ಅದು 1984. ಪುಟ್ಟಣ್ಣ ಕಣಗಾಲ್ ನಿರ್ದೇಶನದ “ಅಮೃತ ಘಳಿಗೆ’ ಚಿತ್ರ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ಆ ಚಿತ್ರ ಭರ್ಜರಿ ಯಶಸ್ಸು ಪಡೆದಿತ್ತು. ದೊಡ್ಡೇರಿ ವೆಂಕಟಗಿರಿ ರಾವ್ ಅವರು ಬರೆದ “ಅವಧಾನ’ ಕಾದಂಬರಿ ಆಧಾರಿತ ಚಿತ್ರವದು. ರಾಮಕೃಷ್ಣ, ಶ್ರೀಧರ್ ಮತ್ತು ಪದ್ಮವಾಸಂತಿ ನಟಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ “ಅಮೃತ ಘಳಿಗೆ’, ಕ್ಲಾಸಿಕ್ ಸಿನಿಮಾ ಸಾಲಿಗೆ ಸೇರಿದೆ ಎಂಬುದು ವಿಶೇಷ.
ಈಗ ಯಾಕೆ “ಅಮೃತ ಘಳಿಗೆ’ ಚಿತ್ರದ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಅದೇ ಶೀರ್ಷಿಕೆಯಡಿ ಹೊಸದೊಂದು ಸಿನಿಮಾ ಬರುತ್ತಿದೆ. ಹೌದು, “ಅಮೃತ ಘಳಿಗೆ’ ಹೆಸರಿನ ಚಿತ್ರವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ನೀತು ನಾಯಕಿಯಾಗಿ ನಟಿಸಿದ್ದಾರೆಂಬುದು ಇನ್ನೊಂದು ವಿಶೇಷ. ಇದೊಂದು ನಾಯಕಿ ಪ್ರಧಾನ ಕಥೆಯಾಗಿದ್ದು, ನೀತು ಪ್ರಮುಖ ಆಕರ್ಷಣೆ.
ಅವರಿಲ್ಲಿ ಅಮೃತ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಅಂದಹಾಗೆ, ಅಶೋಕ್ ಕೆ.ಕಡಬ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. ಇನ್ನು, ಶ್ರೀ ಬನಶಂಕರಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಎಸ್.ಎನ್.ರಾಜಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. “ಸಂಪೂರ್ಣ ಮಲೆನಾಡ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ “ಅಮೃತ ಘಳಿಗೆ’ ಒಂದು ಪಕ್ಕಾ ಸಂದೇಶ ಸಾರುವ ಸಿನಿಮಾ’ ಎನ್ನುತ್ತಾರೆ ನಿರ್ದೇಶಕರು.
ಒಂದು ಘಟನೆಯಿಂದ ಬೇಸರಗೊಂಡು, ತನ್ನ ತಂದೆಯ ಸ್ನೇಹಿತರ ಊರು ಮಲೆನಾಡಿಗೆ ಬರುವ ನಾಯಕ, ತನ್ನದ್ದೊಂದು ಫ್ಲ್ಯಾಶ್‌ಬ್ಯಾಕ್ ಕಥೆ ಹೇಳುತ್ತಾರೆ. ಅದಾದ ಬಳಿಕ ಅಲ್ಲೊಂದು ಘಟನೆ ಸಂಭವಿಸುತ್ತೆ. ಅದೇ ಚಿತ್ರದ ತಿರುವು ಎಂಬುದು ನಿರ್ದೇಶಕರ ಮಾತು. ಇದೊಂದು ವಿಧವೆಗೆ ಬಾಳು ಕೊಡುವ ಕಥೆಯಾಗಿದ್ದರೂ, ಇಲ್ಲಿ ಸಮಾಜಕ್ಕೆ ಸಾರುವ ಆಪರೂಪದ ಸಂದೇಶಗಳಿವೆ.
ಪುಟ್ಟಣ್ಣ ಕಣಗಾಲ್ ಅವರ “ಅಮೃತ ಘಳಿಗೆ’ ಚಿತ್ರಕ್ಕೂ ನೀತು ಅಭಿನಯಿಸಿರುವ ಈ “ಅಮೃತ ಘಳಿಗೆ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುವ ನಿರ್ದೇಶಕರು, “ಹೆತ್ತವರ ಮಾತು ಮೀರಿ ಮದುವೆಯಾಗುವ ಕಥಾ ನಾಯಕ, ಆ ಬಳಿಕ ಒಂದು ಇಕ್ಕಟ್ಟಿಗೆ ಸಿಲುಕಿ, ನಂತರ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ. ಅದಾದ ಮೇಲೆ ತಮ್ಮ ಹೆತ್ತವರ ಆಸೆಯನ್ನು ಹೇಗೆ ನೆರವೇರಿಸುತ್ತಾನೆ ಎಂಬುದು ಕಥಾವಸು’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.
ಪ್ರಮುಖ ಪಾತ್ರದಲ್ಲಿ ನೀತು ಕಾಣಿಸಿಕೊಂಡರೆ, ಅವರ ಜೋಡಿಯಾಗಿ ರಾಜಶೇಖರ್ ನಟಿಸಿದ್ದಾರೆ. ಉಳಿದಂತೆ ಹಿರಿಯ ಕಲಾವಿದರಾದ ದತ್ತಣ್ಣ, ಪದ್ಮವಾಸಂತಿ, ಶೃಂಗೇರಿ ರಾಮಣ್ಣ , ಸಂಗೀತ ಸೇರಿದಂತೆ ಇನ್ನು ಅನೇಕ ಕಲಾವಿದರು ನಟಿಸಿದ್ದಾರೆ. ಸುಮಾರು 25 ದಿನಗಳ ಕಾಲ ಮಲೆನಾಡಿನ ಶೃಂಗೇರಿ, ಆಗುಂಬೆ, ಹೊರನಾಡು ಭಾಗದಲ್ಲಿ ಚಿತ್ರೀಕರಿಸಲಾಗಿದೆ.
“ಅಮೃತ ಘಳಿಗೆ’ ಒಂದು ಕಮರ್ಷಿಲ್ ಮತ್ತು ಕಲಾತ್ಮಕ ನಡುವಿನ ಚಿತ್ರವಾಗಿದ್ದು, ನೀತು ಅವರಿಗೆ ಹೊಸ ಬಗೆಯ ಪಾತ್ರ ಇಲ್ಲಿ ಕೊಡಲಾಗಿದೆ. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಮೂರು ಹಾಡು ಒಂದು ಬಿಟ್‌ಗೆ ಸಂಗೀತ ನೀಡಿದ್ದಾರೆ. ಅರುಣ್‌ಕುಮಾರ್ ಛಾಯಾಗ್ರಹಣವಿದೆ. ರಾಜೇಶ್ ಬ್ರಹ್ಮಾವರ್ ನೃತ್ಯ ಸಂಯೋಜಿಸಿದ್ದಾರೆ. ಸದ್ಯಕ್ಕೆ ಡಬ್ಬಿಂಗ್ ಮುಗಿಸಿರುವ ಚಿತ್ರತಂಡ, ಸೆನ್ಸಾರ್‌ಗೆ ಹೋಗಲು ಅಣಿಯಾಗುತ್ತಿದೆ.