ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಾಗಿ ರವಿವಾರ ಬೆಂಗಳೂರು ಸಹಿತ ರಾಜ್ಯದ ಹಲವು ಕೇಂದ್ರಗಳಲ್ಲಿ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೊಂದಲದ ಗೂಡಾಗಿತ್ತು ಎಂದು ಆರೋಪಿಸಲಾಗಿದೆ. ಜತೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬೆಳಗ್ಗೆ ಬರಬೇಕಾಗಿದ್ದ ಹಂಪಿ ಎಕ್ಸ್ ಪ್ರಸ್ ಅಪರಾಹ್ನ 2 ಗಂಟೆಗೆ ಆಗಮಿಸಿತು. ಹೀಗಾಗಿ ಹಲವಾರು ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲೇ ಇಲ್ಲ.
ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲವೊಂದು ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಲಾಗಿತ್ತು. ಅದರ ಬಗ್ಗೆ ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳು, ಪಾಲಕರಿಗೆ ಮಾಹಿತಿ ಸಿಗಲಿಲ್ಲ. ಕೇಂದ್ರಗಳನ್ನು ಹುಡುಕಿ ಆಗಮಿಸುವಷ್ಟರಲ್ಲಿ ವಿಳಂಬವಾಗಿತ್ತು. ಹೀಗಾಗಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಲಾಯಿತು. ಇದರಿಂದ ಆಕ್ರೋಶಗೊಂಡ ಪಾಲಕರು, ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ಕೂಡ ನಡೆಸಿದ್ದಾರೆ.
ಪರೀಕ್ಷಾ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದು ಕಡಿಮೆ. ಇಂಥ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಕೇಂದ್ರ ಬದಲಾವಣೆಯ ಮಾಹಿತಿ ನೀಡಿದ್ದರೆ ಉತ್ತಮವಾಗುತ್ತಿತ್ತು. ಇ-ಮೇಲ್ ಕಳುಹಿಸಿದ್ದು ಸರಿಯಾದ ಕ್ರಮವಾಗಿರಲಿಲ್ಲ ಎಂದು ಹಲವು ಮಂದಿ ವಿದ್ಯಾರ್ಥಿಗಳು, ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಪರೀಕ್ಷೆ ವಂಚಿತರಿಗೆ ಮತ್ತೂಂದು ಅವಕಾಶ ಕೊಡಬೇಕೆಂದೂ ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ ಹುಬ್ಬಳ್ಳಿಯಿಂದ ಮೈಸೂರಿಗೆ ಆಗಮಿಸಬೇಕಾಗಿದ್ದ ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ ಮತ್ತು ಇತರ ತೊಂದರೆಗಳಿಂದ ರವಿವಾರ ಬೆಂಗಳೂರಿಗೆ ವಿಳಂಬವಾಗಿ ಆಗಮಿಸಿತ್ತು. ಪ್ರತಿನಿತ್ಯ ಸಂಜೆ 6.20ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ 7ಕ್ಕೆ ರಾಜಧಾನಿ ಬೆಂಗಳೂರು ತಲಪುತ್ತದೆ. ಶನಿವಾರ ಹೊರಟಿದ್ದ ರೈಲು ಬಳ್ಳಾರಿ- ರಾಯದುರ್ಗ- ಚಿಕ್ಕಜಾಜೂರು- ಅರಸೀಕೆರೆ- ತುಮಕೂರು ಮಾರ್ಗವಾಗಿ ರಾಜಧಾನಿ ತಲುಪಿದೆ. ಈ ಬಗ್ಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಹಲವು ವಿದ್ಯಾರ್ಥಿಗಳು ಕೇಂದ್ರ ಮಾನವ ಸಂಪದ ಸಚಿವ ಪ್ರಕಾಶ್ ಜಾವಡೇಕರ್‌ಗೆ ಟ್ವೀಟ್ ಮಾಡಿ ಬದಲಿ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ವಿಳಂಬದ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ನೀಡಲಾಗಿತ್ತು ಎಂದು ರೈಲ್ವೇ ಇಲಾಖೆ ಸ್ಪಷ್ಟನೆ ನೀಡಿದೆ.
ಬಿಗಿ ತಪಾಸಣೆ
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎ ನಿಯಮಗಳ ಅನ್ವಯ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗಿದೆ. ಪ್ರಾಧಿಕಾರ ಸೂಚಿಸಿದ ವಸ್ತುಗಳನ್ನು ಹೊರತುಪಡಿಸಿ, ಉಳಿದವುಗಳಿಗೆ ಕಡ್ಡಾಯ ನಿಷೇಧ ಹೇರಲಾಗಿತ್ತು. 10 ನಿಮಿಷಕ್ಕಿಂತ ಹೆಚ್ಚಾಗಿ ವಿಳಂಬ ಮಾಡಿದವರಿಗೆ ಅವಕಾಶ ನಿರಾಕರಿಸಲಾಯಿತು.
ಪರೀಕ್ಷೆಗೆ ಅವಕಾಶ ಕೋರಿ ಪತ್ರ
ಹಂಪಿ ಎಕ್ಸ್‌ಪ್ರೆಸ್ ರೈಲು ವಿಳಂಬದಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ವಂಚಿತರಾದ ವಿದ್ಯಾರ್ಥಿಗಳಿಗೆ ಪುನರ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆಯುವುದಾಗಿ ನೈಋತ್ಯ ರೈಲ್ವೇ ಇಲಾಖೆ ತಿಳಿಸಿದೆ.