Advertisement

ಕೇರಳದವರು ನಮ್ಮ ಗಡಿ ದಾಟಲು ನೆಗೆಟಿವ್‌ ಕಡ್ಡಾಯ

03:50 PM Apr 22, 2021 | Team Udayavani |

ಎಚ್‌.ಡಿ.ಕೋಟೆ: ಕರ್ನಾಟಕ – ಕೇರಳ ಗಡಿಪ್ರದೇಶ ಬಾವಲಿ ಚೆಕ್‌ಪೋಸ್ಟ್‌ಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಬುಧವಾರ ಖುದ್ದು ಭೇಟಿ ನೀಡಿ ಕೋವಿಡ್‌ ನಿಯಂತ್ರಣ ಕ್ರಮಗಳ ಬಗ್ಗೆ ಪರಿಶೀಲಿಸಿದರು.

Advertisement

ಇದೇ ವೇಳೆ ಮಾತನಾಡಿದ ಸಚಿವರು,ಕೇರಳದಲ್ಲಿ ಕೋವಿಡ್‌ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗಡಿ ಪ್ರವೇಶಿಸುವ ಎಲ್ಲರೂ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ನೆಗೆಟಿವ್‌ ಇರುವುದನ್ನು ತರಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ವರದಿ ಇಲ್ಲದೆ ಬರುವವರನ್ನು ವಾಪಸ್‌ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ಕೋವಿಡ್‌ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಸುಮಾರು 120ರಿಂದ 130 ವಾಹನಗಳು ಮಾತ್ರ ಈಗ ಬರುತ್ತಿವೆ. ಎಲ್ಲ ವಾಹನಗಳಲ್ಲಿರುವ ಪ್ರಯಾಣಿಕರ ಕೋವಿಡ್‌ ವರದಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಸ್ಯಾಂಪಲ್‌ ಸಂಗ್ರಹ ಕೇಂದ್ರ: ಕೋವಿಡ್‌ ಪರೀಕ್ಷೆ ಮಾಡಿಸದೆಯೂ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಲು ಕೇರಳ ಸರ್ಕಾರ ಗಡಿಯಲ್ಲಿ ಸ್ಯಾಂಪಲ್‌ ಸಂಗ್ರಹ ಕೇಂದ್ರವನ್ನು ಮಂಗಳವಾರದಿಂದ ತೆರೆದಿದೆ. ನಮ್ಮಲ್ಲೂ ಆ ರೀತಿ ಸ್ಯಾಂಪಲ್‌ಸಂಗ್ರಹ ಕೇಂದ್ರ ತೆರೆಯಲು ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.

ಕರ್ನಾಟಕದ ರೈತರು ಬೆಳೆದ ತರಕಾರಿ ಹೆಚ್ಚಾಗಿ ಈ ಗಡಿ ಮೂಲಕ ಕೇರಳಕ್ಕೆ ಸಾಗಣೆಯಾಗುತ್ತದೆ. ನಮ್ಮ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿದ್ದೇವೆ. ಸಾವು-ನೋವಿನ ಸಂದರ್ಭದಲ್ಲಿ ತುರ್ತಾಗಿ ಪ್ರಯಾಣಿಸಬೇಕಾದವರಿಗೂ ಸಹ ತೊಂದರೆಯಾಗದಂತೆ ಪ್ರಯಾಣಕ್ಕೆ ಸೂಕ್ತ ಅವಕಾಶ ಮಾಡಲಾಗುತ್ತಿದೆ ಎಂದರು.

Advertisement

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಿಸಲು ಕಠಿಣನಿಯಮಗಳನ್ನು ಜಾರಿ ಮಾಡಲಾಗಿದೆ. ಮೈಸೂರಿನ ಜನರು ಈ ನಿಯಮಗಳಿಗೆ ಯಾವಾಗಲೂ ಸ್ಪಂದಿಸುತ್ತಾರೆ. ಹೆಚ್ಚಿನ ಉಲ್ಲಂಘನೆ ಈ ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದು ಹೇಳಿದರು.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಯವರು ಟಫ್ ರೂಲ್ಸ್ ಜಾರಿ ಮಾಡಿದ್ದಾರೆ.ಮೈಸೂರು ಜಿಲ್ಲಾಡಳಿತ ಈ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿದೆ ಎಂದರು.ಮುಖ್ಯಮಂತ್ರಿಯವರಿಗೆ ಕೋವಿಡ್‌ ಬಂದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ರಾಜ್ಯಪಾಲರು ವಿಡಿಯೋ ಸಂವಾದದ ಮೂಲಕಎಲ್ಲ ಪಕ್ಷಗಳ ಮುಖಂಡರಿಂದ ಮಾಹಿತಿ ಪಡೆದರು.

ಈ ಸಭೆಯಲ್ಲಿ ಮುಖ್ಯಮಂತ್ರಿಯವರು,ಹಲವಾರು ಸಚಿವರು ಸಹ ಭಾಗವಹಿಸಿದ್ದಾರೆ.ರಾಜ್ಯಪಾಲರ ಈ ಸಭೆಯ ಬಗ್ಗೆ ವಿರೋಧ ಪಕ್ಷದವರು ಅಪಸ್ವರ ಎತ್ತಿರುವ ಬಗ್ಗೆ ಪತ್ರಕರ್ತರು ಕೇಳಿದಾಗ, ರಾಜ್ಯಪಾಲರ ಕ್ರಮದಲ್ಲಿ ಯಾವುದೇ ತಪ್ಪು ಇಲ್ಲ. ವಿರೋಧ ಪಕ್ಷದವರು ಕೇವಲ ವಿರೋಧಮಾಡುವುದಕ್ಕಾಗಿಯೇ ಟೀಕಿಸುತ್ತಾರೆ ಎಂದರು.

ತಪಾಸಣೆ ನಡೆಸುವ ಸಿಬ್ಬಂದಿಗೆ ರಕ್ಷಣೆ: ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಮೈಸೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲೂ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲೂಕಿನ ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಹಕಾರದೊಂದಿಗೆ ಗಡಿಭಾಗದ ತಪಾಸಣೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಆದರೆ, ತಪಾಸಣೆ ನಡೆಸುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ಇಲ್ಲದಿರುವ ಕುರಿತು ಸಚಿವರೊಡನೆ ಸಮಾಲೋಚನೆ ನಡೆಸಿ ಅಗತ್ಯವಾದ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಅನಿಲ್‌ ಚಿಕ್ಕಮಾದು,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌,ತಹಶೀಲ್ದಾರ್‌ ನರಗುಂದ್‌, ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next