ಸುರಪುರ: ರೈತರಿಗೆ ಮತ್ತು ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಶೋಷಿತ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶನಿವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ರಸ್ತೆ ತಡೆಯಿಂದ ಕೆಲ ಸಮಯ ಸಂಚಾರದಲ್ಲಿ ಸಮಸ್ಯೆ ಉಂಟಾಯಿತು. ನಂತರ ಪೊಲೀಸರ ಮನವಿ ಮೇರೆಗೆ ರಸ್ತೆ ತಡೆ ಕೈ ಬಿಟ್ಟು ಪ್ರತಿಭಟನೆ ಮುಂದುವರೆಸಿದರು. ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಸರ್ಕಾರದ ಮುದ್ರಾ, ಹೈನುಗಾರಿಕೆ, ಕುರಿ ಸಾಕಾಣಿಕೆ ಸೇರಿದಂತೆ ಹಿಂದುಳಿದ ವರ್ಗದ ವಿವಿಧ ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವಲ್ಲಿ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಆಯ್ಕೆಯಾದ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡದೆ ಹೋದರೆ ಸರ್ಕಾರ ಯೋಜನೆಗಳನ್ನು ಯಾಕೆ ಅನುಷ್ಠಾನಗೊಳಿಸಬೇಕು. ಸರ್ಕಾರದ ಅನೇಕ ಯೋಜನೆಗಳು ಬಡವರಿಗೆ ತಲುಪುತ್ತಿಲ್ಲ. ಇದಕ್ಕೆ ಬಾಂಕ್ ಮತ್ತು ಅನುಷ್ಠಾನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ದೂರಿದರು.
ಸಾಲ ಮನ್ನಾ ಕೆಲಸವನ್ನು ಮುಂದಿಟ್ಟುಕೊಂಡು ಬ್ಯಾಂಕ್ ಅಧಿಕಾರಿಗಳು ತಪ್ಪು ಮಾಹಿತಿ ನೀಡುವ ಮೂಲಕ ರೈತರು ಮತ್ತು ಯೋಜನೆಯ ಫಲಾನುಭವಿಗಳ ದಾರಿ ತಪ್ಪಿಸುತ್ತಿದ್ದಾರೆ. ಯೋಜನೆ ಫಲಾನುಭವಿಗಳಿಗೆ ಸಾಲ ನೀಡದೆ ಉದ್ದೇಶ ಪೂರ್ವಕವಾಗಿ ಸತಾಯಿಸುತ್ತಿದ್ದಾರೆ. ಸಾಲ ಮನ್ನಾ ಯೋಜನೆ ಲಾಭ ಪಡೆದ ರೈತರಿಗೆ ಮರು ಸಾಲ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ರೈತರು ಆತಂಕಕೀಡಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಯೋಜನೆ ಫಲಾನುಭವಿ ಮತ್ತು ರೈತರಿಗೆ ಮರು ಸಾಲ ವಿತರಣೆ ಮಾಡಲು ಕಟ್ಟುನಿಟ್ಟಾಗಿ ಆದೇಶಿಸುವುದು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ವಾರದ ಒಳಗಾಗಿ ಪರಿಹರಿಸಬೇಕು. ಇಲ್ಲವಾದಲ್ಲಿ ಸುರಪುರ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ರಾಮು ಪೂಜಾರಿಯವರಿಗೆ ಸಲ್ಲಿಸಿದರು.
ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ದೇವಪ್ಪ ದೇವರಮನಿ, ಕೃಷ್ಣಾ ದಿವಾಕರ, ಕೇಶಣ್ಣ ದೊರೆ, ಶ್ರೀನಿವಾಸ ನಾಯಕ, ತಿರುಪತಿ ದೊರೆ, ಬಸವರಾಜ. ಅಂಬ್ರೇಶ ವೆಂಕಟಾಪುರ ಇದ್ದರು.