ಸುರಪುರ: ಹಸನಾಪುರ ಕಾಡಾ ಉಪ ವಿಭಾಗ-2ರಲ್ಲಿ ನೀರಾವರಿ ಕಾಲುವೆಗಳ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶೋಷಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಹಸನಾಪುರ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಪೊಲೀಸರ ಮಧ್ಯಸ್ಥಿಕೆಯಿಂದ ರಸ್ತೆ ತಡೆ ಕೈಬಿಟ್ಟು ಪ್ರತಿಭಟನೆ ಮುಂದುವರಿಸಿದರು. ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಘೋಷಣೆ ಕೂಗಿದರು.
ಹೋರಾಟ ನೇತೃತ್ವ ವಹಿಸಿದ್ದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಹಸನಾಪುರದ ಸಬ್ ಡಿವಿಜನ್-2ರ ಅಧಿಕಾರಿಗಳು ಸರ್ಕಾರಿ ಯೋಜನೆಗಳನ್ನು ನಿಯಮನುಸಾರವಾಗಿ ಮಾಡುತ್ತಿಲ್ಲ. ರೈತರಿಗೆ ಸಿಗಬೇಕಾಗಿದ್ದ ನೀರಾವರಿ ಸೌಲಭ್ಯ ಸಮರ್ಪಕ ತಲುಪಿಸುತ್ತಿಲ್ಲ ಎಂದು ಆರೋಪಿಸಿದರು.
ಎಫ್‌ಐಸಿ ಕಾಲುವೆ ಕಾಮಗಾರಿ, ಬಸಿ ಗಾಲುವೆ, ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ. ರಸ್ತೆ ಕಾಮಗಾರಿಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಳಪೆ ಮಟ್ಟದ ಕಾಮಗಾರಿ ಮಾಡಿ ಬೋಗಸ್ ಬಿಲ್ ತೆಗೆದುಕೊಂಡಿದ್ದಾರೆ. ಅಗತ್ಯ ಇರುವ ಕೆಲ ಕಾಮಗಾರಿಗಳ ಟೆಂಡರ್ ಕರೆಯದೇ ಸರ್ಕಾರದ ಆದೇಶ ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆಂದು ದೂರಿದರು. ಒಕ್ಕೂಟದ 5 ಬೇಡಿಕೆ ಈಡೇರಿಸಿ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಕಚೇರಿ ಎದುರು ಅಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕೆಬಿಜೆಎನ್ನೆಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು. ಕಂದಾಯ ನಿರೀಕ್ಷಕ ಗುರುಬಸಪ್ಪ ಮನವಿ ಸ್ವೀಕರಿಸಿದರು. ಒಕ್ಕೂಟದ ಮುಖಂಡರಾದ ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ದೇವಪ್ಪ ದೇವರಮನಿ, ಬಸವರಾಜ ಕವಡಿಮಟ್ಟಿ, ಕೇಶಣ್ಣ ದೊರೆ, ತಿರುಪತಿ ದೊರೆ ಇದ್ದರು.