಿ ನೀರು ಕೆರೆಗೆ ಬಾರದ ರೀತಿ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿದೆ. ಆದರೆ ಇಲ್ಲಿವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇನ್ನೂ 2021-22ನೇ ಸಾಲಿನಲ್ಲಿ 84 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

Advertisement

ಕಾಣದಂತಾದ ಕೆರೆ: ಕೆರೆ ಅಂಗಳದ ತುಂಬೆಲ್ಲ ಕಸದ ರಾಶಿ ಬೆಳೆದಿದೆ. ಸುತ್ತಮುತ್ತಲಿನ ಪ್ರದೇಶದ ಚರಂಡಿ ನೀರು ಸಂಪೂರ್ಣ ಕೆರೆಯಲ್ಲಿ ಸಂಗ್ರಹವಾಗುತ್ತಿದೆ. ಇದರಿಂದಾಗಿ ಕೆರೆಯ ತುಂಬಾ ಪಾಚಿ ಬೆಳೆದಿದೆ. ನೀರಿನ ಬದಲು ಸಂಪೂರ್ಣ ಪಾಚಿ ಗಿಡ ಕಾಣತೊಡಗಿದೆ. ಅಲ್ಲದೇ ಕೆರೆಯಲ್ಲಿ ಇಳಿಯಲಾಗದ ಸ್ಥಿತಿಯಿದೆ. ಕೆರೆಯ ನೀರನ್ನು ಹಲವು ವರ್ಷಗಳ ಹಿಂದೆ ಜನರು ಬಳಸುತ್ತಿದ್ದರು. ಜಾನುವಾರುಗಳಿಗೆ ನೀರು ಕುಡಿಸಲಾಗುತ್ತಿತ್ತು. ಆದರೀಗ ಸುತ್ತ ಮನುಷ್ಯರು ಸುಳಿಯುವುದು ಇರಲಿ ಹಂದಿ, ನಾಯಿಗಳು ಸಹ ಸುಳಿಯದ ದುಸ್ಥಿತಿಗೆ ತಲುಪಿಬಿಟ್ಟಿದೆ ಹೊಂಡ. ಹೊಂಡದ ಅಭಿವೃದ್ಧಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಮಾದರ ಕೆರೆ ಅಭಿವೃದ್ಧಿಗೆ ಈಗಾಗಲೇ ಅನುದಾನವಿದೆ. ಟೆಂಡರ್‌ ಕೂಡ ಕರೆದು ನಿಗದಿಪಡಿಸಲಾಗಿತ್ತು. ಆದರೆ ಸ್ಥಳೀಯರ ಸಹಕಾರ ಸಿಗದೇ ಅಭಿವೃದ್ಧಿ ಕುಂಠಿತವಾಗಿದೆ. ಈ ಕುರಿತು ಪೌರಾಯುಕ್ತರ ಗಮನಕ್ಕೆ ತಂದು ಕೆರೆ ಅಭಿವೃದ್ಧಿಗೆ ಯೋಜನೆ
ರೂಪಿಸಲಾಗುವುದು. ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು.
●ಎಸ್‌.ಬಿ. ಚಲವಾದಿ, ನಗರಸಭೆ
ಕಿರಿಯ ಅಭಿಯಂತರ

*ಮಂಜುನಾಥ ಎಚ್‌. ಕುಂಬಳೂರ

 

Advertisement

Udayavani is now on Telegram. Click here to join our channel and stay updated with the latest news.

Next