ಚಿಂಚೋಳಿ: ತಾಲೂಕಿನಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟಿರುವ ಬಾಲಕ-ಬಾಲಕಿಯರ ಮೆಟ್ರಿಕ್ ನಂತರದ ಕಾಲೇಜು, ಆಶ್ರಮ ಶಾಲೆ, ವಸತಿ ನಿಲಯಗಳಿಗೆ ಮೂಲಸೌಕರ್ಯ ಒದಗಿಸುವುದು ಹಾಗೂ ವಸತಿ ನಿಲಯ ದುರಸ್ತಿಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಕರ್ನಾಟಕ ಗ್ರಾಮೀಣ
ಮೂಲಸೌಕರ್ಯಗಳ ಅಭಿವೃದ್ಧಿ ನಿಗಮ ನಿರ್ಲಕ್ಷ್ಯತನ ವಹಿಸಿದೆ.
ಹಿಂದುಳಿದ ಪ್ರದೇಶದ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಒಟ್ಟು 12 ಸರಕಾರಿ ವಸತಿ ನಿಲಯಗಳಿವೆ. ಇವುಗಳಲ್ಲಿ ಏಳು ಮೆಟ್ರಿಕ್ ಪೂರ್ವ ಬಾಲಕರ-ಬಾಲಕಿಯರ ವಸತಿ ನಿಲಯ, ಮೂರು ಆಶ್ರಮ ವಸತಿ ಶಾಲೆ, ಒಂದು ಬಾಲಕರ ಕಾಲೇಜು ವಸತಿ ನಿಲಯ, ಒಂದು ವೃತ್ತಿಪರ ಮಹಿಳಾ ವಸತಿ ನಿಲಯಗಳಿವೆ.
ಮೆಟ್ರಿಕ್ ಪೂರ್ವ ಬಾಲಕರ-ಬಾಲಕಿಯರ ವಸತಿ ನಿಲಯದಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 530, ಆಶ್ರಮ ವಸತಿ ಶಾಲೆಯಲ್ಲಿ 370, ಬಾಲಕರ ಕಾಲೇಜು ವಸತಿ ನಿಲಯದಲ್ಲಿ 60, ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ಒಟ್ಟು ವಿದ್ಯಾರ್ಥಿನಿಯರ ಸಂಖ್ಯೆ 50. ಹೀಗೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಒಟ್ಟು 1015 ವಿದ್ಯಾರ್ಥಿಗಳಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಕ್ಕಳು ವಸತಿ ನಿಲಯದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುವುದಕ್ಕಾಗಿ ಮಕ್ಕಳಿಗೆ ಶುದ್ದ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ಫ್ಯಾನ್, ಬಿಸಿ ನೀರು, ಬಟ್ಟೆ ಒಗೆದುಕೊಳ್ಳಲು ಕಾಂಪೌಂಡ್ ಗೋಡೆ ನಿರ್ಮಾಣ, ಹೆಚ್ಚುವರಿ ಕೋಣೆ ಹಾಗೂ ವಸತಿ ನಿಲಯಗಳ ದುರಸ್ತಿಗಾಗಿ ಮತ್ತು ನವೀಕರಣಗೊಳಿಸುವುದಕ್ಕಾಗಿ ಚಿಂಚೋಳಿ ಬಾಲಕಿಯರ ವಸತಿ ನಿಲಯಕ್ಕೆ 20.80 ಲಕ್ಷ ರೂ., ಬಾಲಕರ ವಸತಿ ನಿಲಯ ಕುಂಚಾವರಂಗೆ 29 ಲಕ್ಷ ರೂ., ಸರಕಾರಿ ಆಶ್ರಮ ಶಾಲೆ ಚಿಂಚೋಳಿ(ಚಂದಾಪೂರ) 25.09 ಲಕ್ಷ ರೂ., ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಚಿಂಚೋಳಿಗೆ 14.75 ಲಕ್ಷ ರೂ., ಕುಂಚಾವರಂ ಗಡಿಭಾಗದಲ್ಲಿ ಇರುವ ವಂಟಿಚಿಂತಾ ಆಶ್ರಮ ವಸತಿ ಶಾಲೆಗೆ 17.67ಲಕ್ಷ ರೂ., ಐನಾಪುರ ಸರಕಾರಿ ಬಾಲಕರ ವಸತಿ ನಿಲಯಕ್ಕೆ 40.86 ಲಕ್ಷ ರೂ., ಸರಕಾರಿ ಆಶ್ರಮ ವಸತಿ ಶಾಲೆ ಪಾಲತ್ಯಾತಾಂಡಕ್ಕೆ 68.05 ಲಕ್ಷ ರೂ. ನೀಡಲಾಗಿದೆ. ಒಟ್ಟು 2.56 ಕೋಟಿ ರೂ. ಸಮಾಜ ಕಲ್ಯಾಣ ಇಲಾಖೆಗೆ ಹೆಚ್.ಕೆ.ಆರ್.ಡಿ.ಬಿ.ಯಿಂದ 2017-18ನೇ ಸಾಲಿನಲ್ಲಿ ಅನುದಾನ ನೀಡಲಾಗಿದೆ. ಈ ಎಲ್ಲ ವಸತಿ ನಿಲಯಗಳ ಕಾಮಗಾರಿಗಳನ್ನು ಶಾಸಕರ ಅನುಮತಿ ಮೇರೆಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ವಹಿಸಿಕೊಡಲಾಗಿದೆ.
ಕಳೆದ ಒಂದು ವರ್ಷಗಳಿಂದ ವಸತಿ ನಿಲಯಗಳ ದುರಸ್ತಿ ಕಾರ್ಯ ನಡೆದಿದ್ದು ಇನ್ನು ಪೂರ್ಣಗೊಂಡಿಲ್ಲ. ಮಳೆಗಾಲದಲ್ಲಿ ಕೆಲವು ವಸತಿ ನಿಲಯಗಳು ಸಂಪೂರ್ಣ ಸೋರುತ್ತಿರುವುದರಿಂದ ಮಕ್ಕಳಿಗೆ ರಾತ್ರಿ ಮಲಗಲು, ಹಗಲು
ಕುಳಿತುಕೊಳ್ಳಲು ತೊಂದರೆ ಪಡುವಂತಾಗಿತ್ತು.
ಈಗ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಎಲ್ಲ ವಸತಿ ನಿಲಯಗಳು ಜೂನ್4ರಿಂದ ಪ್ರಾರಂಭಗೊಳ್ಳಲಿವೆ. ಹಳ್ಳಿಯ ಕೂಲಿ ಕಾರ್ಮಿಕರ ಬಡವರ ಮಕ್ಕಳು ವಸತಿ ನಿಲಯಗಳಲ್ಲಿ ಹೇಗೆ ಜೀವನ ಸಾಗಿಸಬೇಕು ಮತ್ತು ಅಭ್ಯಸಿಸಬೇಕು ಎಂಬುದನ್ನು ಜನಪ್ರತಿನಿಧಿಗಳು ಕಣ್ತೆರೆದು ನೋಡಬೇಕಾಗಿದೆ. ನಿಗಮದ ಹೆಸರಿನಲ್ಲಿ ಕೆಲವು ಪಕ್ಷಗಳ ಕಾರ್ಯಕರ್ತರೆ ಕೆಲಸ ಮಾಡುತ್ತಿದ್ದಾರೆನ್ನುವ ಆರೋಪಗಳು ಕೇಳಿಬಂದಿವೆ.
ಸರಕಾರಿ ವಸತಿ ನಿಲಯಗಳ ದುರಸ್ತಿ ಕೆಲಸಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ವಹಿಸಿ ಕೊಡಲಾಗಿದೆ. ಒಂದು ವರ್ಷವಾದರೂ ಇನ್ನು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕೆಲಸಗಳು ಸಂಪೂರ್ಣ ಕಳಪೆಮಟ್ಟದಿಂದ ನಡೆಯುತ್ತಿವೆ. ಕೆಲವು ವಸತಿ ನಿಲಯಗಳಲ್ಲಿ ಕೋಣೆಗಳ ಕೊರತೆ ಇದೆ ಎಂದು ಈಗಾಗಲೇ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮತ್ತು ಜಿಪಂ ಸಿಇಒಗೆ ವರದಿ ನೀಡಲಾಗಿದೆ. ತಾಪಂ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಪ್ರಭುಲಿಂಗ ಬುಳ್ಳ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ವಸತಿ ನಿಲಯಗಳ ದುರಸ್ತಿಗೋಸ್ಕರ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನೀಡಲಾಗಿದೆ. ಇವುಗಳ ಅಭಿವೃದ್ಧಿ ಇನ್ನು ಪೂರ್ಣಗೊಂಡಿಲ್ಲ ಇವುಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ. ಮಹಮ್ಮದ ಹುಸೇನ ನಾಯಕೋಡಿ, ತಾಲೂಕು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ
ಶಾಮರಾವ ಚಿಂಚೋಳಿ