Advertisement
ಮೃತ ಶ್ರೀಕಾಂತ್ ಅವರದು ತೀರಾ ಬಡ ಕುಟುಂಬ. ಕಂಗಾಲಾದ ಕುಟುಂಬ ಗುತ್ತಿಗೆದಾರ ರಿಂದ ಪರಿಹಾರ ಪಡೆಯಲು ಪ್ರಯತ್ನಿಸಿತು. ವಕೀಲರೊಬ್ಬರ ನೆರವು ಪಡೆಯಿತು. ನ್ಯಾಯಾಲಯದಲ್ಲಿ ದಾವೆ ದಾಖಲಾದರೂ ಕಾರ್ಮಿಕರ ಇಲಾಖೆಯಿಂದ ಪರಿಹಾರ ದೊರೆಯಲಿಲ್ಲ. ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ಬಗ್ಗೆಯೂ ಮಾಹಿತಿ ಸಿಗಲಿಲ್ಲ. ಆ ಬಳಿಕ ಕುಟುಂಬವು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿತ್ತು.
ರಕ್ಷಣಾ ಪ್ರತಿಷ್ಠಾನವು ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಅರ್ಜಿ ಸಲ್ಲಿಸಿದಾಗ ಗುತ್ತಿಗೆದಾರರ ವಿರುದ್ಧ ಕಾರ್ಮಿಕ ನಷ್ಟ ಪರಿಹಾರ ಕಾಯಿದೆಯ ಅಡಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂತು. ಗುತ್ತಿಗೆದಾರರು ಕಾರ್ಮಿಕ ಇಲಾಖೆಯೊಂದಿಗೆ ತಮ್ಮ ಹೆಸರು ನೋಂದಣಿ ಮಾಡಿಕೊಂಡಿಲ್ಲ ಎಂಬುದು ಕೂಡ ತಿಳಿಯಿತು. ಪ್ರಾಸಿಕ್ಯೂಶನ್ ವೈಫಲ್ಯದಿಂದ ಪ್ರಕರಣದಲ್ಲಿ ಅಪಾದಿತರು ಖುಲಾಸೆಗೊಂಡಿದ್ದರು ಎಂದು ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದರು. ಶ್ರೀಕಾಂತ್ ತಾಯಿ ಅಪ್ಪಿ, ಪತ್ನಿ ಮೊನಿಕಾ, ಸಹೋದರಿ ಮಾಲತಿ, ಪ್ರತಿಷ್ಠಾನದ ಕಾರ್ಯಕರ್ತ ರಾದ ನ್ಯಾಯವಾದಿ ವಿಜಯಲಕ್ಷ್ಮೀ, ಕೆ. ಮುರಲೀಧರ್ ಉಪಸ್ಥಿತರಿದ್ದರು. ಜಾಗೃತಿ ಉಂಟಾಗಲಿ
ಕಟ್ಟಡ ಕಾರ್ಮಿಕರ ಹೆಸರನ್ನು ಗುತ್ತಿಗೆದಾರರು ಅಥವಾ ಕಾರ್ಮಿಕರೇ ವೈಯಕ್ತಿಕವಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡರೆ ಅವಘಡ ನಡೆದ ಸಂದರ್ಭದಲ್ಲಿ ಪರಿಹಾರ ದೊರೆಯುತ್ತದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಅನೇಕ ಕಾರ್ಮಿಕರಿಗೆ ಈ ಬಗ್ಗೆ ಮಾಹಿತಿಯೂ ಇಲ್ಲ. ಇಲಾಖೆಯಲ್ಲಿ ನೋಂದಣಿ ಪ್ರಕ್ರಿಯೆ ಬಹಳ ಸರಳವಾಗಿದೆ. ಇದೇ ರೀತಿ ಕಟ್ಟಡದಿಂದ ಬಿದ್ದು ಮೃತಪಟ್ಟು ಯಾವುದೇ ಪರಿಹಾರ ದೊರೆಯದ ಪಣಂಬೂರು ಮತ್ತು ಬಂಟ್ವಾಳದ ಇಬ್ಬರು ಕಾರ್ಮಿಕರ ಪ್ರಕರಣ ಕೂಡಪ್ರತಿಷ್ಠಾನದ ಬಳಿ ಇದೆ. ಇಂತಹ ಘಟನೆಗಳು ಹೆಚ್ಚುತ್ತಿದ್ದು, ಬಡ ಕುಟುಂಬಗಳು ಕಂಗಾಲಾಗುತ್ತಿವೆ. ಈ ಬಗ್ಗೆ ಜಾಗೃತಿ ಮಾಡಿಸುವ ಅನಿವಾರ್ಯತೆ ಇದೆ ಎಂದು ಡಾ| ಶ್ಯಾನುಭಾಗ್ ಹೇಳಿದರು.