ಶಿರಸಿ: ನಗರದ ಗಟಾರ, ಚರಂಡಿಗಳನ್ನು ಇನ್ನೂ ನಗರಸಭೆ ಹೂಳೆತ್ತಿಲ್ಲ. ವಿನಾಕಾರಣ ನಗರಸಭೆ ನಿರ್ಲಕ್ಷ್ಯ ಮಾಡುತ್ತಿದೆ. ಮಳೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆ ಅಧಿಕಾರಿಗಳ ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮಳೆಗಾಲ ಸಮೀಪ ಬಂದರೂ ಯಾವುದೇ ಪೂರ್ವ ತಯಾರಿ ನಡೆದಿಲ್ಲ ಎಂಬ ಅಸಮಾಧಾನ ಕೂಡ ವ್ಯಕ್ತವಾಯಿತು.
ನಗರದಲ್ಲಿ ಒಟ್ಟು 38 ಕಿ.ಮೀ. ಮುಖ್ಯ ಗಟಾರ ಇದೆ. ಇವುಗಳ ಹೂಳೆತ್ತಬೇಕಿತ್ತು. ಈವರೆಗೆ ಕೇವಲ 7 ಕಿಮೀ. ಮಾತ್ರ ಸ್ವಚ್ಛತಾ ಕಾರ್ಯ ನಡೆದಿದೆ. ಇಷ್ಟು ಮೀನಮೇಷ ಯಾಕೆ, ಆಮೆ ನಡಿಗೆ ಸರಿಯಲ್ಲ ಎಂದ ಕಾಗೇರಿ, ಲಯನ್ಸ್ ನಗರ, ಧುಂಡಶಿನಗರ, ಪ್ರಗತಿ ನಗರ, ಮುಸ್ಲಿಂ ಗಲ್ಲಿಗಳಲ್ಲಿ ಈಗಾಗಲೇ ಗಟಾರ ಕಟ್ಟಿ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದೂ ಹೇಳಿದರು.
ನಗರ ಪ್ರದೇಶದ ಅಂಬಾಗಿರಿ, ಗಾಂಧಿನಗರ, ವಿದ್ಯಾನಗರ, ಕಾಮತ್ ಕಾಲೋನಿ ಸೇರಿದಂತೆ 16 ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮುಸ್ಲಿಂ ಗಲ್ಲಿಯ ಬಾವಿ ಕುಸಿಯತೊಡಗಿದೆ. ಬಾಪೂಜಿ ನಗರದ ಬಾವಿ ಕಲುಶಿತಗೊಂಡಿದೆ. 3 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇನ್ನೆರಡು ಟ್ಯಾಂಕರ್ ಸಿದ್ಧಪಡಿಸಿಕೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಖಾಸಗಿ ಬಾವಿಯಲ್ಲಿ ನೀರಿದ್ದರೂ ಸಹ ಅದನ್ನು ಪಡೆದು ಸಾರ್ವಜನಿಕರಿಗೆ ನೀಡಲಾಗುವುದು ಎಂದೂ ಹೇಳಿದರು.
ಕೆಂಗ್ರೆ, ಅಘನಾಶಿನಿ ನದಿಯಲ್ಲಿ ನಗರಕ್ಕೆ ನೀರು ಸಂಗ್ರಹಿಸುವ ಮಾರಿಗದ್ದೆಯಲ್ಲೂ ನೀರು ಖಾಲಿ ಆಗಿದೆ. ಹತ್ತಾರು ಸಂಘಟನೆಗಳು ಮಾನವೀಯತೆ ಮೇಲೆ ನಗರದ ಜನತೆಗೆ ನೀರನ್ನು ಪೂರೈಸುತ್ತಿವೆ. ಪ್ರತಿ ಕಾಲೋನಿಗಳ ನಿವಾಸಿಗಳು ತಮ್ಮ ಭಾಗದ ಕರೆ, ಬಾವಿಗಳ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ಲಕ್ಷಿಸದೇ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದೂ ಸೂಚಿಸಿದರು
ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ಪೌರಾಯುಕ್ತೆ ಅಶ್ವಿನಿ ಬಿ.ಎಂ., ಇಂಜಿನಿಯರ್ ಜಹಗೀರದಾರ ಇದ್ದರು.