ನವದೆಹಲಿ: ವೈದ್ಯಕೀಯ ಪ್ರವೇಶಾತಿಗಾಗಿ ನಡೆಸುವ ನೀಟ್ (NEET) ಪರೀಕ್ಷೆ ಪ್ರಶ್ನೆ ಪತ್ರಿಕೆ ಕದ್ದಿರುವ ಇಬ್ಬರನ್ನು ಕೇಂದ್ರ ತನಿಖಾ ದಳ (CBI) ಮಂಗಳವಾರ ಬಂಧಿಸಿದೆ.
ಬಂಧಿತರಲ್ಲಿ ಒಬ್ಬರು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (ಎನ್‌ಟಿಎ) ಟ್ರಂಕ್‌ನಿಂದ ಪೇಪರ್ ಕದ್ದಿದ್ದಾರೆ. ಬಂಧಿತರನ್ನು ಪಾಟ್ನಾದ ಪಂಕಜ್ ಕುಮಾರ್ ಮತ್ತು ಹಜಾರಿಬಾಗ್‌ನ ರಾಜು ಸಿಂಗ್ ಎಂದು ಗುರುತಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಪ್ರಶ್ನೆ ಪತ್ರಿಕೆಯ ಕದ್ದು ಹಂಚುವಲ್ಲಿ ಇಬ್ಬರೂ ಭಾಗಿಯಾಗಿದ್ದರು. ಈ ತಿಂಗಳ ಆರಂಭದಲ್ಲಿ ಸಿಬಿಐ ಪ್ರಮುಖ ಆರೋಪಿ ರಾಕೇಶ್ ರಂಜನ್ ಅಲಿಯಾಸ್ ರಾಕಿಯನ್ನು ಬಿಹಾರದ ನಳಂದಾದಲ್ಲಿ ಬಂಧಿಸಿತ್ತು.
ಬಂಧಿತರಾದ ಪಂಕಜ್ ಕುಮಾರ್ ಮತ್ತು ರಾಜು ಸಿಂಗ್ ಪ್ರಕರಣದ ಪ್ರಮುಖ ಆರೋಪಿ ಸಂಜೀವ್ ಮುಖಿಯಾ ಜೊತೆ ನೇರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಪಂಕಜ್ ಕುಮಾರ್ 2017 ಬ್ಯಾಚ್‌ನ ಸಿವಿಲ್ ಇಂಜಿನಿಯರ್ ಆಗಿದ್ದು, ಈತ ಜಮ್ಶೆಡ್‌ಪುರದ ಎನ್‌ಐಟಿಯಲ್ಲಿ ಎಂಜಿಯರಿಂಗ್ ಪದವಿ ಪಡೆದಿದ್ದಾನೆ.
ಈತ ಹಜಾರಿಭಾಗ್‌ನಲ್ಲಿ ಪ್ರಶ್ನೆ ಪತ್ರಿಕೆ ಕದ್ದಿದ್ದ ಎನ್ನಲಾಗಿದೆ. ಸದ್ಯ ಆತನನ್ನು ಪಾಟ್ನಾದಲ್ಲಿ ಬಂಧಿಸಲಾಗಿದೆ. ಕಾಗದವನ್ನು ಕದ್ದು ಇತರ ಗ್ಯಾಂಗ್ ಸದಸ್ಯರಿಗೆ ರವಾನಿಸಲು ಕುಮಾರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ರಾಜು ಸಿಂಗ್‌ನನ್ನು ಸಿಬಿಐ ಬಂಧಿಸಿದೆ, ಸಿಂಗ್ ರನ್ನು ಹಜಾರಿಬಾಗ್‌ನಿಂದ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಎಫ್‌ಐಆರ್‌ಗಳ ದಾಖಲಿಸಲಾಗಿದೆ.
ನೀಟ್ ಪರೀಕ್ಷೆ ರದ್ದುಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಹಲವು ಅರ್ಜಿಗಳ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದರ ಮಧ್ಯೆಯೇ, ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಮಹತ್ವದ ಮುನ್ನಡೆ ಸಾಧಿಸಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಎನ್ನಲಾಗುವ ರಾಕೇಶ್ ರಂಜನ್ ಎಂಬಾತನನ್ನು ಬಂಧಿಸಿದ್ದರು.
ರಾಕೇಶ್ ರಂಜನ್ ಬಂಧಿಸಲು ಸಿಬಿಐ ಬಲೆ ಬೀಸಿ ಪಾಟ್ನಾ ಮತ್ತು ಕೋಲ್ಕತ್ತಾದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿತು. ಪ್ರಸ್ತುತ ಪ್ರಕರಣದಲ್ಲಿ ತನಿಖಾ ಸಂಸ್ಥೆ ಇದುವರೆಗೆ ಹನ್ನೆರಡು ಮಂದಿಯ ಬಂಧಿಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಬಂಧಿಸಲು ಸಿಬಿಐ ಸುಧಾರಿತ ತನಿಖಾ ತಂತ್ರಗಳ ಬಳಸುತ್ತಿದೆ.