Advertisement

ಮಾಣಿ ಸಂತೆ ಮಾರುಕಟ್ಟೆ ನೂತನ ಕಟ್ಟಡ ಕಾಮಗಾರಿ ನಿಧಾನ, ಕಳಪೆ

11:13 PM May 07, 2019 | Team Udayavani |

ವಿಟ್ಲ : ಈ ಪರಿಸರದ ಪ್ರಥಮ ಸಂತೆ ಮಾರುಕಟ್ಟೆಯೂ ನೂರು ವರ್ಷಗಳ ಇತಿಹಾಸವನ್ನೂ ಹೊಂದಿರುವ ಮಾಣಿ ಸಂತೆ ಮಾರುಕಟ್ಟೆ ಇದೀಗ ಸೊರಗಿ ಹೋಗಿದೆ. ಈ ಸಂತೆಗೆ 50 ಲಕ್ಷ ರೂ. ವೆಚ್ಚದ ನೂತನ ಕಟ್ಟಡದ ಭಾಗ್ಯ ಒದಗಿ ಬಂದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು, ವ್ಯಾಪಾರಿಗಳು ದೂರುತ್ತಿದ್ದಾರೆ.

Advertisement

ನೂರು ವರ್ಷಗಳ ಇತಿಹಾಸ
ಮಾಣಿ ಸಂತೆಗೆ ನೂರು ವರ್ಷಗಳ ಇತಿಹಾಸವಿದೆ. ಹಳೆಯ ಕಟ್ಟಡವಿದೆ. ಸುತ್ತಲೂ ಮರಗಳಿವೆ. ಇತ್ತೀಚೆಗೆ ಮರಬಿದ್ದು ಇರುವ ಕಟ್ಟಡಕ್ಕೆ ಭಾರೀ ಹಾನಿಯುಂಟಾಗಿತ್ತು. ಆದರೆ ಅದೇ ಕಟ್ಟಡದಲ್ಲಿಯೇ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಇಲ್ಲಿಗೆ ಹಾಸನ, ಪುತ್ತೂರು ಸಹಿತ ಗ್ರಾಮಾಂತರ ಪ್ರದೇಶದ ವ್ಯಾಪಾರಿಗಳು ಬಂದು ವ್ಯಾಪಾರ- ವಹಿವಾಟು ನಡೆಸುತ್ತಿದ್ದಾರೆ. ಮಾಣಿ ಪೇಟೆ ಅಭಿವೃದ್ಧಿ ಹೊಂದುತ್ತಿದ್ದಂತೆ ಸಂತೆ ಮಾರು ಕಟ್ಟೆಯಲ್ಲಿ ಖರೀದಿ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗಿದೆ.

50 ಲಕ್ಷ ರೂ. ಅನುದಾನ
ನೀರು ಸರಿಯಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಸಂತೆ ಮಾರುಕಟ್ಟೆ ಮೇಲೆ ಮರ ಬಿದ್ದು, ಕಟ್ಟಡದ ರಾಡ್‌ಗಳು ಶಿಥಿಲಗೊಂಡಿತ್ತು. ಇದನ್ನೆಲ್ಲ ಮನಗಂಡು ಕಟ್ಟಡ ಅಭಿವೃದ್ಧಿಪಡಿಸಬೇಕೆಂಬ ಹಲವು ಜನರ ಬೇಡಿಕೆ ಮೇರೆಗೆ ಎಪಿಎಂಸಿ ವತಿಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು. ನಾಲ್ಕು ತಿಂಗಳ ಹಿಂದೆ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಅವರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಮೈಸೂರು ಮೂಲದ ಕಂಪೆನಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ಆರಂಭವಾಗಿ, ಮುಂದುವರಿದಿದೆ.

ಗಮನಹರಿಸಲು ಆಗ್ರಹ
ಕಟ್ಟಡದ ಪಂಚಾಂಗಕ್ಕೆ ತುಂಬಿಸಿದ ಮಣ್ಣಿಗೆ ನೀರು ಹಾಕಿಲ್ಲ. ಹಾಕಿದ ಮಣ್ಣನ್ನು ಸಮತಟ್ಟು ಮಾಡಿಲ್ಲ. ಕಾಂಕ್ರೀಟ್‌ ನೀರು ಕಂಡಿಲ್ಲ. ಕಾಂಕ್ರೀಟ್‌ ಒಳಗಡೆಯಿರಬೇಕಾಗಿದ್ದ ಕಬ್ಬಿಣದ ರಾಡ್‌ಗಳು ಎದ್ದು ಕಾಣುತ್ತಿವೆ ಎಂಬ ಆರೋಪ ಸ್ಥಳೀಯ ವ್ಯಾಪಾರಿಗಳಿಂದ ಕೇಳಿಬರುತ್ತಿದೆ. ಕಾಮಗಾರಿ ಕಳಪೆಯಾಗಿದೆ. ಸಾರ್ವಜನಿಕರು ಮಾಡಿದ ಮನವಿಗೆ ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ. ಹಲವು ವರ್ಷಗಳ ಬಳಿಕ ಅನುದಾನ ಬಿಡುಗಡೆಗೊಂಡು ಕಾಮಗಾರಿ ನಡೆಯುತ್ತಿದ್ದರೂ ಪ್ರಯೋಜನವಾಗಲಾರದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ತತ್‌ಕ್ಷಣ ಗಮನ ಹರಿಸಬೇಕೆಂದು ಮಾಣಿ ಸಂತೆ ಪ್ರೇಮಿಗಳು ಆಗ್ರಹಿಸಿದ್ದಾರೆ.

ಅವಧಿ ಐದೂವರೆ ತಿಂಗಳು
ಕಾಮಗಾರಿ ಅವಧಿ ಐದೂವರೆ ತಿಂಗಳು. ಕಾಮಗಾರಿ ಆರಂಭವಾಗಿ ಈಗಾಗಲೇ ನಾಲ್ಕು ತಿಂಗಳು ಕಳೆದಿರುವುದು ಗಮನಕ್ಕೆ ಬಂದಿದೆ. ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ಮಾತನಾಡಿ, ಪರಿಶೀಲಿಸಿ, ಕ್ರಮಕೈಗೊಳ್ಳುತ್ತೇವೆ.
– ಭಾರತಿ ಪಿ.ಎಸ್‌. ಕಾರ್ಯದರ್ಶಿ, ಕೃಷ್ಯುತ್ಪನ್ನ ಮಾರುಕಟ್ಟೆ, ಬಂಟ್ವಾಳ (ಎ.ಪಿ.ಎಂ.ಸಿ.)

Advertisement
Advertisement

Udayavani is now on Telegram. Click here to join our channel and stay updated with the latest news.

Next