Advertisement

ಕಸದ ರಾಶಿ ವಿಲೇವಾರಿಗೆ ಶಹಾಬಾದ ನಗರಸಭೆ ನಿರ್ಲಕ್ಷ್ಯ

07:14 AM Jan 15, 2019 | Team Udayavani |

ಶಹಾಬಾದ: ನಗರದ ರಸ್ತೆ ಪಕ್ಕದಲ್ಲೆಡೆ ಕಸದ 12ನಾಯಿ, ದನಗಳ ಹಿಂಡು. ಇದು ಶಹಾಬಾದ ನಗರಸಭೆ ವ್ಯಾಪ್ತಿಯ ಇಂಡಿಯಾ ಲಾಡ್ಜ್ ಮುಂಭಾಗದಲ್ಲಿ ಕಂಡು ಬರುವ ದೃಶ್ಯ. ನಗರದ ರಾಘವೇಂದ್ರ ಮಂದಿರದ ಪಕ್ಕದ ರಸ್ತೆ ಹಾಗೂ ಇಂಡಿಯಾ ಲಾಡ್ಜ್ ಮುಂಬಾಗದ ಪೆಟ್ರೋಲ್‌ ಪಂಪ್‌ ಪಕ್ಕದಲ್ಲಿ ಕಸ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದೆ. ಇದನ್ನು ಕೇಳುವರು ಇಲ್ಲದಂತಾಗಿದೆ.

Advertisement

ಬೀದಿ ವ್ಯಾಪಾರಿಗಳು, ಹೋಟೆಲ್‌, ಲಾಡ್ಜ್ ಹಾಗೂ ಕಲ್ಯಾಣಮಂಟಪದವರು ಕಸವನ್ನು ಮನಬಂದಂತೆ ರಸ್ತೆ ಮೇಲೆ ಎಸೆಯುತ್ತಿದ್ದಾರೆ. ಸಾಕಷ್ಟು ಕಸ ಸಂಗ್ರಹವಾಗಿದ್ದರೂ ವಿಲೇವಾರಿ ಮಾಡುವಲ್ಲಿ ನಗರಸಭೆ ಮುಂದಾಗುತ್ತಿಲ್ಲ. ಇದರಿಂದ ಕಸ ಕೊಳೆತು ದುರ್ನಾತ ಬೀರುತ್ತಿದ್ದು, ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ಸಾರ್ವಜನಿಕರು, ಪ್ರಯಾಣಿಕರು ನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾದರೂ ಕಸದ ವಿಲೇವಾರಿ ಸಮರ್ಪಕ ರೀತಿಯಲ್ಲಿ ಮಾಡುತ್ತಿಲ್ಲ. ಇದರಿಂದ ನಗರದ ಅಂದ ಹಾಳಾಗುತ್ತಿದೆ. ಸ್ವಚ್ಛತೆ ಎಂಬುದು ಮಾಯವಾಗುತ್ತಿದೆ.

ನಗರಸಭೆಯಿಂದ ಗುತ್ತಿಗೆ ಆಧಾರಿತ ಕಾರ್ಮಿಕರನ್ನು ತೆಗೆದುಕೊಳ್ಳಲಾಗಿದೆ. ಆದರೆ ಇಲ್ಲಿ ಸ್ವಚ್ಛತೆ ಮಾಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಹಂದಿಗಳು ಎಲ್ಲೆಂದರಲ್ಲಿ ಓಡಾಡಿಕೊಂಡಿವೆ. ಇನ್ನೂ ಬೀಡಾಡಿ ದನಗಳು ಕಸದ ತೊಟ್ಟಿಯಲ್ಲಿ ಕಂಡ ಆಹಾರಕ್ಕಾಗಿ ಹಂದಿಗಳೊಂದಿಗೆ ಪೈಪೋಟಿಗಿಳಿಯುತ್ತವೆ. ಇದರಿಂದ ನಗರದ ತುಂಬೆಲ್ಲ ಕಸ ಹರಡಿ ಅಂದ ಹಾಳಾಗುತ್ತಿದೆ. ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಇಲ್ಲಿನ ಜನರು ನಿತ್ಯ ನರಕಯಾತನೆ ಪಡುವಂತಾಗಿದೆ. ನಗರದಲ್ಲಿ ಬಿದ್ದಿರುವ ಕಸದ ರಾಶಿ ವಿಲೇವಾರಿ ಮಾಡುವರೇ ಎಂದು ಕಾದು ನೋಡಬೇಕಾಗಿದೆ.

ಪ್ರವೀಣ ರಾಜನ್‌, ಉಪನ್ಯಾಸಕರು.
ನಗರಸಭೆ ಅಧಿಕಾರಿಗಳು ನಗರದಲ್ಲಿ ಸುತ್ತು ಹಾಕುವುದೇ ಇಲ್ಲ. ಹವಾನಿಯಂತ್ರಿತ ಕೊಠಡಿಯಲ್ಲೇ ಕುಳಿತು ಹೋಗುತ್ತಿದ್ದಾರೆ. ನಗರದಲ್ಲಿರುವ ಸಮಸ್ಯೆ ಅರಿಯಬೇಕಾದರೆ ನಗರದಲ್ಲಿ ಸುತ್ತು ಹಾಕಿ ತುಂಬಿರುವ ಕಸ ವಿಲೇವಾರಿ ಮಾಡಿಸಲು ಮುಂದಾಗಲಿ. ಬೀದಿಗೆ ಬಿದ್ದಿರುವ ಕಸಕ್ಕೆ ಕಡಿವಾಣ ಹಾಕಿಸಲಿ.

Advertisement

 ಬಡಾವಣೆ ನಿವಾಸಿಗಳು
ಶ್ರೀಮಂತರ ಹಾಗೂ ಪ್ರಬಲ ರಾಜಕೀಯ ಮುಖಂಡರ ವಾರ್ಡ್‌ಗಳ ಸ್ವಚ್ಛತೆಗೆ ಮುಂದಾಗುವ ಅಧಿಕಾರಿಗಳು ಪೆಟ್ರೋಲ್‌ ಪಂಪ್‌ ಹಾಗೂ ರಾಘವೇಂದ್ರ ಮಂದಿರದ ಪಕ್ಕದ ರಸ್ತೆ ಮೇಲೆ ಕಸ ಬಿದ್ದರೂ ವಿಲೇವಾರಿ ಮಾಡಿಸಲು ಮುಂದಾಗುತ್ತಿಲ್ಲ. ಕಸ ದಾಟಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಪೌರಾಯುಕ್ತರೇ ಈ ಕಡೆ ಗಮನಹರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next