ಮೈಸೂರು: ಮತದಾನ ನಮ್ಮ ಕರ್ತವ್ಯ ಎಂದು ಭಾವಿಸುವುದಕ್ಕಿಂತ, ಮತದಾನ ಪ್ರಜಾಪ್ರಭುತ್ವವನ್ನು ಬಲಪಡಿಸಲು ಇರುವ ಹಕ್ಕು ಎಂದು ತಿಳಿದು ಮತದಾನಕ್ಕೆ ಆದ್ಯತೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುರೇಶ್ ಕೆ. ವಂಟಿಗೊಡಿ ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಜಿಲ್ಲಾಡಳಿತದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಲು ಅರ್ಹರಾಗಿದ್ದು, ಚುನಾವಣೆಯ ದಿನದಂದು ಯಾವುದೇ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ, ಮೊದಲು ಮತದಾನಕ್ಕೆ ಆದ್ಯತೆ ನೀಡಿ ಮತದಾನ ಮಾಡಿ ಎಂದರು.
ಯೋಗ್ಯರನ್ನು ಅರಿಸಿ: ಉತ್ತಮ ನಾಯಕರನ್ನು ಆಯ್ಕೆ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮತದಾನ ಮಾಡಬೇಕು. ಕಳೆದ ಚುನಾವಣೆಗಳ ಶೇಕಡವಾರು ಮತದಾನವನ್ನು ಗಮನಿಸಿದರೆ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಿದೆ. ಒಳ್ಳೆಯ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ. ಯುವಜನತೆ ತಮ್ಮ ಸುತ್ತ ಮುತ್ತಲಿನ ಜನರಿಗೂ ಸಹ ಮತದಾನದ ಮಹತ್ವ, ಅನಿವಾರ್ಯತೆ, ಹಾಗೂ ಪಾವಿತ್ರ್ಯತೆಯ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಿ, ಸಮಾಜದಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಎಂದರು.
ಬಹುಮಾನ: ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಹೊಸದಾಗಿ ನೋಂದಣಿ ಮಾಡಿಕೊಂಡ ಮತದಾರರಿಗೆ ಗುರುತಿನಚೀಟಿ ವಿತರಿಸಿದರು. ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಪೂರ್ಣಿಮಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.